Vande Bharat Express Train: ಈ ವಂದೇ ಭಾರತ್ ರೈಲು ಸೇವೆ ರದ್ದು?
ಹೈದರಾಬಾದ್, ಅಕ್ಟೋಬರ್ 03: ಭಾರತದ ಬಹುತೇಕ ರಾಜ್ಯಗಳಲ್ಲಿ ಈಗ ಭಾರತೀಯ ರೈಲ್ವೆಯ ಸೆಮಿ ಹೈ-ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ಐಷಾರಾಮಿ ರೈಲು ಸಂಚಾರವನ್ನು ನಡೆಸುತ್ತಿದೆ. ದೇಶದಲ್ಲಿ 60ಕ್ಕೂ ಅಧಿಕ ಮಾರ್ಗದಲ್ಲಿ ಈ ಮಾದರಿಯ ಬಿಳಿ ಮತ್ತು ಕೇಸರಿ ಬಣ್ಣದ ರೈಲುಗಳು ಓಡಾಡುತ್ತಿವೆ, ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಇತ್ತೀಚೆಗೆ ಆರಂಭಗೊಂಡ ವಂದೇ ಭಾರತ್ ರೈಲಿಗೆ ಪ್ರಯಾಣಿಕರ ಕೊರತೆ ಉಂಟಾಗಿದೆ. ಇದರಿಂದಾಗಿ ರೈಲು ಸೇವೆ ರದ್ದಾಗುವ ಅಥವ ಬೋಗಿಯ ಸಂಖ್ಯೆ ಕಡಿತಗೊಳಿಸುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 16ರಂದು ನಾಗ್ಪುರ ಮತ್ತು ಸಿಕಂದರಾಬಾದ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಚಾಲನೆ ನೀಡಿದ್ದರು. ಸೆಪ್ಟೆಂಬರ್ 19ರಿಂದ ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಿತ್ತು. ಆದರೆ ರೈಲ್ವೆ ಇಲಾಖೆ ನಿರೀಕ್ಷೆ ಮಾಡಿದಷ್ಟು ಪ್ರಯಾಣಿಕರು ಈ ರೈಲಿನಲ್ಲಿ ಸಂಚಾರವನ್ನು ನಡೆಸುತ್ತಿಲ್ಲ. ರೈಲು ಭಾರೀ ಪ್ರಯಾಣಿಕರ ಕೊರತೆಯನ್ನು ಎದುರಿಸುತ್ತಿದೆ ಎಂದು ಅಂಕಿ ಅಂಶಗಳೇ ಹೇಳುತ್ತಿವೆ.

ಇಲಾಖೆಯ ಮಾಹಿತಿ ಪ್ರಕಾರ ನಾಗ್ಪುರ ಮತ್ತು ಸಿಕಂದರಾಬಾದ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೇ 80ರಷ್ಟು ಪ್ರಯಾಣಿಕರ ಕೊರತೆಯನ್ನು ಎದುರಿಸುತ್ತಿದೆ. ಶೇ 20ರಷ್ಟು ಸೀಟುಗಳು ಮಾತ್ರ ಭರ್ತಿಯಾಗುತ್ತಿದೆ. ರೈಲಿನ ಬಹುತೇಕ ಬೋಗಿಗಳು ಖಾಲಿಯಾಗಿಯೇ ಸಂಚಾರವನ್ನು ನಡೆಸುತ್ತಿದೆ. ಆದ್ದರಿಂದ ಇಲಾಖೆ ಈ ರೈಲು ಸಂಚಾರವನ್ನು ಮುಂದುವರೆಸುವ ಕುರಿತು ಶೀಘ್ರವೇ ತೀರ್ಮಾನವನ್ನು ಕೈಗೊಳ್ಳಲಿದೆ.
ಸೀಟುಗಳು ಖಾಲಿ ಖಾಲಿ: ಸೆಪ್ಟೆಂಬರ್ 22ರ ಭಾನುವಾರ ರೈಲು ಸಂಖ್ಯೆ 20101 ನಾಗ್ಪುರ-ಸಿಕಂದರಾಬಾದ್ ನಡುವಿನ ರೈಲಿನಲ್ಲಿ 1,200 ಸೀಟುಗಳು ಖಾಲಿಯಾಗಿದ್ದವು. 1,440 ಸೀಟುಗಳನ್ನು ಈ ರೈಲು ಹೊಂದಿದೆ. ಎಕ್ಸಿಕ್ಯುಟಿವ್ ಕ್ಲಾಸ್‌ನಲ್ಲಿ ಕೇವಲ 88 ಪ್ರಯಾಣಿಕರು ಇದ್ದರು. 10 ಪ್ರಯಾಣಿಕರು ಮಾತ್ರ ರೈಲಿನಲ್ಲಿ ಸಂಚಾರ ನಡೆಸಲು ಮುಂಗಡ ಟಿಕೆಟ್ ಕಾಯ್ದಿರಿಸಿದ್ದರು.
ನಾಗ್ಪುರ ಮತ್ತು ಸಿಕಂದರಾಬಾದ್ ವಂದೇ ಭಾರತ್ ರೈಲು 20 ಬೋಗಿಯನ್ನು ಒಳಗೊಂಡಿದೆ. ಪ್ರಯಾಣಿಕರ ಕೊರತೆಯನ್ನು ರೈಲು ಎದುರಿಸುತ್ತಿದೆ. ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ ಬೋಗಿಗಳ ಸಂಖ್ಯೆಯನ್ನು 8ಕ್ಕೆ ಇಳಿಸಲು ಇಲಾಖೆಯ ಅಧಿಕಾರಿಗಳು ಚಿಂತಿಸಿದ್ದಾರೆ. ಇದರಿಂದಾಗಿ ಸೀಟುಗಳ ಸಂಖ್ಯೆ 500ಕ್ಕೂ ಕಡಿಮೆಯಾಗಲಿದೆ.
ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯವನ್ನು ರಾಮಗುಂಡಂ, ಕಾಜಿಪೇಟ್, ಸಿಕಂದರಾಬಾದ್ ಸಂಪರ್ಕಿಸಲು ರೈಲ್ವೆ ಇಲಾಖೆ ಈ ರೈಲನ್ನು ಓಡಿಸುತ್ತಿದೆ. ಸ್ಥಳೀಯ ವ್ಯಾಪಾರ ವಹಿವಾಟು, ಪ್ರವಾಸೋದ್ಯಮಕ್ಕೆ ಅನುಕೂಲ ಮಾಡಿಕೊಡಲು ಈ ರೈಲು ಅನುಕೂಲವಾಗಲಿದೆ ಎಂದು ಚಿಂತಿಸಿ ರೈಲು ಸೇವೆಯನ್ನು ಆರಂಭಿಸಲಾಗಿತ್ತು. ಆದರೆ ರೈಲು ಪ್ರಯಾಣಿಕರ ಕೊರತೆಯನ್ನು ಎದುರಿಸುತ್ತಿದೆ.
ಈ ರೈಲು ನಾಗ್ಪುರ-ಸಿಕಂದರಾಬಾದ್ ನಡುವಿನ 585 ಕಿ. ಮೀ. ದೂರವನ್ನು 7 ಗಂಟೆ 15 ನಿಮಿಷಗಳಲ್ಲಿ ಕ್ರಮಿಸಲಿದೆ. ಇದು ಎರಡು ಎಕ್ಸಿಕ್ಯೂಟಿವ್ ಕ್ಲಾಸ್ ಕೋಚ್‌ಗಳು 18 ಚೇರ್ ಕಾರ್ ಕೋಚ್‌ಗಳನ್ನು ಒಳಗೊಂಡಿದೆ. ಆದರೆ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿಲ್ಲ. ಹಗಲಿನಲ್ಲಿ ಸಂಚಾರ ನಡೆಸುವ ರೈಲು ಎರಡು ನಗರದ ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿತ್ತು.
ರೈಲು ಸಂಖ್ಯೆ 20101 ನಾಗ್ಪುರ-ಸಿಕಂದರಾಬಾದ್ ನಾಗ್ಪುರದಿಂದ ಬೆಳಗ್ಗೆ 5 ಗಂಟೆಗೆ ಹೊರಟು ಮಧ್ಯಾಹ್ನ 12:15ಕ್ಕೆ ಸಿಕಂದರಾಬಾದ್ ತಲುಪುತ್ತದೆ. ರೈಲು ಸಂಖ್ಯೆ 20102 ಸಿಕಂದರಾಬಾದ್ - ನಾಗ್ಪುರ ಮಧ್ಯಾಹ್ನ 1 ಗಂಟೆಗೆ ಹೊರಟು ರಾತ್ರಿ 8:20ಕ್ಕೆ ನಾಗ್ಪುರಕ್ಕೆ ತಲುಪುತ್ತದೆ. ಈ ರೈಲು ಸೇವಾಗ್ರಾಮ, ಚಂದ್ರಾಪುರ, ಬಲ್ಹರ್ಷಾ, ರಾಮಗುಂಡಂ ಮತ್ತು ಕಾಜಿಪೇಟ್ ರೈಲು ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿದೆ.












Click it and Unblock the Notifications