SCO Summit India 2023: ಭಾರತವೇ ಬಾಸ್.. ಶಾಂಘೈ ಸಹಕಾರ ಸಂಘಟನೆ ಸಭೆಗೆ ಮೋದಿ ಅಧ್ಯಕ್ಷತೆ!
ನವದೆಹಲಿ: ಬಹುನಿರೀಕ್ಷಿತ ದಿನ ಬಂದೇ ಬಿಟ್ಟಿದೆ, ಭಾರತ ಮತ್ತೆ ಜಾಗತಿಕವಾಗಿ ತನ್ನ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿಕ್ಕಿದೆ. ಇದೇ ಮೊದಲ ಬಾರಿಗೆ ಭಾರತದ ಅಧ್ಯಕ್ಷತೆಯಲ್ಲಿ ಶಾಂಘೈ ಸಹಕಾರ ಸಂಘಟನೆ ಸಭೆ ನಡೆಯಲಿದ್ದು, ಚೀನಾ ಅಧ್ಯಕ್ಷ ಜಿನ್‌ಪಿಂಗ್ & ರಷ್ಯಾ ಅಧ್ಯಕ್ಷ ಪುಟಿನ್ ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಹಾಗಾದರೆ ಈ ಸಭೆ ಭಾರತಕ್ಕೆ ಎಷ್ಟು ಮುಖ್ಯ? ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.
ಹೌದು, ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರಭಾವಕ್ಕೆ ಪ್ರತಿಯಾಗಿ 'ಶಾಂಘೈ ಸಹಕಾರ ಸಂಘಟನೆ'ಯು 2001ರಲ್ಲಿ ರಚನೆಯಾಗಿತ್ತು. ಈ ಸಂಘಟನೆಯಲ್ಲಿ ಭಾರತ, ಚೀನಾ, ಪಾಕಿಸ್ತಾನ, ರಷ್ಯಾ, ಕಜಕಸ್ತಾನ, ತಜಿಕಿಸ್ತಾನ, ಉಜ್ಬೆಕಿಸ್ತಾನ ಸೇರಿದಂತೆ ಕಿರ್ಗಿಸ್ತಾನ ಸದಸ್ಯ ರಾಷ್ಟ್ರಗಳಾಗಿವೆ. ಈ ಬಾರಿ ಸಭೆಯ ವಿಶೇಷತೆ ಏನೆಂದರೆ, ಶಾಂಘೈ ಸಹಕಾರ ಸಂಘಟನೆ ಸಭೆಯ ಅಧ್ಯಕ್ಷತೆಯನ್ನ ಇದೇ ಮೊದಲ ಬಾರಿ ಭಾರತ ವಹಿಸಿಕೊಳ್ಳುತ್ತಿದೆ. ಇನ್ನು ಎಸ್‌ಸಿಒ (SCO) ಎಂದು ಕೂಡ ಈ ಸಂಘಟನೆಯನ್ನ ಕರೆಯುವುದುಂಟು. ಇದೇ ಕಾರಣಕ್ಕೆ ಜಗತ್ತಿನ ಕಣ್ಣು ಈಗ ಎಸ್‌ಸಿಒ ಸಭೆ ಮೇಲೆ ನೆಟ್ಟಿದೆ. ನಾಳೆ ಕೋಟ್ಯಂತರ ಭಾರತಿಯರು ಕಾಯುತ್ತಿರುವ ಸಮಯ ಕೂಡ ಎದುರಾಗಲಿದೆ.

ಪ್ರಧಾನಿ ಮೋದಿ ಅಮೆರಿಕ ಪ್ರವಾಸದ ಬಳಿಕ...
ಪಾಶ್ಚಿಮಾತ್ಯ ದೇಶಗಳು ಮತ್ತು ಚೀನಾ-ರಷ್ಯಾ ನಡುವೆ ಕಿತ್ತಾಟ ನಡೆಯುತ್ತಲೇ ಇರುತ್ತದೆ. ಹೀಗಾಗಿ ಅತ್ತ ಅಮೆರಿಕ ಹಾಗೂ ಇತ್ತ ರಷ್ಯಾ ಭಾರತವನ್ನು ತಮ್ಮತ್ತ ಸೆಳೆಯಲು ಪ್ರಯತ್ನ ಮಾಡುತ್ತಲೇ ಇರುತ್ತವೆ. ಪರಿಸ್ಥಿತಿ ಹೀಗಿದ್ದಾಗ ಭಾರತವು ಕೂಡ ಯಾರ ಜೊತೆಗೂ ದ್ವೇಷ ಕಟ್ಟಿಕೊಳ್ಳದೆ ಹೊಂದಾಣಿಕೆಯಲ್ಲೇ ಸಾಗುತ್ತಿದೆ. ಹೀಗೆ ಪ್ರಧಾನಿ ಮೋದಿ ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಈ ಬೆಳವಣಿಗೆ ಇಡೀ ಜಗತ್ತಿನ ಗಮನ ಸೆಳೆದಿತ್ತು. ಹಾಗೇ ರಷ್ಯಾ ಮತ್ತು ಚೀನಾ ಕೂಡ ಭಾರತ ಹಾಗೂ ಅಮೆರಿಕ ಸಂಬಂಧದ ಮೇಲೆ ಕಣ್ಣಿಟ್ಟಿವೆ. ಹೀಗಾಗಿ ಪ್ರಧಾನಿ ಮೋದಿ ಅಮೆರಿಕಗೆ ಭೇಟಿ ನೀಡಿದ ಕೆಲವೇ ದಿನಗಳ ನಂತರ, ಶಾಂಘೈ ಸಹಕಾರ ಸಂಘಟನೆ ಸಭೆಯ ಅಧ್ಯಕ್ಷತೆ ವಹಿಸುತ್ತಿರುವುದು ವಿಶೇಷವಾಗಿದೆ.
ರಷ್ಯಾ ಅಧ್ಯಕ್ಷ ಪುಟಿನ್ ನಡೆ ಏನು?
ಶಾಂಘೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳ ಪೈಕಿ ರಷ್ಯಾ ಪಾತ್ರ ಪ್ರಮುಖವಾಗಿದೆ. ಅಲ್ಲದೆ ಅತ್ತ ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಹೀಗಾಗಿ ಈ ಸ್ಥಿತಿಯಲ್ಲಿ 'ಶಾಂಘೈ ಸಹಕಾರ ಸಂಘಟನೆ' ಸಭೆ ಸಾಕಷ್ಟು ಗಮನ ಸೆಳೆದಿದ್ದು, ಸಭೆಯಲ್ಲಿ ಯಾವೆಲ್ಲಾ ನಿರ್ಣಯ ಕೈಗೊಳ್ಳಬಹುದು? ರಷ್ಯಾ ಅಧ್ಯಕ್ಷರ ನಿಲುವು ಏನಿರಲಿದೆ? ಭಾರತ ಮತ್ತು ರಷ್ಯಾ ಸಂಬಂಧ ಇನ್ನಷ್ಟು ಸುಧಾರಣೆ ಕಾಣಲಿದೆಯಾ? ಎಂಬ ಹಲವು ಪ್ರಶ್ನೆಗಳು ಈಗ ಕಾಡುತ್ತಿವೆ. ಇದಕ್ಕೆಲ್ಲಾ ಸಭೆಯ ನಂತರವೇ ಉತ್ತರ ಸಿಗಲಿದೆ. ಇಷ್ಟೇ ಅಲ್ಲ ಇನ್ನೂ ಒಂದು ವಿಶೇಷತೆಗೆ ಸಭೆ ಸಾಕ್ಷಿಯಾಗಲಿದೆ.
ಸಭೆಯಲ್ಲಿ ಚೀನಾ ಅಧ್ಯಕ್ಷರೂ ಹಾಜರ್!
ಅಂದಹಾಗೆ ಭಾರತ ಮತ್ತು ಚೀನಾ ಮಧ್ಯೆ ಗಡಿ ಫೈಟ್ ನಡೆಯುವಾಗಲೇ ಎರಡೂ ದೇಶದ ನಾಯಕರು ಒಂದೇ ಕಡೆ ಸೇರುತ್ತಿದ್ದಾರೆ. ಈ ವರ್ಚ್ಯುಯಲ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಜಿನ್‌ಪಿಂಗ್ ಮಾತುಕತೆ ನಡೆಸಲಿದ್ದಾರೆ. ಹೀಗಾಗಿ 'ಶಾಂಘೈ ಸಹಕಾರ ಸಂಘಟನೆ' ಸಭೆ ಇನ್ನಷ್ಟು ವಿಶೇಷತೆಯನ್ನ ಪಡೆದಿದೆ. ಇನ್ನೊಂದ್ಕಡೆ ಭಾರತವು ಶಾಂಘೈ ಸಹಕಾರ ಸಂಘಟನೆ ಸಭೆಯನ್ನ ವರ್ಚ್ಯುಯಲ್ ಮೂಲಕ ನಡೆಸುತ್ತಿರುವ ನಿರ್ಧಾರ ಸಂಘಟನೆಯ ಸದಸ್ಯ ರಾಷ್ಟ್ರಗಳಿಗೆ ಇಷ್ಟವಿರಲಿಲ್ಲ. ಆದರೂ ಭಾರತ ಮಾತ್ರ ತನ್ನ ಗಟ್ಟಿ ನಿಲುವಿನ ಜೊತೆಗೆ ಸಭೆಯನ್ನ ವರ್ಚ್ಯುಯಲ್ ಮೂಲಕ ಆಯೋಜನೆ ಮಾಡುತ್ತಿದೆ. ಜುಲೈ 4 ಅಂದರೆ ನಾಳೆ ಸಭೆ ನಡೆಯಲಿದೆ.

ಒಟ್ನಲ್ಲಿ ಮತ್ತೆ ಭಾರತ ಇಡೀ ಜಗತ್ತಿನ ಗಮನ ಸೆಳೆಯಲಿದೆ. ಪ್ರಧಾನಿ ಮೋದಿ ಕೈಗೊಂಡ ಸಾಲು ಸಾಲು ವಿದೇಶಿ ಪ್ರವಾಸಗಳು ಕೂಡ ಸಖತ್ ಸದ್ದು ಮಾಡಿದ್ದವು. ಇದೀಗ ಜಗತ್ತಿಗೇ ಬಾಸ್ ಆಗುವ ಗುರಿಯನ್ನ ಭಾರತ ಇಟ್ಟುಕೊಂಡಿದೆ. ಅದರ ಭಾಗವಾಗಿ ಜಾಗತಿಕ ಮಟ್ಟದ ಪ್ರಮುಖ ಸಭೆಗಳ ನಾಯಕತ್ವ ವಹಿಸಿಕೊಳ್ಳುತ್ತಿದೆ. ಇದೀಗ 'ಶಾಂಘೈ ಸಹಕಾರ ಸಂಘಟನೆ' ಸಭೆಯ ಅಧ್ಯಕ್ಷತೆ ಕೂಡ ಅದರ ಭಾಗವಾಗಿದೆ ಎನ್ನಬಹುದು. ಈ ಸಭೆಯಲ್ಲಿ ಯಾವೆಲ್ಲಾ ವಿಚಾರಗಳು ಚರ್ಚೆಯಾಗಲಿವೆ ಎಂಬುದನ್ನ ನಾಳೆ ನಂತರ ತಿಳಿಯಬೇಕಷ್ಟೆ.












Click it and Unblock the Notifications