ಮೊಬೈಲ್ ಕರೆ ಮಾಡಲು ಮರ ಹತ್ತಿದ ಕೇಂದ್ರ ಸಚಿವ!
ಸರಿಯಾಗಿ ಮೊಬೈಲ್ ಸಿಗ್ನಲ್ ಸಿಗದಿದ್ದಕ್ಕೆ ಹತ್ತಿರದ ಮರವನ್ನೇರಿದ ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸುದ್ದಿಯಾಗಿದ್ದಾರೆ.
ಬಿಕಾನೇರ್, ಜೂನ್ 5: ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಡಿಜಿಟಲ್ ಇಂಡಿಯಾದ ಅಣಕವಾಡುವಂಥ ಘಟನೆಯೊಂದು ರಾಜಸ್ಥಾನದ ಬಿಕಾನೇರ್ ನಲ್ಲಿ ಭಾನುವಾರ ನಡೆದಿದೆ. ತಮ್ಮ ಸಂಸತ್ ಕ್ಷೇತ್ರಕ್ಕೆ ಆಗಮಿಸಿದ್ದ ಕೇಂದ್ರ ಹಣಕಾಸು ರಾಜ್ಯ ಸಚಿವ ಅರ್ಜುನ್ ಮೇಘವಾಲ್ ಅವರು ಮೊಬೈಲ್ ಕರೆಯೊಂದನ್ನು ಮಾಡಲು ಸಿಗ್ನಲ್ ಸಿಗದಿದ್ದ ಕಾರಣದಿಂದಾಗಿ ಮರ ಹತ್ತಿದ ಘಟನೆ ನಡೆದಿದೆ.
ಭಾನುವಾರ ತಮ್ಮ ಸ್ವಕ್ಷೇತ್ರವಾದ ಬಿಕಾನೇರ್ ಗೆ ಆಗಮಿಸಿದ್ದ ಅವರು, ಎಂದಿನಂತೆ ತಮ್ಮ ಕ್ಷೇತ್ರ ಸಂಚಾರದಲ್ಲಿ ತೊಡಗಿದ್ದರು. ಆಗ, ಕ್ಷೇತ್ರದಲ್ಲಿರುವ ಧೋಲಿಯಾ ಎಂಬ ಗ್ರಾಮಕ್ಕೆ ಭೇಟಿ ನೀಡಿದ್ದ ಅವರು, ಅಲ್ಲಿನ ಜನರ ಕುಂದುಕೊರತೆಯನ್ನು ಆಲಿಸ ತೊಡಗಿದರು.

ಆಗ, ಅಲ್ಲಿದ್ದ ವ್ಯಕ್ತಿಯೊಬ್ಬ ತಮ್ಮ ಗ್ರಾಮದ ಬಳಿಯಿರುವ ಆಸ್ಪತ್ರೆಯಲ್ಲಿ ಶುಶ್ರೂಷಕಿಯರು ಇಲ್ಲದಿರುವುದು ಹಾಗೂ ವೈದ್ಯರೇ ಇಲ್ಲದ್ದನ್ನು ಗಮನಕ್ಕೆ ತಂದ.
ಇದನ್ನು ಗಂಭೀರವಾಗಿ ತೆಗೆದುಕೊಂಡ ಸಚಿವರು, ತಕ್ಷಣವೇ ತಮ್ಮ ಫೋನಿನಿಂದ ಆ ಕ್ಷೇತ್ರದ ವೈದ್ಯಾಧಿಕಾರಿಗೆ ಫೋನಾಯಿಸಿದರು. ಆದರೆ, ಸಿಗ್ನಲ್ ಸಮಸ್ಯೆಯಿಂದಾಗಿ ಕರೆ ಸಾಧ್ಯವಾಗಲಿಲ್ಲ. ಮೊಬೈಲ್ ಪರದೆ ಮೇಲೆ ಸಿಗ್ನಲ್ ಕ್ಷೀಣವಾಗಿದ್ದನ್ನು ಗಮನಿಸಿದ ಅವರು, ಕೊಂಚ ಎತ್ತರಕ್ಕೆ ಹಿಡಿದು ನೋಡಿದಾಗ ಸಿಗ್ನಲ್ ಸ್ಪಷ್ಟವಾಗಿ ಪರದೆಯ ಮೇಲೆ ಗೋಚರಿಸಿದ್ದನ್ನು ಕಂಡರು.
ಇದರಿಂದ, ತಾವಿರುವ ಸ್ಥಳದಿಂದ ಕೊಂಚ ಎತ್ತರದ ಸ್ಥಳಕ್ಕೆ ಹೋದರೆ ಸಿಗ್ನಲ್ ಸ್ಟ್ರೆಂತ್ ಹೆಚ್ಚಾಗಿ ಸಿಗುತ್ತದೆ ಎಂದು ಎಣಿಸಿದ ಅವರು ಅಲ್ಲಿ ಇಲ್ಲಿ ಹುಡಕಾಡಿದರು. ಆದರೆ, ಎತ್ತರದ ಸ್ಥಳ ಇರಲಿಲ್ಲ. ಆಗ, ಗ್ರಾಮಸ್ಥರಿಂದ ಬಂದ ಸಲಹೆ ಏನೆಂದರೆ, ಹತ್ತಿರದಲ್ಲೇ ಇರುವ ಮರವೊಂದನ್ನು ಏರುವುದು. ತಕ್ಷಣವೇ ಅವರು ಹತ್ತಿರದ ಮರಕ್ಕೆ ತಾಗಿಸಿದ್ದ ಏಣಿಯನ್ನು ಹತ್ತಿ ನಿಂತು ಕರೆ ಮಾಡಿದರು.
ಆದರೆ, ಸಚಿವರ ಕ್ಷೇತ್ರ ಸಂಚಾರವನ್ನು ವರದಿ ಮಾಡಲು ಬಂದಿದ್ದ ಮಾಧ್ಯಮದವರಿಗೆ ಹಾಗೂ ಇತರರಿಗೆ ಇದು ತಮಾಷೆಯಾಗಿ ಕಂಡಿತು. ಅಲ್ಲದೆ, ಡಿಜಿಟಲ್ ಇಂಡಿಯಾ ಎಂಬ ಮಂತ್ರ ಪಠಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಈ ಪ್ರಸಂಗ ಭಾರತದ ದೂರ ಸಂಪರ್ಕದ ನಕಾರಾತ್ಮಕ ಅಂಶಗಳನ್ನು ಕಣ್ಣಿಗೆ ರಾಚುವಂತಿತ್ತು.












Click it and Unblock the Notifications