ಬಿಲ್ಕಿಸ್ ಬಾನೋ ಕೇಸ್: ಸಂಪೂರ್ಣ ದಾಖಲೆ ಸಲ್ಲಿಸಲು ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಸೂಚನೆ
ನವದೆಹಲಿ, ಸೆಪ್ಟೆಂಬರ್ 9: ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳಿಗೆ ನೀಡಲಾದ ವಿನಾಯತಿ ಆದೇಶ ಸೇರಿದಂತೆ ಪ್ರಕ್ರಿಯೆಗಳ ಸಂಪೂರ್ಣ ದಾಖಲೆಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಗುಜರಾತ್ ಸರ್ಕಾರಕ್ಕೆ ಸೂಚನೆ ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಹಾಜರುಪಡಿಸಲು ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಎರಡು ವಾರಗಳ ಕಾಲಾವಕಾಶ ಕೊಟ್ಟಿದೆ. ಬಿಲ್ಕಿಸ್ ಬಾನೊ ಕುಟುಂಬದ ಏಳು ಸದಸ್ಯರ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಅಪರಾಧಿಗಳನ್ನು ಕಳೆದ ತಿಂಗಳು ಬಿಡುಗಡೆ ಮಾಡಲಾಗಿತ್ತು.
ಶಿಕ್ಷೆಯ ಉಪಶಮನಕ್ಕಾಗಿ ಸಲ್ಲಿಸಿದ ಅರ್ಜಿಯನ್ನು ಅನುಮತಿಸಿದ ನಂತರ ಗುಜರಾತ್‌ನ ಉಪಶಮನ ನೀತಿಯ ಅಡಿಯಲ್ಲಿ ಅಪರಾಧಿಗಳನ್ನು ಬಿಡುಗಡೆ ಮಾಡಲಾಯಿತು. ಇದನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಲಾಗಿತ್ತು.

ಮುಂದಿನ ವಿಚಾರಣೆ 3 ವಾರ ಮುಂದೂಡಿದೆ
ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ ಅಪರಾಧಿಗಳು 15 ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿದ್ದರು. ನಂತರ ಅವರಲ್ಲಿ ಒಬ್ಬರು ತನ್ನ ಅವಧಿಪೂರ್ವ ಬಿಡುಗಡೆಗಾಗಿ ಮನವಿಯೊಂದಿಗೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಅಪರಾಧಿ ಬಿಡುಗಡೆಯು ವ್ಯಾಪಕ ಆಕ್ರೋಶ ಮತ್ತು ಖಂಡನೆಗೆ ಕಾರಣವಾಗಿತ್ತು. ಅಲ್ಲದೇ ಅನೇಕ ಕಾರ್ಯಕರ್ತರು ಮತ್ತು ಇತಿಹಾಸಕಾರರು ಸೇರಿದಂತೆ 6,000ಕ್ಕೂ ಹೆಚ್ಚು ಜನರು ಪ್ರಕರಣದಲ್ಲಿ ಅಪರಾಧಿಗಳ ಬಿಡುಗಡೆಯನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ನ್ನು ಒತ್ತಾಯಿಸಿದರು. ಇದೇ ಪ್ರಕರಣದ ಮುಂದಿನ ವಿಚಾರಣೆಯನ್ನು ಈಗ ಮೂರು ವಾರಗಳ ನಂತರಕ್ಕೆ ಮುಂದೂಡಲಾಗಿದೆ.

11 ಅಪರಾಧಿಗಳ ಬಿಡುಗಡೆಗೆ ಬಿಲ್ಕಿಸ್ ಪರ ವಕೀಲೆ ವಿರೋಧ
ಗುಜರಾತಿನಲ್ಲಿ ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ 11 ಅಪರಾಧಿಗಳಿಗೆ ಬಿಡುಗಡೆ ನೀಡಿದ್ದು ಆಗಿದೆ. ಆದರೆ ಸಾಮಾನ್ಯವಾಗಿ ಉಪಶಮನ ಕಾನೂನಿನಲ್ಲಿ ಇದು ಕೆಟ್ಟದ್ದು ಮತ್ತು ಇದು ಒಳ್ಳೆಯದ್ದು ಎಂಬ ವಿಷಯವಲ್ಲ. 1992ರ ನೀತಿಯ ಅಡಿಯಲ್ಲಿ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದೆ, ಆದರೆ ಸದ್ಯ ಹಳೆಯದಾಗಿರುವ ನೀತಿಯು ಅಸ್ತಿತ್ವದಲ್ಲೇ ಇಲ್ಲ ಎಂದು ಬಿಲ್ಕಿಸ್ ಬಾನೋ ಪರ ವಕೀಲರಾದ ಶೋಭಾ ಗುಪ್ತಾ ಉಲ್ಲೇಖಿಸಿದ್ದರು.

ಗರ್ಭಿಣಿಯಾಗಿದ್ದ ಮಹಿಳೆಯ ಮೇಲೆ ನಡೆದಿತ್ತು ಕ್ರೌರ್ಯ
ಕಳೆದ 2002ರಲ್ಲಿ ಬಿಲ್ಕಿಸ್ ಬಾನೊ 20 ವರ್ಷದವರಿದ್ದು, ಅಂದು ಗರ್ಭಿಣಿ ಸ್ಥಿತಿಯಲ್ಲಿದ್ದ ಮಹಿಳೆಯ ಮೇಲೆ ಅಪರಾಧಿಗಳು ಕ್ರೌರ್ಯ ತೋರಿದ್ದರು. ಆಕೆಗೆ ಪರಿಚಯವಿದ್ದ ಕಾಮುಕರಿಂದಲೇ ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು. ಈ ಅಪರಾಧಿಗಳ ಪೈಕಿ ಒಬ್ಬ ಆಕೆಯ ಚಿಕ್ಕಪ್ಪನೇ ಆಗಿದ್ದು, ಉಳಿದವರು ಸಹೋದರರಾಗಿದ್ದರು. ಅವಳು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದು, ಬಹುತೇಕ ನಿರ್ಜೀವವಾಗಿ ಬಿಟ್ಟಿದ್ದರು. ಮಾರ್ಚ್ 3, 2002ರಂದು ಮೂರು ವರ್ಷದ ಮಗಳನ್ನು ಕೊಲೆ ಮಾಡಲಾಗಿತ್ತು.
ಅತ್ಯಾಚಾರದ ನಂತರದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಮಹಿಳೆಗೆ ಎಚ್ಚರಗೊಂಡ ನಂತರದಲ್ಲಿ ಬಿಲ್ಕಿಸ್ ಬುಡಕಟ್ಟು ಮಹಿಳೆಯಿಂದ ಬಟ್ಟೆ ಅನ್ನು ಪಡೆದುಕೊಂಡರು. ದಾಹೋದ್ ಜಿಲ್ಲೆಯ ಲಿಮ್ಖೇಡಾ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋಗಿದ್ದರು. ಆದರೆ ಅಂದು ಅಲ್ಲಿನ ಹೆಡ್ ಕಾನ್‌ಸ್ಟೆಬಲ್ ಸತ್ಯವನ್ನು ಮುಚ್ಚಿಟ್ಟು ದೂರಿನ್ನೇ ಮೊಟಕುಗೊಳಿಸಿದ್ದರು ಎಂದು ಉಲ್ಲೇಖಿಸಲಾಗಿದೆ. ನ್ಯಾಯಕ್ಕಾಗಿ ಪರಿತಪಿಸುತ್ತಿದ್ದ ಮಹಿಳೆಯ ಅಗ್ನಿ ಪರೀಕ್ಷೆಯಲ್ಲಿ ಅದು ಆರಂಭಿಕ ಅಧ್ಯಾಯವಾಗಿತ್ತು. ನಂತರದಲ್ಲಿ ಆಕೆಗೆ ಕೊಲೆ ಬೆದರಿಕೆಗಳು ಬಂದವು. 2004ರಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಗುಜರಾತ್‌ನಿಂದ ಮುಂಬೈಗೆ ಸ್ಥಳಾಂತರಿಸಿತು.

2008ರಲ್ಲಿ ತೀರ್ಪು ಪ್ರಕಟಿಸಿದ ಮುಂಬೈ ಸಿಬಿಐ ಕೋರ್ಟ್
ಕಳೆದ 2008ರ ಜನವರಿ ತಿಂಗಳಿನಲ್ಲಿ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ 20 ಆರೋಪಿಗಳಲ್ಲಿ 11 ಆರೋಪಿಗಳನ್ನು ದೋಷಿಗಳು ಎಂದು ತೀರ್ಪು ನೀಡಿತು. ಮಹಿಳೆಯ ಮೇಲೆ ಅತ್ಯಾಚಾರದ ಸಂಚು, ಕೊಲೆ, ಕಾನೂನುಬಾಹಿರ ಸಭೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಇತರ ಆರೋಪಗಳ ಮೇಲೆ ದೋಷಿ ಎಂದು ತೀರ್ಪು ನೀಡಿತ್ತು. ಈ ಅಪರಾಧಿಗಳನ್ನು ರಕ್ಷಿಸಲು "ತಪ್ಪಾದ ದಾಖಲೆಗಳನ್ನು" ಮಾಡಿದ್ದಕ್ಕಾಗಿ ಹೆಡ್ ಕಾನ್‌ಸ್ಟೆಬಲ್‌ಗೆ ಶಿಕ್ಷೆ ವಿಧಿಸಲಾಯಿತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 20 ಆರೋಪಿಗಳ ಪೈಕಿ ಏಳು ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ವಿಚಾರಣೆ ವೇಳೆ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದನು.












Click it and Unblock the Notifications