ಮುಂದಿನ ಸಿಜೆಐ ಯಾರು? ಉತ್ತರಾಧಿಕಾರಿ ಹೆಸರು ಶಿಫಾರಸು ಮಾಡಿದ ಬೋಬ್ಡೆ
ನವದೆಹಲಿ, ಮಾರ್ಚ್ 24: ಸುಪ್ರೀಂಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ನ್ಯಾಯಮೂರ್ತಿ ಎನ್‌ವಿ ರಮಣ ಅವರ ಹೆಸರನ್ನು ಸಿಜೆಐ ಎಸ್‌ಎ ಬೋಬ್ಡೆ ಶಿಫಾರಸು ಮಾಡಿದ್ದಾರೆ. ಹಾಲಿ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೋಬ್ಡೆ ಅವರು ಏಪ್ರಿಲ್ 23ರಂದು ಹುದ್ದೆಯಿಂದ ನಿವೃತ್ತರಾಗಲಿದ್ದಾರೆ.
ಕಾನೂನು ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ಸಿಜೆಐ ಎಸ್.ಎ. ಬೋಬ್ಡೆ ಅವರು ನ್ಯಾ. ರಮಣ ಹೆಸರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಶಿಫಾರಸು ಮಾಡಿದ್ದಾರೆ. ನ್ಯಾ. ಎನ್‌ವಿ ರಮಣ ಅವರು ಸಿಜೆಐ ನಂತರ ಸುಪ್ರೀಂಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ. 1957ರ ಆಗಸ್ಟ್ 27ರಂದು ಜನಿಸಿರುವ ರಮಣ ಅವರ ಅವಧಿ 2022ರ ಆಗಸ್ಟ್ 26ರವರೆಗೂ ಇರಲಿದೆ.
ಸಿಜೆಐ ಎಸ್‌ಎ ಬೋಬ್ಡೆ ಅವರ ನಿವೃತ್ತಿಗೆ ಒಂದು ತಿಂಗಳು ಮುನ್ನವೇ ಕೇಂದ್ರ ಸರ್ಕಾರ ಮುಂದಿನ ಸಿಜೆಐ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ತಮ್ಮ ಉತ್ತರಾಧಿಕಾರಿಯ ಹೆಸರು ಸೂಚಿಸುವಂತೆ ಅವರಿಗೆ ತಿಳಿಸಿತ್ತು. ಮುಂದಿ ಸಿಜೆಐ ಹೆಸರನ್ನು ಶಿಫಾರಸು ಮಾಡುವಂತೆ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಬೋಬ್ಡೆ ಅವರಿಗೆ ಪತ್ರ ರವಾನಿಸಿದ್ದರು.

ನಿಯಮಾವಳಿ ಪ್ರಕ್ರಿಯೆಯ ಪ್ರಕಾರ ಸಿಜೆಐ ಹುದ್ದೆಗೆ ಏರುವ ವ್ಯಕ್ತಿಯು ಸುಪ್ರೀಂಕೋರ್ಟ್‌ನ ಅತಿ ಹಿರಿಯ ನ್ಯಾಯಮೂರ್ತಿಯಾಗಿರಬೇಕು. ಹಾಲಿ ಸಿಜೆಐ ನಿವೃತ್ತರಾಗುವ ಮುನ್ನ ಕಾನೂನು ಸಚಿವಾಲಯವು ಸೂಕ್ತ ಸಮಯದಲ್ಲಿ ನಿರ್ಗಮಿತ ಸಿಜೆಐ ಅವರಿಂದ ಮುಂದಿನ ಸಿಜೆಐ ನೇಮಕಕ್ಕೆ ಶಿಫಾರಸನ್ನು ಕೇಳುತ್ತದೆ. ಸಿಜೆಐ ಶಿಫಾರಸು ಸ್ವೀಕರಿಸಿದ ಬಳಿಕ ರಾಷ್ಟ್ರಪತಿಯವರಿಗೆ ಪ್ರಧಾನಿ ನೇಮಕಾತಿ ಸಲಹೆ ರವಾನಿಸುತ್ತಾರೆ.












Click it and Unblock the Notifications