70 ಲಕ್ಷ ರು. ತೆರಿಗೆ ಬಾಕಿ: ವಿಚಾರಣೆಗೆ ಹಾಜರಾದ ನಟ ಗೋವಿಂದಾ
ಕಳೆದ ಮೂರು ವರ್ಷಗಳಲ್ಲಿ ಒಟ್ಟು 5 ಕೋಟಿ ರು. ಆದಾಯ ಗಳಿಸಿದ್ದಾರೆ. ಈ ಆದಾಯಕ್ಕೆ ಸಂಬಂಧಿಸಿದಂತೆ ಅವರು, ಸುಮಾರು 70 ಲಕ್ಷ ರು. ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕಿತ್ತು. ಆದರೆ, ಅವರು ನಿಗದಿತ ಅವಧಿಯಲ್ಲಿ ತೆರಿಗೆ ಪಾವತಿಸಿರಲಿಲ್ಲ.
ಮುಂಬೈ, ಮಾರ್ಚ್ 25: ತೆರಿಗೆ ಇಲಾಖೆಗೆ ತಾವು ಪಾವತಿಸಬೇಕಿದ್ದ ಸುಮಾರು 70 ಲಕ್ಷ ರು. ಸೇವಾ ತೆರಿಗೆಯನ್ನು ಬಹುದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಹಿನ್ನೆಲೆಯಲ್ಲಿ ನಟ ಗೋವಿಂದಾ ಅವರು, ಶನಿವಾರದಂದು (ಮಾರ್ಚ್ 25), ಮುಂಬೈನ ಜುಹು ಪ್ರಾಂತ್ಯದಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಗೆ ವಿಚಾರಣೆಗಾಗಿ ಹಾಜರಾಗಿದ್ದರು.
ತೆರಿಗೆ ಬಾಕಿ ಸಂಬಂಧ ಅವರಿಗೆ ಕೆಲ ದಿನಗಳ ಹಿಂದೆ ನೋಟಿಸ್ ನೀಡಲಾಗಿತ್ತು. ಅಲ್ಲದೆ, ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕೆಂದು ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಅವರು ವಿಚಾರಣೆಗೆ ಹಾಜರಾಗಿದ್ದರು.

ವಿಚಾರಣೆ ವೇಳೆ, ಅವರು ಬಾಕಿಯಿರುವ ತೆರಿಗೆ ಮೊತ್ತವನ್ನು ಶೀಘ್ರವೇ ಪಾವತಿಸುವ ಭರವಸೆ ನೀಡಿದ್ದಾರೆಂದು ಇಲಾಖೆಯ ಮೂಲಗಳು ತಿಳಿಸಿವೆ.
ಗೋವಿಂದ ಅವರ ಆಪ್ತ ಮೂಲಗಳ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಕೆಲವಾರು ಜಾಹೀರಾತುಗಳು, ಸಿನಿಮಾ, ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಒಟ್ಟು 5 ಕೋಟಿ ರು. ಆದಾಯ ಗಳಿಸಿದ್ದಾರೆ. ಈ ಆದಾಯಕ್ಕೆ ಸಂಬಂಧಿಸಿದಂತೆ ಅವರು, ಸುಮಾರು 70 ಲಕ್ಷ ರು. ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕಿತ್ತು. ಆದರೆ, ಅವರು ನಿಗದಿತ ಅವಧಿಯಲ್ಲಿ ತೆರಿಗೆ ಪಾವತಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಗೋವಿಂದಾ ಅವರಿಗೆ ತೆರಿಗೆ ಇಲಾಖೆಯಿಂದ ತೆರಿಗೆ ಪಾವತಿಸುವಂತೆ ನೋಟಿಸ್ ಕೂಡಾ ಬಂದಿತ್ತು. ಆದರೆ, ತಮ್ಮ ಬಿಡುವಿಲ್ಲದ ದಿನಚರಿಯಿಂದಾಗಿ ಗೋವಿಂದಾ ಅವರು ತೆರಿಗೆ ಸಲ್ಲಿಸುವಲ್ಲಿ ವಿಫಲರಾಗಿದ್ದರು. ಹಾಗಾಗಿಯೇ ಅವರು ವಿಚಾರಣೆ ಎದುರಿಸಬೇಕಾಯಿತು ಎಂದು ಹೇಳಲಾಗಿದೆ.












Click it and Unblock the Notifications