16ನೇ ಲೋಕಸಭೆಯ ಹಾಜರಿ ಪುಸ್ತಕ, ಯುವಕರಿಗಿಂತ ಹಿರಿಯರೇ ವಾಸಿ!
ನವದೆಹಲಿ, ಜೂನ್ 5: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಹೋಲಿಸಿದರೆ ಲೋಕಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಚ್ಚಿನ ಹಾಜರಾತಿ ಹೊಂದಿದ್ದಾರೆ. ಈ ಮೂಲಕ ಹಾಜರಾತಿಯಲ್ಲಿ ಮಗನನ್ನೇ ತಾಯಿ ಮೀರಿಸಿದ್ದಾರೆ. ಮುಲಾಯಂ ಸಿಂಗ್ ಯಾದವ್ ಮತ್ತು ಸೊಸೆ ಡಿಂಪಲ್ ಯಾದವ್ ಮಧ್ಯೆಯೂ ಇದೇ ಪರಿಸ್ಥಿತಿ ಇದೆ.
ಸೋನಿಯಾ ಗಾಂಧಿ ಲೋಕಸಭೆಯ ಶೇಕಡಾ 59 ಅಧಿವೇಶನಗಲ್ಲಿ ಭಾಗವಹಿಸಿದ್ದರೆ ಮಗ ರಾಹುಲ್ ಗಾಂಧಿ ಶೇಕಡಾ 54 ಅಧಿವೇಶನಗಳಿಗೆ ಹಾಜರಾಗಿದ್ದಾರೆ. ಲೋಕಸಭೆಯ ಒಟ್ಟು 545 ಸದಸ್ಯರಲ್ಲಿ ಕೇವಲ 5 ಜನ ಮಾತ್ರ ನೂರಕ್ಕೆ ನೂರು ಹಾಜರಾತಿ ಹೊಂದಿದ್ದಾರೆ.[ಮೊಬೈಲ್ ಕರೆ ಮಾಡಲು ಮರ ಹತ್ತಿದ ಕೇಂದ್ರ ಸಚಿವ!]
ಪ್ರಧಾನ ಮಂತ್ರಿ ಸೇರಿ ಸಚಿವರ ಹಾಜರಾತಿಯ ವಿವರಗಳು ಮಾತ್ರ ಸಿಕ್ಕಿಲ್ಲ. ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುವುದು ಇವರಿಗೆ ಕಡ್ಡಾಯವಲ್ಲದ ಕಾರಣ ಈ ದಾಖಲೆಗಳು ಸಿಕ್ಕಿಲ್ಲ. ಪಿಆರ್'ಎಸ್ ಎಂಬ ಲಾಭರಹಿತ ಸಂಸ್ಥೆ 16ನೇ ಲೋಕಸಭೆಯ ಮೂರು ವರ್ಷಗಳ ಹಾಜರಾತಿ ದಾಖಲೆಗಳನ್ನು ವಿಶ್ಲೇಷಣೆ ಮಾಡಿದ್ದು ಈ ಮಾಹಿತಿಗಳು ಸಿಕ್ಕಿವೆ.

ಬೈರೋನ್ ಪ್ರಸಾದ್ ಮಿಶ್ರಾ ದಾಖಲೆ
ಮಧ್ಯ ಪ್ರದೇಶದ ಬಂಡಾ ಸಂಸದ ಬೈರೋನ್ ಪ್ರಸಾದ್ ಮಿಶ್ರಾ ಅತೀಹೆಚ್ಚು ಅಂದರೆ 1,468 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಮಾತ್ರವಲ್ಲ ಅವರ ಹಾಜರಾತಿಯೂ ಶೇಕಡಾ 100 ಇದೆ.
ಜಗತ್ ಸಿಂಗ್ ಪುರದ ಸಂಸದ ಬಿಜೆಡಿಯ ಕುಲ್ಮಾನಿ ಸಮಲ್, ಬಿಜೆಪಿಗೆ ಸೇರಿದ ಉತ್ತರ ಮುಂಬೈ ಸಂಸದ ಗೋಪಾಲ್ ಶೆಟ್ಟಿ, ಅಹಮದಾಬಾದ್ ನ ಕಿರೀಟ್ ಸೋಲಂಕಿ, ಹರಿಯಾಣದ ಸೋನಿಪಾಟ್ ನ ಚಂದೆರ್ ಕೌಶಿಕ್ ಕೂಡಾ ಶೇಕಡಾ 100 ಹಾಜರಾತಿ ಹೊಂದಿದ್ದಾರೆ. 22ಕ್ಕಿಂತ ಹೆಚ್ಚು ಸಂಸದರು ಶೇಕಡಾ 50 ಕ್ಕಿಂತ ಕಡಿಮೆ ಹಾಜರಾತಿಯನ್ನು ಹೊಂದಿದ್ದಾರೆ.

ಮಗನನ್ನೇ ಮೀರಿಸಿದ ಅಮ್ಮ
ಕಳೆದ ಮೂರು ವರ್ಷಗಳಲ್ಲಿ ಸೋನಿಯಾ ಗಾಂಧಿ 5 ಚರ್ಚೆಗಳಲ್ಲಿ ಭಾಗವಹಿಸಿದ್ದರೆ ರಾಹುಲ್ ಗಾಂಧಿ 11 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಆದರೆ ರಾಹುಲ್ ಹಾಜರಾತಿಯಲ್ಲಿ ಮಾತ್ರ ಅಮ್ಮ ಸೋನಿಯಾಗಿಂತ ಹಿಂದಿದ್ದಾರೆ.[ಕಾಂಗ್ರೆಸ್ ಸಂಶೋಧನಾ ವಿಭಾಗದ ಹೊಣೆ ಕನ್ನಡಿಗ ರಾಜೀವ್ ಗೌಡ ಹೆಗಲಿಗೆ]

ಮಲ್ಲಿಕಾರ್ಜುನ ಖರ್ಗೆ -ಶೇ. 92
133ಕ್ಕೂ ಹೆಚ್ಚು ಸಂಸದರ ಹಾಜರಾತಿ ಶೇಕಡಾ 90ಕ್ಕಿಂತ ಹೆಚ್ಚಾಗಿದೆ. ಕರ್ನಾಟಕ ಮಲ್ಲಿಕಾರ್ಜುನ ಖರ್ಗೆ ಶೇಕಡಾ 92 ಹಾಜರಾತಿ ಹೊಂದಿದ್ದಾರೆ. ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಕೂಡಾ ಶೇಕಡಾ 91 ಹಾಜರಾತಿ ಹೊಂದಿದ್ದಾರೆ.

ಸೊಸೆಗಿಂತ ಮಾವನ ಹಾಜರಾತಿಯೇ ಹೆಚ್ಚು
ತಮ್ಮ ಸೊಸೆ (ಅಖಿಲೇಶ್ ಯಾದವ್ ಪತ್ನಿ) ಡಿಂಪಲ್ ಯಾದವ್ ಗಿಂತ ಮುಲಾಯಂ ಸಿಂಗ್ ಯಾದವ್ ಹೆಚ್ಚಿನ ಹಾಜರಾತಿ ಹೊಂದಿದ್ದಾರೆ. ಹಿರಿಯ ಸಂಸದೀಯ ಪಟು ಮುಲಾಯಂ ಶೇಕಡಾ 79 ಹಾಜರಾತಿ ಹೊಂದಿದ್ದರೆ, ಸೊಸೆ ಡಿಂಪಲ್ ಯಾದವ್ ಕೇವಲ ಶೇಕಡಾ 35 ಹಾಜರಾತಿ ಹೊಂದಿದ್ದಾರೆ.

ಮಾಜಿ, ಹಾಲಿ ಮುಖ್ಯಮಂತ್ರಿಗಳ ಹಾಜರಾತಿ
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೇವಲ 6 ಶೇಕಡಾ ಚರ್ಚೆಗಳಲ್ಲಿ ಮಾತ್ರ ಭಾಗವಹಿಸಿದ್ದಾರೆ. ಇನ್ನು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯೂ ಶೇಕಡಾ 35 ಹಾಜರಾತಿಯನ್ನಷ್ಟೇ ಹೊಂದಿದ್ದರು.
ಆದರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತ್ರ ಶೇಕಡಾ 72 ಹಾಜರಾತಿಯನ್ನು ಹೊಂದಿದ್ದರು. ಸದ್ಯ ಮೂವರೂ ಸಂಸರಾಗಿಲ್ಲ.

ಹೀರೋಗಳು ಹಾಜರಿಯಲ್ಲಿ ಜೀರೋ
ಆದರೆ ವಿಶೇಷ ಎಂದರೆ ನಟರ ಹಾಜರಿ ಮಾತ್ರ ಭಾರೀ ಕಡಿಮೆ ಇದೆ. ಸ್ಟಾರ್ ನಟಿ ಹೇಮಮಾಲಿನಿ ಕೇವಲ ಶೇಕಡಾ 35 ಹಾಜರಾತಿ ಹೊಂದಿದ್ದಾರೆ. ತೀರಿಕೊಂಡ ವಿನೋದ್ ಖನ್ನಾ ಕೂಡಾ ಶೇ. 50ರಷ್ಟು ಹಾಜರಾತಿಯನ್ನಷ್ಟೇ ಹೊಂದಿದ್ದರು.
ಇನ್ನು ಕಿರಣ್ ಖೇರ್ ಮಾತ್ರ ಶೇ. 86 ಹಾಜರಾತಿ ಹೊಂದಿದ್ದಾರೆ. ಇನ್ನು ಬೋಜ್ಪುರಿ ಗಾಯಕ-ನಟ ಮನೋಜ್ ತಿವಾರಿ ಶೇಕಡಾ 77 ಹಾಗೂ ಎಎಪಿಯ ಪಂಜಾಬ್ ಘಟಕದ ಅಧ್ಯಕ್ಷ ಭಗವಂತ್ ಮನ್ ಶೇ. 52 ಹಾಜರಿ ಹೊಂದಿದ್ದಾರೆ. ಶತ್ರುಘ್ನ ಸಿನ್ಹಾ ಮತ್ತು ಬೆಂಗಾಲಿ ನಟಿ ಮೂನ್ ಮೂನ್ ಸೇನ್ ಶೇ. 70 ಹಾಜರಿ ಹೊಂದಿದ್ದಾರೆ.

ಸಂಸತ್ತಿನ ಕಡೆ ತಲೆ ಹಾಕದವರು
ಮಧ್ಯಪ್ರದೇಶದ ಬಿಜೆಪಿ ಸಂಸದ ಗ್ಯಾನ್ ಸಿಂಗ್ ಹಾಗೂ ಪಶ್ಚಿಮ ಬಂಗಾಳದ ನಟ ಕಂ ರಾಜಕಾರಣಿ ದೀಪಕ್ ಅಧಿಕಾರಿ ಕೇವಲ ಶೇಕಡಾ 8 ಮತ್ತು 9 ಹಾಜರಾತಿ ಹೊಂದಿದ್ದು ಎಲ್ಲಾ ಸಂಸದರಿಗಿಂತ ಕಡಿಮೆ ಹಾಜರಿ ಹೊಂದಿದ್ದಾರೆ.












Click it and Unblock the Notifications