ಜಮ್ಮು ಮತ್ತು ಕಾಶ್ಮೀರ : ಕಲಂ 35-ಎ ಅರ್ಜಿ ವಿಚಾರಣೆ ಮುಂದೂಡಿಕೆ
ನವದೆಹಲಿ, ಆಗಸ್ಟ್ 31 : ಕಲಂ 35-ಎ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜನವರಿಗೆ ಮುಂದೂಡಿದೆ. ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ನೀಡಲಾಗಿರುವ ವಿಶೇಷಾಧಿಕಾರ ಕಲಂ 35-ಎ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ.
ಶುಕ್ರವಾರ ಸುಪ್ರೀಂಕೋರ್ಟ್ ಕಲಂ 35-ಎ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ 3 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಜನವರಿಗೆ ಮೂಂದೂಡಿತು. ರಾಜ್ಯದಲ್ಲಿ ಪಂಚಾಯಿತಿ ಚುನಾವಣೆಗಳು ಇರುವ ಕಾರಣ ಅರ್ಜಿಯ ವಿಚಾರಣೆಯನ್ನು ಮೂಂದೂಡಲಾಗಿದೆ.
ವಕೀಲ ಡಿ.ಕೆ.ದುಬೆ ಅವರು ಈ ಕುರಿತು ಮಾಹಿತಿ ನೀಡಿದರು, 'ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಪಂಚಾಯಿತಿ ಚುನಾವಣೆಗಳು ಇರುವ ಕಾರಣ ಅರ್ಜಿಯ ವಿಚಾರಣೆಯನ್ನು ಮುಂದೂಡಬೇಕು ಎಂದು ಮನವಿ ಮಾಡಿತ್ತು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ' ಎಂದು ಹೇಳಿದರು.

ವಕೀಲ ವರುಣ್ ಕುಮಾರ್ ಅವರು ಈ ಕುರಿತು ಹೇಳಿಕೆ ನೀಡಿದ್ದು, 'ಸುಪ್ರೀಂಕೋರ್ಟ್ ಎಲ್ಲಾ ಅರ್ಜಿಗಳ ವಿಚಾರಣೆಯನ್ನು 2019ರ ಜನವರಿಗೆ ಮುಂದೂಡಿದೆ. ಜನವರಿ 19ರಂದು ಅರ್ಜಿಗಳ ಮುಂದಿನ ವಿಚಾರಣೆ ನಡೆಯಲಿದೆ' ಎಂದರು.
ಆಗಸ್ಟ್ 27ರಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಗಳ ವಿಚಾರಣೆ ಇತ್ತು. ಆಗ ಕಲಂ 35-ಎ ಸಿಂಧುತ್ವ ರದ್ದಾಗಿದೆ ಎಂಬ ವದಂತಿ ಹಬ್ಬಿತ್ತು. ಇದರಿಂದಾಗಿ ಜಮ್ಮು ಮತ್ತು ಕಾಶ್ಮೀರದ ಹಲವು ಜಿಲ್ಲೆಗಳಲ್ಲಿ ಸ್ವಯಂ ಘೋಷಿತ ಬಂದ್ ಆಚರಣೆ ಮಾಡಲಾಗಿತ್ತು.












Click it and Unblock the Notifications