ಉಡಾವಣೆ ಆಗುತ್ತಿದ್ದಂತೆ ಆಕಾಶದಲ್ಲಿ ‘ಸ್ಟಾರ್‌ಶಿಪ್’ ಸ್ಫೋಟ
ಟೆಕ್ಸಾಸ್: ಸ್ಪೇಸ್ ಎಕ್ಸ್ ಸಂಸ್ಥೆಗೆ ಎಂದೂ ಮರೆಯಲಾಗದ ದಿನ ಇದು. ಏಕೆಂದರೆ ಒಂದು ಕಡೆ ಯಾರೂ ಕೈಹಾಕದ ಸಾಹಸ ಮಾಡಿದ ದಿನ, ಮತ್ತೊಂದು ಕಡೆ ಮೊದಲ ಪ್ರಯತ್ನದಲ್ಲೇ ಭೀಕರ ಸೋಲು ಕಂಡ ದಿನ. ಹೌದು, ಸ್ಪೇಸ್ ಎಕ್ಸ್ (SpaceX) ಸಂಸ್ಥೆಯ ಬಹುನಿರೀಕ್ಷಿತ ಯೋಜನೆ ಸೋಲು ಕಂಡಿದೆ. ಉಡಾವಣೆ ಆಗುತ್ತಿದ್ದಂತೆಯೇ ಆಕಾಶದಲ್ಲಿ 'ಸ್ಟಾರ್‌ಶಿಪ್' ಸ್ಫೋಟವಾಗಿದೆ.
Congrats @SpaceX team on an exciting test launch of Starship!
— Elon Musk (@elonmusk) April 20, 2023
Learned a lot for next test launch in a few months. pic.twitter.com/gswdFut1dK
ಉದ್ಯಮಿ ಎಲಾನ್ ಮಸ್ಕ್ (Elon Musk) ಒಡೆತನದ 'ಸ್ಪೇಸ್ ಎಕ್ಸ್' ಸಂಸ್ಥೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಸದ್ದು ಮಾಡಿದೆ. ಅದರಲ್ಲೂ ಬಾಹ್ಯಾಕಾಶ ಕ್ಷೇತ್ರಕ್ಕೆ ಕಾಲಿಟ್ಟ ಖಾಸಗಿ ಸಂಸ್ಥೆಗಳಲ್ಲಿ 'ಸ್ಪೇಸ್ ಎಕ್ಸ್' ಕಂಡಷ್ಟು ಯಶಸ್ಸನ್ನು ಯಾವುದೇ ಸಂಸ್ಥೆ ಕಂಡಿಲ್ಲ. ಈ ಪರಿಸ್ಥಿತಿ ನೋಡಿದರೆ ಭವಿಷ್ಯದಲ್ಲಿ ಅಮೆರಿಕದ 'ನಾಸಾ' ಕೂಡ 'ಸ್ಪೇಸ್ ಎಕ್ಸ್' ಎದುರು ಮಂಡಿಯೂರುವುದು ಪಕ್ಕಾ. ತನ್ನ ತಂತ್ರಜ್ಞಾನದ ವಿಚಾರದಲ್ಲಿ ಅಷ್ಟು ಮುಂದಿರುವ 'ಸ್ಪೇಸ್ ಎಕ್ಸ್' ಈಗಾಗಲೇ ಹಲವು ಸಾಧನೆ ಮಾಡಿದೆ. ಅದೇ ರೀತಿ ಈಗ 'ಸ್ಟಾರ್‌ಶಿಪ್' ಯೋಜನೆ ಮೂಲಕ ಬಾಹ್ಯಾಕಾಶ ಲೋಕಕ್ಕೆ ಮತ್ತಷ್ಟು ಮೆರಗು ನೀಡಲು ಎಲಾನ್ ಮಸ್ಕ್ ಸಜ್ಜಾಗಿದ್ದರು.

ಆಕಾಶದಲ್ಲೇ ರಾಕೆಟ್ ಸ್ಫೋಟ
ಸ್ಪೇಸ್ ಎಕ್ಸ್ ನಿರ್ಮಿಸಿರುವ ಜಗತ್ತಿನ ಅತಿದೊಡ್ಡ ರಾಕೆಟ್ ಆಗಿರುವ 'ಸ್ಟಾರ್‌ಶಿಪ್' (starship) ಇಂದು ಪ್ರಾಯೋಗಿಕ ಉಡಾವಣೆ ವೇಳೆ ಸ್ಫೋಟಗೊಂಡಿದೆ. ಟೆಕ್ಸಾಸ್‌ನ ಬೋಕಾ ಚಿಕಾದಲ್ಲಿರುವ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಈ ರಾಕೆಟ್‌ನ ಪರೀಕ್ಷೆ ನಡೆಸಲೆಂದೇ ಉಡಾಯಿಸಲಾಗಿತ್ತು. ಆದರೆ ಉಡಾವಣೆಯಾದ ಕೆಲವು ಕ್ಷಣಗಳ ಕಾಲ ಮಿಂಚಿನ ವೇಗದಲ್ಲಿ ಬಾಹ್ಯಾಕಾಶಕ್ಕೆ ಚಿಮ್ಮಿದ 'ಸ್ಟಾರ್‌ಶಿಪ್' ರಾಕೆಟ್, ಸುಮಾರು 4 ನಿಮಿಷದ ನಂತರ ಎಲ್ಲರಿಗೂ ಶಾಕ್ ನೀಡಿತ್ತು. ಇದು ಬೇಸರದ ಜೊತೆಗೆ ಕೋಟ್ಯಂತರ ರೂಪಾಯಿ ನಷ್ಟಕ್ಕೂ ಕಾರಣವಾಯಿತು.
4 ನಿಮಿಷದಲ್ಲಿ ಎಲ್ಲವೂ ಹಾಳಾಯ್ತು
4 ನಿಮಿಷಗಳ ಕಾಲ ತನ್ನ ಗುರಿ ತಲುಪುವ ನಿರೀಕ್ಷೆ ಮೂಡಿಸಿದ್ದ 'ಸ್ಟಾರ್‌ಶಿಪ್' ರಾಕೆಟ್ ಆಗಸದಲ್ಲಿ ಅಲುಗಾಡಲು ಮತ್ತು ತಿರುಗಲು ಪ್ರಾರಂಭಿಸಿತು. ಕೆಲವೇ ಕ್ಷಣದಲ್ಲಿ ದಿಢೀರ್ ಸ್ಫೋಟವಾಗಿ ಛಿದ್ರ ಛಿದ್ರವಾಗಿ ಭೂಮಿಗೆ ಅಪ್ಪಳಿಸಿತು. ಈ ವೇಳೆ 'ಸ್ಪೇಸ್ ಎಕ್ಸ್' ಸಂಸ್ಥೆ ಸಿಬ್ಬಂದಿ ಆಘಾತಕ್ಕೆ ಒಳಗಾದರು. ಸಾವಿರಾರು ಮಂದಿ ಈ ಉಡಾವಣೆಗೆ ಸಾಕ್ಷಿಯಾದರು. ಆದ್ರೆ ಕೆಲವೇ ನಿಮಿಷದಲ್ಲಿ ಅವರ ಸಂಭ್ರಮ ಮರೆಯಾಗಿ ಹೋಗಿತ್ತು. ಮತ್ತೊಂದು ಕಡೆ ಸೋಲನ್ನೂ 'ಸ್ಪೇಸ್ ಎಕ್ಸ್' ಸಂಸ್ಥೆ ಪಾಸಿಟಿವ್ ಆಗಿ ತೆಗೆದುಕೊಂಡಿದೆ.
ಸೋಲಲ್ಲೂ ಅಭಿನಂದನೆ ಅರ್ಪಿಸಿದ ಮಸ್ಕ್
ಹೌದು, ಯಾವುದೇ ಯೋಜನೆ ಕೈಕೊಟ್ಟರೆ ಆಘಾತ ಎದುರಾಗುವುದು ಮಾಮೂಲು. ಆದರೆ 'ಸ್ಪೇಸ್ ಎಕ್ಸ್' ಸಂಸ್ಥೆ ಹಾಗೂ ಅದರ ಮಾಲೀಕ ಉದ್ಯಮಿ ಎಲಾನ್ ಮಸ್ಕ್ ವಿಚಾರದಲ್ಲಿ ಉಲ್ಟಾ. ಈ ರೀತಿ ತಮ್ಮ ಸಂಸ್ಥೆ ಪ್ರಯೋಗಿಸಿದ ರಾಕೆಟ್ ಸ್ಫೋಟಗೊಂಡು, ಯೋಜನೆ ವ್ಯರ್ಥವಾದರೂ ತಮ್ಮ ಸಿಬ್ಬಂದಿಯ ಪ್ರಯತ್ನಕ್ಕೆ ಅಭಿನಂದನೆ ಅರ್ಪಿಸಿದ್ದಾರೆ ಎಲಾನ್ ಮಸ್ಕ್. ಈ ಮೂಲಕ ಸೋಲಿನಲ್ಲೂ ತಮ್ಮ ಸಿಬ್ಬಂದಿಗೆ ಸಾಂತ್ವನ ಹೇಳಿ, ಅವರ ಪ್ರಯತ್ನಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಒಟ್ನಲ್ಲಿ ಏನಾದರೂ ಒಂದು ಹೊಸದನ್ನು ಪ್ರಯೋಗ ಮಾಡುತ್ತಲೇ ಇರುವ ಎಲಾನ್ ಮಸ್ಕ್ ಒಡೆತನದ 'ಸ್ಪೇಸ್ ಎಕ್ಸ್' ಸಂಸ್ಥೆ ದಿನದಿಂದ ದಿನಕ್ಕೆ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ಇದೀಗ 'ಸ್ಟಾರ್‌ಶಿಪ್' ರಾಕೆಟ್ ಪ್ರಯೋಗ ಸೋತಿದ್ದರೂ, ಮುಂದೆ ತಾವು ಗೆದ್ದೇ ಗೆಲ್ಲುತ್ತೇವೆ ಎಂಬ ಸಂದೇಶ ರವಾನಿಸಿದ್ದಾರೆ ಎಲಾನ್ ಮಸ್ಕ್. ಮತ್ತೊಂದು ಕಡೆ ಬೇರೆ ಗ್ರಹಗಳಿಗೆ ಮನುಷ್ಯರನ್ನು ಕಳಿಸುವ ಯೋಜನೆ ಕೂಡ 'ಸ್ಪೇಸ್ ಎಕ್ಸ್' ಸಂಸ್ಥೆಯದ್ದು.
ಇದರ ಜೊತೆಗೆ ಕ್ಷುದ್ರಗ್ರಹ ಗಣಿಗಾರಿಕೆ ಮತ್ತು ಹೊಸ ಗ್ರಹಗಳ ಹುಡುಕಾಟದ ಯೋಜನೆಗಳನ್ನೂ 'ಸ್ಪೇಸ್ ಎಕ್ಸ್' ಸಂಸ್ಥೆ ರೂಪಿಸುತ್ತಿದೆ. ಭವಿಷ್ಯದಲ್ಲಿ ಈ ಯೋಜನೆಗಳಲ್ಲಿ ಗೆಲ್ಲುವ ವಿಶ್ವಾಸ ಎಲಾನ್ ಮಸ್ಕ್ ಅವರಿಗೆ ಇದೆ. ಹಾಗೇ ಮಾನವನ ಭವಿಷ್ಯ ರೂಪಿಸಲು ಇಂತಹ ಯೋಜನೆಗಳು ಅಗತ್ಯ ಎಂಬುದು ತಜ್ಞರ ಮಾತು.












Click it and Unblock the Notifications