ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಪ್ರಮಾಣವಚನ, ಯಾವೆಲ್ಲ ಖಾತೆ ಹಂಚಿಕೆ?
ಮುಂಬೈ: ಇತ್ತೀಚೆಗೆ ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ಅಧ್ಯಕ್ಷ ಹಾಗೂ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ (Sunetra Pawar) ಅವರು ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಿದರು. ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಸುನೇತ್ರಾ ಪವಾರ್ ಅವರಿಗೆ ಪದವಿ ಮತ್ತು ಪ್ರಮಾಣವಚನ ಬೋಧಿಸಿದರು. ಪ್ರಮಾಣವಚನ ಸ್ವೀಕರಿಸುವ ಮುನ್ನ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಅಜಿತ್ ಪವಾರ್ ಖಾತೆಗಳೇ ಮುಂದುವರಿಕೆ
ಪ್ರಮಾಣವಚನದ ತಕ್ಷಣವೇ ಸುನೇತ್ರಾ ಪವಾರ್ ಅವರಿಗೆ ರಾಜ್ಯ ಅಬಕಾರಿ, ಕ್ರೀಡೆ ಮತ್ತು ಯುವಜನ ಕಲ್ಯಾಣ, ಅಲ್ಪಸಂಖ್ಯಾತರ ಅಭಿವೃದ್ಧಿ ಹಾಗೂ ವಕ್ಫ್ ಖಾತೆಗಳ ಜವಾಬ್ದಾರಿ ನೀಡಲಾಗಿದೆ. ಈ ಎಲ್ಲ ಖಾತೆಗಳನ್ನೂ ಅವರ ಪತಿ ಅಜಿತ್ ಪವಾರ್ ಈ ಹಿಂದೆ ನಿರ್ವಹಿಸುತ್ತಿದ್ದರು. ಆದರೆ ಹಣಕಾಸು ಮತ್ತು ಯೋಜನಾ ಖಾತೆಗಳನ್ನು ಇದೀಗ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೇ ವಹಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಪ್ರಮಾಣವಚನಕ್ಕೂ ಮುನ್ನವೇ ಸುನೇತ್ರಾ ಪವಾರ್ ಅವರನ್ನು ರಾಜ್ಯ ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ಬಿಜೆಪಿ-ಶಿವಸೇನೆ-ಎನ್‌ಸಿಪಿ ಮಹಾಯುತಿ ಸರ್ಕಾರದಲ್ಲಿ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿ ಸ್ಥಾನದೊಂದಿಗೆ ಹಣಕಾಸು ಖಾತೆಯನ್ನೂ ಹೊಂದಿದ್ದರು. ಆದರೆ ಜನವರಿ 28ರಂದು ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಅವರು ನಿಧನರಾದರು.
ಪ್ರಧಾನಿ ಮೋದಿ ಶುಭಾಶಯ
ಸುನೇತ್ರಾ ಪವಾರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯಗಳನ್ನು ಕೋರಿದ್ದಾರೆ. "ಮಹಾರಾಷ್ಟ್ರದ ಜನರ ಕಲ್ಯಾಣಕ್ಕಾಗಿ ಅವರು ನಿಸ್ವಾರ್ಥವಾಗಿ ದುಡಿಯಲಿದ್ದಾರೆ ಮತ್ತು ದಿವಂಗತ ಅಜಿತ್ ಪವಾರ್ ಅವರ ಕನಸುಗಳನ್ನು ಸಾಕಾರಗೊಳಿಸುತ್ತಾರೆ ಎಂಬ ವಿಶ್ವಾಸ ನನಗಿದೆ" ಎಂದು ಪ್ರಧಾನಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಾರಾಮತಿಯಿಂದ ಸ್ಪರ್ಧೆ ಸಾಧ್ಯತೆ
ಪ್ರಸ್ತುತ ಸುನೇತ್ರಾ ಪವಾರ್ ಅವರು ರಾಜ್ಯ ವಿಧಾನಸಭೆ ಅಥವಾ ವಿಧಾನಪರಿಷತ್ತಿನ ಸದಸ್ಯೆಯಾಗಿಲ್ಲ. ಹೀಗಾಗಿ, ತಮ್ಮ ಪತಿ ಪ್ರತಿನಿಧಿಸಿದ್ದ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಉಪಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲೇ ಸುನೇತ್ರಾ ಪವಾರ್ ತಮ್ಮ ಚುನಾವಣಾ ರಾಜಕೀಯ ಜೀವನ ಆರಂಭಿಸಿದ್ದರು.
ಬಾರಾಮತಿಯಲ್ಲಿ ತಮ್ಮ ಅತ್ತಿಗೆ ಹಾಗೂ ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು. ನಂತರ ಅವರನ್ನು ರಾಜೀನಾಮೆ ನೀಡಿದ ಪ್ರಫುಲ್ ಪಟೇಲ್ ಸ್ಥಾನಕ್ಕೆ ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು. ಸುನೇತ್ರಾ ಪವಾರ್ ಅವರ ಉಪಮುಖ್ಯಮಂತ್ರಿಯಾಗಿ ನೇಮಕವು ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದೆ.












Click it and Unblock the Notifications