ಭಾರತದಲ್ಲಿ ಫುಡ್ ಬಿಸಿನೆಸ್ ಶುರು ಮಾಡ್ತೀದ್ದೀರಾ? ಹಾಗಾದ್ರೆ ನಿಮ್ಮ ನೆರವಿಗೆ ಬರಲಿದೆ FSSAI ಸ್ಟಾರ್ಟ್-ಅಪ್ ಸೆಲ್
ಭಾರತದಲ್ಲಿ ಸ್ವಂತ ಉದ್ಯಮ ಶುರು ಮಾಡಬೇಕು, ಅದರಲ್ಲೂ ವಿಶೇಷವಾಗಿ ರುಚಿಕರವಾದ ತಿನಿಸುಗಳ ಆಹಾರ ಉದ್ಯಮ ಪ್ರಾರಂಭಿಸಬೇಕು ಎಂಬುದು ಹಲವರ ಕನಸಾಗಿರುತ್ತದೆ. ಆದರೆ, ಇಂದಿನ ಕಾಲದಲ್ಲಿ ಕೇವಲ ಬಂಡವಾಳ ಮತ್ತು ಉತ್ತಮ ಅಡುಗೆ ಕೌಶಲವಿದ್ದರೆ ಮಾತ್ರ ಉದ್ಯಮದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ.
ಸರ್ಕಾರದ ಕಠಿಣ ನಿಯಮಗಳು, ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳ ಪರಿಶೀಲನೆ ಹಾಗೂ ವಿಶೇಷವಾಗಿ ಎಫ್‌ಎಸ್‌ಎಸ್‌ಎಐ (FSSAI - ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ) ನಂತಹ ಪ್ರಾಧಿಕಾರಗಳಿಂದ ಅಧಿಕೃತ ಅನುಮತಿ ಪಡೆಯುವುದು ಹೊಸ ಉದ್ಯಮಿಗಳಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತದೆ.

ಆಹಾರವನ್ನು ಪ್ಯಾಕ್ ಮಾಡುವುದು ಹೇಗೆ? ಲೇಬಲ್ ಮೇಲೆ ಏನಿರಬೇಕು? ಗುಣಮಟ್ಟದ ಮಾನದಂಡಗಳೇನು? ಎಂಬೆಲ್ಲಾ ಗೊಂದಲಗಳಿಗೆ ಇದೀಗ ಅಧಿಕೃತ ಪರಿಹಾರ ಸಿಕ್ಕಿದೆ ನೋಡಿ. ಹೊಸ ಉದ್ಯಮಿಗಳಿಗೆಂದೇ ಎಫ್‌ಎಸ್‌ಎಸ್‌ಎಐ ಇದೀಗ ಪ್ರತ್ಯೇಕವಾದ ಎಫ್‌ಎಸ್‌ಎಸ್‌ಎಐ ಸ್ಟಾರ್ಟ್-ಅಪ್ ಸೆಲ್ (FSSAI Start-Up Cell) ಒಂದನ್ನ ಆರಂಭಿಸುತ್ತಿದೆ.
FSSAI ಸ್ಟಾರ್ಟ್-ಅಪ್ ಸೆಲ್: ಹೊಸ ಉದ್ಯಮಿಗಳಿಗೆ ವರದಾನ
ಆಹಾರ ಉದ್ಯಮಕ್ಕೆ ಹೊಸದಾಗಿ ಕಾಲಿಡುವ ನವೋದ್ಯಮಿಗಳಿಗೆ ಎಫ್‌ಎಸ್‌ಎಸ್‌ಎಐ ನಿಯಮಗಳು ಮತ್ತು ಪರವಾನಗಿ ಪಡೆಯುವ ಕಾನೂನು ಪ್ರಕ್ರಿಯೆಗಳು ಸಾಮಾನ್ಯವಾಗಿ ಕಷ್ಟದಂತೆ ಕಾಣುತ್ತವೆ. ಈ ಎಲ್ಲ ಅಡೆತಡೆಗಳನ್ನ ನಿವಾರಿಸುವ ನಿಟ್ಟಿನಲ್ಲಿ ಇದೇ ನವೆಂಬರ್ ತಿಂಗಳಿನಿಂದ ಎಫ್‌ಎಸ್‌ಎಸ್‌ಎಐ ಈ ಮೀಸಲಾದ 'ಸ್ಟಾರ್ಟ್-ಅಪ್ ಸೆಲ್' ಅನ್ನ ಕಾರ್ಯಗತಗೊಳಿಸುತ್ತಿದೆ.
ಈ ಸೆಲ್‌ನ ಪ್ರಮುಖ ಉದ್ದೇಶ, ಉದಯೋನ್ಮುಖ ಆಹಾರ ಉದ್ಯಮಗಳಿಗೆ ಸರ್ಕಾರದ ನಿಯಂತ್ರಣಾ ಅಗತ್ಯತೆಗಳನ್ನ ಸುಲಭವಾಗಿ ಅರ್ಥಮಾಡಿಕೊಳ್ಳಲು ನೆರವಾಗುವುದು ಮತ್ತು ಅವರು ಕಾನೂನಿನ ಚೌಕಟ್ಟಿನಲ್ಲಿ ಉದ್ಯಮ ನಡೆಸಲು ಸೂಕ್ತ ಮಾರ್ಗದರ್ಶನ ನೀಡುವುದಾಗಿದೆ.
ಆಹಾರ ಉದ್ಯಮದ ಪರವಾನಗಿ ಮತ್ತು ನಿಯಮಗಳ ಕುರಿತು ಸಮಗ್ರ ಮಾಹಿತಿ
ಈ ಹೊಸ ಸೆಲ್ ಮೂಲಕ, ಸ್ಟಾರ್ಟ್-ಅಪ್‌ಗಳಿಗೆ ಆಹಾರ ಉದ್ಯಮದ ಪರವಾನಗಿ, ಆನ್‌ಲೈನ್ ನೋಂದಣಿ ಪ್ರಕ್ರಿಯೆ, ಉತ್ಪನ್ನದ ಗುಣಮಟ್ಟದ ಮಾನದಂಡಗಳು ಮತ್ತು ಆಹಾರದ ವರ್ಗೀಕರಣದ ಬಗ್ಗೆ ಎ ಟು ಝೆಡ್ ಮಾಹಿತಿಯನ್ನ ಒದಗಿಸಲಾಗುತ್ತದೆ.
ಕೇವಲ ಲೈಸೆನ್ಸ್ ಮಾತ್ರವಲ್ಲದೆ, ಪ್ಯಾಕೆಟ್‌ಗಳ ಮೇಲಿನ ಲೇಬಲಿಂಗ್, ಜಾಹೀರಾತುಗಳಲ್ಲಿ ನೀಡುವ ಭರವಸೆಗಳು, ಉತ್ಪನ್ನದ ಲ್ಯಾಬ್ ಟೆಸ್ಟಿಂಗ್, ಆಮದು-ರಫ್ತು ನಿಯಮಗಳು ಮತ್ತು ಸ್ವಿಗ್ಗಿ-ಝೊಮ್ಯಾಟೋದಂತಹ ಇ-ಕಾಮರ್ಸ್ ವೇದಿಕೆಗಳಲ್ಲಿ ಮಾರಾಟ ಮಾಡುವಾಗ ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳ ಕುರಿತು ಉದ್ಯಮಿಗಳು ತಮ್ಮ ಎಲ್ಲ ಸಂದೇಹಗಳನ್ನ ಬಗೆಹರಿಸಿಕೊಳ್ಳಬಹುದು.
ಪ್ರತಿ ಬುಧವಾರ ಆನ್‌ಲೈನ್ ನೆರವು: FSSAI ಮಾರ್ಗಸೂಚಿಗಳು ಸುಲಭ ಲಭ್ಯ
ಎಫ್‌ಎಸ್‌ಎಸ್‌ಎಐ ಪ್ರಕಟಣೆಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಉದ್ಯಮಿಗಳು ಪ್ರತಿ ಬುಧವಾರ ಈ ಸ್ಟಾರ್ಟ್-ಅಪ್ ಸೆಲ್ ಅನ್ನಾ ಸುಲಭವಾಗಿ ಸಂಪರ್ಕಿಸಬಹುದು. ಇದಕ್ಕಾಗಿ ವಿಶೇಷ ಆನ್‌ಲೈನ್ ಸೆಷನ್ ಆಯೋಜಿಸಲಿದ್ದು, ಅಲ್ಲಿ ಸ್ಟಾರ್ಟ್-ಅಪ್‌ಗಳು ತಜ್ಞರಿಂದ ತಮ್ಮ ಎಲ್ಲಾ ಪ್ರಶ್ನೆಗಳಿಗೆ ನೇರವಾಗಿ ಉತ್ತರ ಕಂಡುಕೊಳ್ಳಬಹುದು.
ಜೊತೆಗೆ, ನಿಯಂತ್ರಣಾ ವ್ಯವಸ್ಥೆಯಲ್ಲಿ ತಮಗೆ ಎದುರಾಗುವ ಪುನರಾವರ್ತಿತ ಸಮಸ್ಯೆಗಳನ್ನ ಪ್ರಾಧಿಕಾರದ ಗಮನಕ್ಕೆ ತರಲು ಕೂಡ ಇದೊಂದು ಅತ್ಯುತ್ತಮ ವೇದಿಕೆಯಾಗಲಿದೆ.
ಇದೆಲ್ಲದರ ಜೊತೆಗೆ, ಉದ್ಯಮಿಗಳ ಅನುಕೂಲಕ್ಕಾಗಿ ಎಫ್‌ಎಸ್‌ಎಸ್‌ಎಐ 'FSSAI ಮಾರ್ಗಸೂಚಿಗಳು' ಮತ್ತು ಉಪಕ್ರಮಗಳ ಬಗ್ಗೆ ಮಾಹಿತಿ ಒದಗಿಸಲು ಪ್ರತ್ಯೇಕ ಇಮೇಲ್ ಐಡಿಯನ್ನು ಕೂಡ ಬಿಡುಗಡೆ ಮಾಡಿದೆ.
Good News for Food start-ups! FSSAI has launched a dedicated Start-Up Cell to help emerging food businesses navigate compliance & food safety regulations with ease. Every Wednesday, start-ups can reach out to the Cell with their queries and seek regulatory guidance. #StartUpIndia https://t.co/eLsbfGTLGW
— FSSAI (@fssaiindia) October 22, 2026
ಆಹಾರ ಉದ್ಯಮಕ್ಕೆ ಸಂಬಂಧಿಸಿದ ಯಾವುದೇ ಕಾನೂನುಬದ್ಧ ಪ್ರಶ್ನೆಗಳು ಅಥವಾ ಗೊಂದಲಗಳಿದ್ದರೆ ಉದ್ಯಮಿಗಳು ನೇರವಾಗಿ [email protected] ಗೆ ಇಮೇಲ್ ಕಳುಹಿಸಿ ನಿಖರ ಮಾಹಿತಿ ಪಡೆಯಬಹುದು.
ಭಾರತದಲ್ಲಿ ಫುಡ್ ಸ್ಟಾರ್ಟ್-ಅಪ್‌ಗಳಿಗೆ ಉತ್ತೇಜನ ನೀಡಲು ಮತ್ತು ಉದ್ಯಮಿಗಳ ಹಾದಿಯನ್ನ ಸುಗಮಗೊಳಿಸಲು ಎಫ್‌ಎಸ್‌ಎಸ್‌ಎಐ ತೆಗೆದುಕೊಂಡಿರುವ ಈ ನಿರ್ಧಾರ ನಿಜಕ್ಕೂ ಸ್ವಾಗತಾರ್ಹವಾಗಿದೆ.


Click it and Unblock the Notifications
