Get Updates
Get notified of breaking news, exclusive insights, and must-see stories!

ಕೇರಳದಲ್ಲಿ ಕರ್ನಾಟಕವು ಸಮ ಸಮಾಜ ನಿರ್ಮಾಣದತ್ತ ಮುಂದಡಿಯಿಟ್ಟಿದೆ ಎಂದ ಸಿದ್ದರಾಮಯ್ಯ

ತಿರುವನಂತಪುರಂ: ಕರ್ನಾಟಕ ಹಾಗೂ ಕೇರಳದ ರಾಜಕಾರಣಿಗಳ ನಡುವೆ ಕಳೆದ ಕೆಲವು ದಿನಗಳಿಂದ ರಾಜಕೀಯ ಕೆಸರೆರಚಾಟ ನಡೆದಿದೆ. ಬುಧವಾರ ಕೇರಳದ ತಿರುವನಂತಪುರನ ವರ್ಕಳದಲ್ಲಿ ಶಿವಗಿರಿ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸಿದ್ದರಾಯಮ್ಯ ಅವರು, ಕೇರಳದ ನೆಲದಲ್ಲಿ ನಿಂತು ಕರ್ನಾಟಕವು ಸಮ ಸಮಾಜ ನಿರ್ಮಾಣದತ್ತ ಮುಂದಡಿಯಿಟ್ಟಿದೆ ಎಂದಿದ್ದಾರೆ.

ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳು, ಶೆಡ್ಗಳ ತೆರವು ವಿಚಾರವಾಗಿ ಕರ್ನಾಟಕ ಹಾಗೂ ಕೇರಳದ ರಾಜಕಾರಣಿಗಳ ನಡುವೆ ತೀವ್ರ ವಾಕ್ಸಮರ ನಡೆದಿತ್ತು. ಕೇರಳ ಸಿಎಂ ಪಿಣರಾಯಿ ವಿಜಯನ್ ತೀವ್ರ ಅವರು ಕರ್ನಾಟಕ ಸರ್ಕಾರದ ಕಾರ್ಯವೈಖರಿಯನ್ನು ಉತ್ತರ ಪ್ರದೇಶದ ಬುಲ್ಡೋಜರ್‌ ವ್ಯವಸ್ಥೆಗೆ ಹೋಲಿಕೆ ಮಾಡಿ ತೀವ್ರ ವಾಗ್ದಾಳಿ ನಡೆಸಿದ್ದರು. ಆದರೆ ಇಂದು ನಡೆದ ಕಾರ್ಯಕ್ರಮದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖಾಮುಖಿಯಾಗಿದ್ದು ಕುಶಲೋಪರಿ ವಿಚಾರಿಸಿದ್ದಾರೆ. ನಗುತ್ತಲ್ಲೇ ಕೈ ಕುಲುಕಿದ್ದಾರೆ.

Siddaramaiah says in Kerala Karnataka has taken step towards building equal society

ಕೇರಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು ?

ವೈವಿಧ್ಯತೆಯ ನಡುವೆ ಮನುಷ್ಯರು ಒಗ್ಗಟ್ಟಾಗಿ ಬಾಳುವ ಸಹೃದಯಿ ಭಾರತ ನಿರ್ಮಾಣ ನಾರಾಯಣ ಗುರುಗಳ ಆಶಯವಾಗಿತ್ತು. ನೈತಿಕತೆ ಇಲ್ಲದ ಅಹಂಕಾರದ ಭಾಷೆಯಲ್ಲಿ ಕೋಮುವಾದ ಮಾತಾಡುವ ಬಗ್ಗೆ ನಾರಾಯಣ ಗುರುಗಳು ಎಚ್ಚರಿಸಿದ್ದರು. ನಾರಾಯಣ ಗುರುಗಳು ಕೇವಲ‌ ಒಬ್ಬ ಸಂತ ಮಾತ್ರ ಆಗಿರಲಿಲ್ಲ. ಸಮಾನತೆ ಮತ್ತು ನೈತಿಕತೆಯ ಚಳವಳಿಯಾಗಿದ್ದರು. ಹೀಗಾಗಿ ಶಿವಗಿರಿ ತೀರ್ಥಯಾತ್ರೆ ಕೂಡ ಚಳವಳಿಯ ಸ್ವರೂಪ ಪಡೆದು ಜಾತಿ ದೌರ್ಜನ್ಯವನ್ನು ಅಳಿಸಿ ಸಮಾಜವನ್ನು ಸಾಮಾಜಿಕ ನ್ಯಾಯದ ಕಡೆ ಮುನ್ನಡೆಸಬೇಕು. ನಾರಾಯಣ ಗುರುಗಳ ತತ್ವಜ್ಞಾನವು ಕನ್ನಡದ ರಾಷ್ಟ್ರಕವಿ ಕುವೆಂಪು ಅವರು ನಂತರ ಪ್ರತಿಪಾದಿಸಿದ 'ವಿಶ್ವಮಾನವ' ಪರಿಕಲ್ಪನೆಯನ್ನು ಒಳಗೊಂಡಿತ್ತು. ಇದು ಜಾತಿರಹಿತ, ಭಯರಹಿತ ಮತ್ತು ಮಾನವೀಯ ಸಮಾಜ ನಿರ್ಮಾಣದ ದೂರದೃಷ್ಟಿಯಾಗಿತ್ತು.

ನಾರಾಯಣ ಗುರುಗಳು ಐಟಿಐ (ITI)ಗಳನ್ನು ಸ್ಥಾಪಿಸಿದರು, ಕೈಗಾರಿಕಾ ಪ್ರದರ್ಶನಗಳನ್ನು ಆಯೋಜಿಸಿದರು. ಹಿಂದುಳಿದ ವರ್ಗದವರು ಸ್ವಾಭಿಮಾನಿಗಳಾಗಿ ಬದುಕಲು, ಅವರಿಗೆ ಉದ್ಯೋಗಕ್ಕಾಗಿ ಕೈಗಾರಿಕಾ ತರಬೇತಿ, ಕೌಶಲ ಅಭಿವೃದ್ಧಿ ಮತ್ತು ಆಧುನಿಕ ಕೃಷಿ ಕಾರ್ಯಾಗಾರಗಳನ್ನು ಗುರುಗಳು ಉತ್ತೇಜಿಸಿದರು.

ಅವರ ಈ ಚಳವಳಿಯು ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಕರಾವಳಿಯಾದ್ಯಂತ ಕೈಗಾರಿಕಾ ಮತ್ತು ಉದ್ಯಮಶೀಲ ಸಮುದಾಯಗಳ ಉದಯಕ್ಕೆ ನೇರ ಕಾರಣವಾಯಿತು. ನಾರಾಯಣ ಗುರುಗಳು ಉದ್ಯೋಗ ಮತ್ತು ಕೈಗಾರಿಕೆಯನ್ನು ಸಂಸ್ಕೃತಿ ಅಥವಾ ಆಧ್ಯಾತ್ಮಿಕತೆಗೆ ಅಪಾಯವೆಂದು ಪರಿಗಣಿಸಲಿಲ್ಲ. ಬದಲಾಗಿ ಅವುಗಳನ್ನು ಸಾಮಾಜಿಕ ವಿಮೋಚನೆಯ ಸಾಧನಗಳಾಗಿ ಕಂಡರು. ಉತ್ಪಾದನಾ ಶ್ರಮದ ಬಗೆಗಿನ ಅವರ ಆಸ್ಥೆಯು ಪ್ರಗತಿ ವಿರೋಧಿ ಮತ್ತು ಸಂಕುಚಿತ ಆರ್ಥಿಕ ಚಿಂತನೆಗಳಿಗೆ ನೇರ ವಿರೋಧ ಒಡ್ಡಿತ್ತು.

ನಾರಾಯಣ ಗುರುಗಳು ಶಿಕ್ಷಣವನ್ನು ಉತ್ತೇಜಿಸುವ ಮೂಲಕ, ಅನಿಷ್ಟ ಪದ್ಧತಿಗಳನ್ನು ವಿರೋಧಿಸುವ ಮೂಲಕ ಮತ್ತು ಲಿಂಗ ಸಮಾನತೆಯನ್ನು ಪ್ರತಿಪಾದಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಶ್ರಮಿಸಿದರು. ಮಹಿಳೆಯರ ಘನತೆ ಮತ್ತು ಸಮಾನ ಅವಕಾಶವಿಲ್ಲದೆ ಸಾಮಾಜಿಕ ನ್ಯಾಯ ಅಸಾಧ್ಯ ಎಂದು ಸಾರಿದರು. ಶಾಲೆಗಳು, ಗ್ರಂಥಾಲಯಗಳು, ಸಾಮಾಜಿಕ ಸುಧಾರಣಾ ಅಭಿಯಾನಗಳು ಮತ್ತು ಕೃಷಿ-ಕೈಗಾರಿಕಾ ಕಾರ್ಯಾಗಾರಗಳನ್ನು ಸಾಂಸ್ಥಿಕಗೊಳಿಸಿದರು. ಆಧುನಿಕ ಸಮಾಜಶಾಸ್ತ್ರವು ಯಾವುದನ್ನು 'ಸಾಮಾಜಿಕ ಬಂಡವಾಳ' ಎಂದು ಕರೆಯುತ್ತದೆಯೋ, ಅದನ್ನು ಗುರುಗಳು, ಪರಸ್ಪರ ನಂಬಿಕೆಯ ಹಾಗೂ ಸಂಘಟಿತ ಹೋರಾಟದ ಮೂಲಕ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವುದು ಅಗತ್ಯವೆಂದು ತಿಳಿಸಿದರು.

ನಾರಾಯಣ ಗುರುಗಳ ಪ್ರಭಾವ ಕೇರಳಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. 1925ರಲ್ಲಿ ಮಹಾತ್ಮಾ ಗಾಂಧಿಯವರೊಂದಿಗೆ ಅವರು ನಡೆಸಿದ ಐತಿಹಾಸಿಕ ಸಂವಾದವು ಸ್ವಾತಂತ್ರ್ಯ ಚಳವಳಿಯ ದಿಕ್ಕನ್ನೇ ಬದಲಿಸಿತು. "ಜಾತಿ ಎನ್ನುವುದು ಸಾಂಸ್ಕೃತಿಕ ವೈವಿಧ್ಯತೆಯಲ್ಲ, ಅದು ಸಾಂಸ್ಥಿಕ ಅನ್ಯಾಯ" ಎಂಬ ಮೂಲಭೂತ ಸತ್ಯವನ್ನು ಗಾಂಧೀಜಿಯವರು ಅರಿತುಕೊಳ್ಳುವಂತೆ ಮಾಡಿತು. ಮಾವಿನ ಮರದ ಎಲೆಗಳು ಬೇರೆ ಬೇರೆಯಾಗಿದ್ದರೂ ಅವುಗಳ ಸಾರ ಒಂದೇ ಎಂಬ ಉದಾಹರಣೆಯ ಮೂಲಕ, ಜಾತಿ ಮತ್ತು ಧರ್ಮಗಳು ಜಗತ್ತಿನ ಆಳವಾದ ಸಾಮಾಜಿಕ ಸಮಸ್ಯೆಗಳೇ ಹೊರತು ವೈವಿಧ್ಯತೆಯಲ್ಲ ಎಂದು ಗಾಂಧೀಜಿಯವರಿಗೆ ಮನವರಿಕೆ ಮಾಡಿಕೊಟ್ಟರು.

ನಾರಾಯಣ ಗುರುಗಳನ್ನು ಭೇಟಿಯಾದ ನಂತರವೇ ಗಾಂಧೀಜಿಯವರು ಅಸ್ಪೃಶ್ಯತೆ, ಸರಳತೆ ಮತ್ತು ಅಂತರ್ಜಾತಿ ವಿವಾಹಗಳ ಬಗ್ಗೆ ತಮ್ಮ ನಿಲುವನ್ನು ಗಟ್ಟಿಗೊಳಿಸಿದರು. ಅಂತರ್ಜಾತಿ ವಿವಾಹವಲ್ಲದ ಮದುವೆಗಳಿಗೆ ತಾವು ಹಾಜರಾಗುವುದಿಲ್ಲ ಎಂದು ಗಾಂಧೀಜಿಯವರು ನಿರ್ಧರಿಸಿದ್ದು ಕಾಕತಾಳೀಯವಲ್ಲ.

ಗುರುಗಳು ಕೇರಳದಲ್ಲಿ ನೆಲೆಸಿದ್ದರೂ, ಅವರ ಪ್ರಭಾವವು ಭಾಷೆ ಮತ್ತು ರಾಜ್ಯದ ಗಡಿಗಳನ್ನು ಮೀರಿ ಕರ್ನಾಟಕದ ಕರಾವಳಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಮಲೆನಾಡು ಭಾಗಗಳಲ್ಲಿ ಸುಧಾರಣಾ ಚಳವಳಿಗಳನ್ನು ರೂಪಿಸಿತು. ಕರ್ನಾಟಕ ಕರಾವಳಿಯ ಬಿಲ್ಲವ, ಈಡಿಗ, ಮೊಗವೀರ ಮತ್ತು ಇತರೆ ಹಿಂದುಳಿದ ಸಮುದಾಯಗಳು ನಾರಾಯಣ ಗುರುಗಳ ಸ್ವಾಭಿಮಾನ, ಶಿಕ್ಷಣ ಮತ್ತು ಸಂಘಟನೆಯ ಕರೆಯಿಂದ ಸ್ಫೂರ್ತಿ ಪಡೆದವು. ಇದು ಈ ಪ್ರದೇಶದಲ್ಲಿ ಕೋಮು ಶಕ್ತಿಗಳ ವಿಭಜನೆಯ ಪ್ರಯತ್ನಗಳಿಗೆ ಬಲವಾದ ಪ್ರತಿರೋಧವನ್ನು ಒಡ್ಡಲು ಪ್ರಮುಖ ಕಾರಣವಾಗಿದೆ.

ಬಸವಣ್ಣನವರ 'ಕಾಯಕ' ತತ್ವವು ನಾರಾಯಣ ಗುರುಗಳ ಆರ್ಥಿಕ ಸ್ವಾವಲಂಬನೆಯ ಚಿಂತನೆಯಲ್ಲಿ ಪ್ರತಿಧ್ವನಿಸುತ್ತದೆ. ಬಸವಣ್ಣನವರು ವಚನಗಳ ಮೂಲಕ ಭಕ್ತಿಯನ್ನು ಜನಸಾಮಾನ್ಯರ ಕೈಗೆ ನಿಲುಕುವಂತೆ ಮಾಡಿದರೆ, ನಾರಾಯಣ ಗುರುಗಳು ದೈವತ್ವವನ್ನೇ ಎಲ್ಲರಿಗೂ ಹಂಚುವ ಮೂಲಕ ಮನುಷ್ಯರು ಹುಟ್ಟಿನಿಂದ ಮೇಲುಕೀಳಲ್ಲ, ಅಸ್ತಿತ್ವದಿಂದ ಸಮಾನರು ಎಂದು ಸಾರಿದರು. ಅವರಿಬ್ಬರೂ ಧರ್ಮವನ್ನು ಬಹಿಷ್ಕಾರದ ಸಾಧನದಿಂದ ಸಾಮಾಜಿಕ ನ್ಯಾಯದ ಭಾಷೆಯನ್ನಾಗಿ ಪರಿವರ್ತಿಸಿದರು.

ಕರ್ನಾಟಕ ಸರ್ಕಾರವು ಸಮಾನತೆ ಮತ್ತು ಮಾನವ ಘನತೆಯನ್ನು ಆದ್ಯತೆಯಾಗಿಸುವ ಮೂಲಕ ನಾರಾಯಣ ಗುರುಗಳ ಆದರ್ಶಗಳನ್ನು ಮುಂದುವರಿಸುತ್ತಿದೆ. 2016ರಲ್ಲಿ 'ನಾರಾಯಣ ಗುರು ಜಯಂತಿ'ಯನ್ನು ಘೋಷಿಸುವ ಮೂಲಕ, ಅವರ ಸಾಮಾಜಿಕ ಸಾಮರಸ್ಯದ ಸಂದೇಶವು ಕರ್ನಾಟಕದ ಮೂಲೆ ಮೂಲೆಗೂ ತಲುಪುವಂತೆ ಮಾಡಲಾಗುತ್ತಿದೆ. ಅವರ ಬರವಣಿಗೆಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಲಾಗುತ್ತಿದೆ, ಈ ಮೂಲಕ ಅವರ ಬಗ್ಗೆ ತಿಳಿದುಕೊಳ್ಳಲು, ಜನರಲ್ಲಿ ವಿಮರ್ಶಾತ್ಮಕ ಪ್ರಜ್ಞೆಯನ್ನು ಜಾಗೃತಗೊಳಿಸಲಾಗುತ್ತಿದೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 'ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ'ವನ್ನು ಸ್ಥಾಪಿಸುವ ಮೂಲಕ ಅವರ ಪರಂಪರೆಯನ್ನು ಗಟ್ಟಿಗೊಳಿಸಲು 2013 ರಲ್ಲಿ ₹1 ಕೋಟಿ ಮತ್ತು 2023 ರಲ್ಲಿ ಹೆಚ್ಚುವರಿ ₹22 ಕೋಟಿ ಅನುದಾನವನ್ನು ನೀಡಲಾಗಿದೆ. ಹುಟ್ಟು ಎಂದಿಗೂ ಮನುಷ್ಯನ ಭವಿಷ್ಯವನ್ನು ನಿರ್ಧರಿಸಬಾರದು ಎಂಬ ಗುರುಗಳ ನಂಬಿಕೆಯಲ್ಲಿ ವಿಶ್ವಾಸವಿಟ್ಟಿರುವ ಕರ್ನಾಟಕವು ಸಮ ಸಮಾಜ ನಿರ್ಮಾಣದತ್ತ ಮುಂದಡಿಯಿಟ್ಟಿದೆ.

ನಾನು ಧಾರ್ಮಿಕ ಮುಖಂಡರಿಗೆ ದ್ವೇಷದ ವಿರುದ್ಧ ಧ್ವನಿಯೆತ್ತಲು ಹಾಗೂ ಶಿಕ್ಷಕರಿಗೆ ನಾರಾಯಣ ಗುರುಗಳ ತತ್ವಜ್ಞಾನವನ್ನು ತರಗತಿಗಳಿಗೆ ಕೊಂಡೊಯ್ಯಲು ಕರೆ ನೀಡುತ್ತೇನೆ. ಯುವಜನತೆಯು ಅನ್ಯಾಯವನ್ನು ಪ್ರಶ್ನಿಸಲು ಮತ್ತು ರಾಜಕೀಯ ಸಂಸ್ಥೆಗಳು ನೈತಿಕ ಮೌಲ್ಯಗಳೊಂದಿಗೆ ಆಡಳಿತ ನಡೆಸುವಂತೆ ಕರೆ ನೀಡುತ್ತೇನೆ.

ವಿಭಜನೆಯ ರಾಜಕೀಯವನ್ನು ತಿರಸ್ಕರಿಸಿ, ಘನತೆಯ ರಾಜಕೀಯವನ್ನು ಸ್ವಾಗತಿಸೋಣ. ದ್ವೇಷವು ದ್ವೇಷವನ್ನು ಹೆಚ್ಚಿಸುತ್ತದೆ, ಮೌನವು ಅನ್ಯಾಯವನ್ನು ಸಮರ್ಥಿಸುತ್ತದೆ ಮತ್ತು ಸಂವಾದವು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಎಂದು ನೆನಪಿಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+