ಮೊದಲ ಬಾರಿ ಸಮುದ್ರ ಕಂಡ 80ರ ವೃದ್ಧ ತಂದೆ: ಅಲೆಗಳನ್ನ ಕಂಡು ಕೈಮುಗಿದ ಅಜ್ಜನ ವಿಡಿಯೋ ವೈರಲ್
ಭುವನೇಶ್ವರ: ತಮ್ಮ ಇಡೀ ಜೀವನವನ್ನೇ ಮಕ್ಕಳ ಸಂತೋಷ, ಏಳಿಗಾಗಿ ಮುಡಿಪಾಗಿಡುವ ತಂದೆ ತಾಯಿಯರ ಸಣ್ಣ ಸಣ್ಣ ಆಸೆಯನ್ನ ಈಡೇರಿಸಿದಾಗ ಸಿಗುವ ಆ ಸಂತೋಷಕ್ಕೆ ಎಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದೀಗ ಅಂತಹದ್ದೇ ಒಂದು ಅತ್ಯಂತ ಭಾವನಾತ್ಮಕ ಹಾಗೂ ಮನಮುಟ್ಟುವ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
80 ವರ್ಷದ ವೃದ್ಧರೊಬ್ಬರು ತಮ್ಮ ಜೀವಿತಾವಧಿಯಲ್ಲಿ ಮೊಟ್ಟಮೊದಲ ಬಾರಿಗೆ ಸಮುದ್ರವನ್ನ ನೋಡಿದ ಕ್ಷಣಗಳನ್ನ ಅವರ ಮಗ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಈಗ ಕೋಟ್ಯಂತರ ನೆಟ್ಟಿಗರ ಹೃದಯವನ್ನು ಮುಟ್ಟಿದೆ.

ಚಂದ್ರಭಾಗ ಬೀಚ್‌ನಲ್ಲಿ ನಡೆದ ಭಾವನಾತ್ಮಕ ಕ್ಷಣ
ಇನ್‌ಸ್ಟಾಗ್ರಾಮ್‌ನ '@bhukkhad_musafir' ಎಂಬ ಖಾತೆಯನ್ನು ಹೊಂದಿರುವ ಶ್ರೀಕಾಂತ್ ಎಂಬುವವರು ತಮ್ಮ ತಂದೆಯನ್ನ ಒಡಿಶಾದ ಕೋನಾರ್ಕ್‌ನಲ್ಲಿರುವ ಪ್ರಸಿದ್ಧ ಚಂದ್ರಭಾಗ ಕಡಲ ತೀರಕ್ಕೆ ಕರೆದುಕೊಂಡು ಹೋಗಿದ್ದಾರೆ.
ವಿಡಿಯೋದ ಆರಂಭದಲ್ಲಿ ಮಾತನಾಡುವ ಶ್ರೀಕಾಂತ್, "ನನ್ನ ತಂದೆ ತಮ್ಮ ಇಡೀ ಜೀವನದಲ್ಲಿ ಈವರೆಗೆ ಒಂದು ಬಾರಿಯೂ ಸಮುದ್ರವನ್ನು ನೋಡಿರಲಿಲ್ಲ. ಇದೀಗ ಮೊದಲ ಬಾರಿಗೆ ಅವರನ್ನು ಕಡಲತೀರಕ್ಕೆ ಕರೆತಂದಿದ್ದೇನೆ. ಸಮುದ್ರವನ್ನು ಕಂಡಾಗ ಅವರ ಮೊದಲ ಪ್ರತಿಕ್ರಿಯೆ ಹೇಗಿರುತ್ತದೆ ನೋಡೋಣ" ಎಂದು ಹೇಳುವುದನ್ನು ಕೇಳಬಹುದು. ತಂದೆಯು ಕಡಲಿನತ್ತ ಹೆಜ್ಜೆ ಹಾಕುತ್ತಿದ್ದಂತೆ, ಅಲೆಗಳು ಅವರ ಪಾದಗಳನ್ನು ಸ್ಪರ್ಶಿಸುವ ಅಪರೂಪದ ದೃಶ್ಯ ವಿಡಿಯೋದಲ್ಲಿದೆ.
'ಕನಸಿನಲ್ಲೂ ಇಂಥ ಅದ್ಭುತವನ್ನು ಕಂಡಿರಲಿಲ್ಲ': ಸಮುದ್ರಕ್ಕೆ ಕೈಮುಗಿದು ನಮಸ್ಕರಿಸಿದ ತಂದೆ
ಸಮುದ್ರದ ವಿಶಾಲವಾದ ಜಲರಾಶಿಯನ್ನ ಕಂಡ ತಕ್ಷಣವೇ ವೃದ್ಧ ತಂದೆಯು ಅತ್ಯಂತ ಭಕ್ತಿ-ಭಾವದಿಂದ ಕೈಮುಗಿದು ಸಮುದ್ರಕ್ಕೆ ನಮಸ್ಕರಿಸಿದ್ದಾರೆ. ಅಲೆಗಳು ಪಾದದ ಬಳಿಗೆ ಬರುತ್ತಿದ್ದಂತೆ ಮಗ ಶ್ರೀಕಾಂತ್, "ಬಾವುಜಿ, ನೀರು ನಿಮ್ಮ ಕಾಲಿನ ಬಳಿಗೆ ಬರುತ್ತಿದೆ, ನಿಮಗೆ ಏನನ್ನಿಸುತ್ತಿದೆ?" ಎಂದು ಕೇಳುತ್ತಾರೆ.
ಆ ಅದ್ಭುತವನ್ನು ಕಣ್ತುಂಬಿಕೊಳ್ಳುತ್ತಾ ಭಾವುಕರಾದ ತಂದೆ, "ಜೀವನದಲ್ಲಿ ಇಷ್ಟೊಂದು ದೊಡ್ಡ ಅದ್ಭುತವನ್ನು ನೋಡುತ್ತೇನೆ ಎಂದು ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಇದನ್ನು ನೋಡುತ್ತಾ ಹಾಗೇ ನಿಂತುಬಿಡಬೇಕು ಎನಿಸುತ್ತಿದೆ" ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಆ ವೃದ್ಧರ ಮುಖದಲ್ಲಿ ಮೂಡಿದ ಮುಗ್ಧ ನಗು ಹಾಗೂ ಕಣ್ಣಿನಲ್ಲಿ ಕಾಣಿಸಿದ ಆನಂದ ನೋಡುಗರ ಮನಸ್ಸನ್ನ ಮುಟ್ಟಿದೆ.
ತಂದೆ-ಮಗನ ವೈರಲ್ ವಿಡಿಯೋಗೆ ನೆಟ್ಟಿಗರ ಭಾವುಕ ಕಮೆಂಟ್
ಈ ಸುಂದರ ವಿಡಿಯೋವನ್ನ ಹಂಚಿಕೊಂಡಿರುವ ಶ್ರೀಕಾಂತ್, "ತಮ್ಮ 80ನೇ ವಯಸ್ಸಿನಲ್ಲಿ ಅವರು ಮೊದಲ ಬಾರಿಗೆ ಸಮುದ್ರವನ್ನ ನೋಡಿದರು. ಅವರ ಮುಖದಲ್ಲಿ ಮೂಡಿದ ನಗು ಹಾಗೂ ಕಣ್ಣಿನಲ್ಲಿದ್ದ ಮುಗ್ಧತೆ ನಮ್ಮ ಜೀವನದ ಅತಿದೊಡ್ಡ ಸಂಪತ್ತು. ಕೆಲವು ಸಂತೋಷಗಳಿಗೆ ವಯಸ್ಸಿನ ಹಂಗಿರುವುದಿಲ್ಲ, ಅವು ಸರಿಯಾದ ಸಮಯಕ್ಕಾಗಿ ಕಾಯುತ್ತಿರುತ್ತವೆ ಅಷ್ಟೆ" ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಾವುಕರಾಗಿ ಕಮೆಂಟ್ ಮಾಡುತ್ತಿದ್ದಾರೆ. "ಸಮುದ್ರವನ್ನು ಕಂಡ ತಕ್ಷಣ ನಿಸರ್ಗಕ್ಕೆ ಕೈಮುಗಿದು ನಮಸ್ಕರಿಸಿದ್ದು ಅವರ ಸಂಸ್ಕಾರವನ್ನು ತೋರಿಸುತ್ತದೆ. ಅವರಿಗೆ ಪ್ರಕೃತಿಯ ನಿಜವಾದ ಮೌಲ್ಯ ತಿಳಿದಿದೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು , "ಬಾವುಜಿ ಅವರು ಕೈಮುಗಿದ ದೃಶ್ಯ ನನ್ನ ಕಣ್ಣಲ್ಲಿ ನೀರು ತರಿಸಿತು. ಇಂದಿನ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಸರಳತೆ ಹಾಗೂ ಮೌಲ್ಯಗಳನ್ನ ಉಳಿಸಿಕೊಂಡಿರುವ ಕೊನೆಯ ತಲೆಮಾರಿನ ಹಿರಿಯರಾಗಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications
