Putin India Visit: ಭಾರತಕ್ಕೆ ಬಂದಿಳಿದ ರಷ್ಯಾ ಅಧ್ಯಕ್ಷ ಪುಟಿನ್, ಖುದ್ದು ಪ್ರಧಾನಿ ಮೋದಿ ಅವರಿಂದ ಸ್ವಾಗತ
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ತಮ್ಮ ಬಹು ನಿರೀಕ್ಷಿತ ಭಾರತ ಪ್ರವಾಸವನ್ನು ಈಗ ಆರಂಭಿಸಿದ್ದಾರೆ. ದೆಹಲಿಯ ವಿಶೇಷ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವಾಗತಿಸಿ, ಬರಮಾಡಿಕೊಂಡು ತಮ್ಮ ಸ್ನೇಹವನ್ನು ಇಡೀ ಜಗತ್ತಿಗೇ ಮತ್ತೊಮ್ಮೆ ತೋರಿಸಿದ್ದಾರೆ. ಭಾರಿ ಭದ್ರತೆ ನಡುವೆ ಇಬ್ಬರೂ ನಾಯಕರು ದೆಹಲಿ ವಿಶೇಷ ವಿಮಾನ ನಿಲ್ದಾಣದಿಂದ ಹೊರಟಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಇದೀಗ ಫುಲ್ ಅಲರ್ಟ್ ಆಗಿದೆ. ಕಮಾಂಡೋ & ಪೊಲೀಸ್ ಪಡೆ ಸೇರಿದಂತೆ ಎಲ್ಲಾ ಸ್ಥರದಲ್ಲೂ ಅತ್ಯಂತ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.
ಭಾರತ ಹಾಗೂ ರಷ್ಯಾ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ಕೂಡ ಹಲವು ಏರುಪೇರುಗಳಿಗೆ ಸಾಕ್ಷಿ ಆಗಲಿದೆ. ಏಕೆಂದರೆ ಪಾಕಿಸ್ತಾನ ರೀತಿಯ ಭಾರತದ ಶತ್ರು ದೇಶಗಳಿಗೆ ಇದನ್ನು ಕಂಡು ಅಸೂಯೆ ತಡೆಯಲು ಆಗುತ್ತಿಲ್ಲ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ರಷ್ಯಾ ಮತ್ತು ಭಾರತದ ನಡುವೆ ರಕ್ಷಣಾ ಒಪ್ಪಂದಗಳಿಗೆ ಸಹಿ ಬೀಳಲು ಕ್ಷಣಗಣನೆ ಆರಂಭವಾಗಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 2 ದಿನಗಳ ಭಾರತ ಭೇಟಿ ಆರಂಭಿಸಿದ್ದು ಭಾರತದ ಜೊತೆಯಲ್ಲಿ ಪ್ರಮುಖ ಮಿಲಿಟರಿ ಒಪ್ಪಂದ ಮಾಡಿಕೊಳ್ಳಲು ರಷ್ಯಾ ಸಂಸತ್‌ನಿಂದ ಅನುಮೋದನೆ ಸಿಗುತ್ತಿದ್ದಂತೆ ಹೊಸ ಸಂಚಲನ ಸೃಷ್ಟಿಯಾಗಿದೆ.

ಪುಟಿನ್ & ಪಿಎಂ ಮೋದಿ ಒಂದೇ ಕಾರಿನಲ್ಲಿ ಪ್ರಯಾಣ
ಈ ಮೂಲಕ ಭಾರತದ ಜೊತೆಗೆ ರಷ್ಯಾ ನೂತನ ಮಿಲಿಟರಿ ಒಪ್ಪಂದಗಳನ್ನು ಮಾಡಿಕೊಳ್ಳಲು & ಅದನ್ನು ಜಾರಿಗೆ ತರಲು ರಷ್ಯಾ ಸಂಸತ್ತು ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಪಾಶ್ಚಿಮಾತ್ಯ ದೇಶಗಳಿಗೆ ಹೊಟ್ಟೆ ಉರಿಯುವಂತೆ ಮಾಡಿದೆ. ಡಿಸೆಂಬರ್ 4 ಗುರುವಾರ & ಡಿಸೆಂಬರ್ 5 ಶುಕ್ರವಾರ ಪುಟಿನ್ ಅವರು ಭಾರತ ಪ್ರವಾಸ ಕೈಗೊಂಡಿದ್ದಾರೆ. ಇದೀಗ ಅವರು ದೆಹಲಿ ವಿಶೇಷ ವಿಮಾನ ನಿಲ್ದಾಣ ಮೂಲಕ ಭಾರತಕ್ಕೆ ಬಂದಿಳಿದು, ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಒಂದೇ ಕಾರಿನಲ್ಲಿ ತೆರಳಿ ಪ್ರಮುಖ ಸಭೆಗಳ ಬಗ್ಗೆ ಚರ್ಚಿಸಲಿದ್ದಾರೆ.
ಎಸ್-500 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಒಪ್ಪಂದ?
ಒಟ್ನಲ್ಲಿ ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತಿದ್ದು, ಹೀಗೆ ಎರಡೂ ದೇಶಗಳು ಮತ್ತಷ್ಟು ಹತ್ತಿರವಾಗುತ್ತಿವೆ. ಪ್ರಮುಖವಾಗಿ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಮತ್ತು ಎಸ್-500 ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಖರೀದಿ ಮಾಡುವ ಒಪ್ಪಂದಕ್ಕೆ ಅಂತಿಮ ಮುದ್ರೆ ಈಗ ಬೀಳುವ ಸಾಧ್ಯತೆ ದಟ್ಟವಾಗಿದೆ. ಇದರ ಜೊತೆಯಲ್ಲಿ ರಷ್ಯಾ ನಿರ್ಮಿತ ಕ್ಷಿಪಣಿಗಳ ಖರೀದಿಗೆ ಕೂಡ ಭಾರತ ಒಲವು ತೋರಿದ್ದು, ಭವಿಷ್ಯದಲ್ಲಿ ಇದು ಭಾರತಕ್ಕೆ ಸಾಕಷ್ಟು ಲಾಭದಾಯಕ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷರ ಭಾರತ ಭೇಟಿ ಇಡೀ ಪ್ರಪಂಚದ ಗಮನ ಸೆಳೆಯುತ್ತಿದೆ. ಈಗ ಪ್ರಧಾನಿ ಮೋದಿ ಅವರ ಜೊತೆಗೆ ಭಾರತದ ಶಕ್ತಿ ಕೇಂದ್ರಕ್ಕೆ ಪುಟಿನ್ ಭೇಟಿ ನೀಡಲಿದ್ದಾರೆ. ನಾಳೆ ರಷ್ಯಾ & ಭಾರತದ ನಡುವೆ ಪ್ರಮುಖ ಸಭೆಗಳು ನಡೆಯಲಿದ್ದು, ಚೀನಾ ಹಾಗೂ ಪಾಕಿಸ್ತಾನ ಈ ಭೇಟಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಅಲ್ಲದೇ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ನಾಯಕರಿಗೂ ಪುಟಿನ್ ಭಾರತ ಭೇಟಿ ಪ್ರಮುಖ ವಿಷಯವಾಗಿದೆ. ಅಲ್ಲದೆ ಉಕ್ರೇನ್ ಕೂಡ ಯುದ್ಧ ನಡೆಯುವ ಸಮಯದಲ್ಲಿ ಪುಟಿನ್ ಅವರ ಭಾರತ ಭೇಟಿ ಬಗ್ಗೆ ಕುತೂಹಲ ಹೊಂದಿದ್ದು, ಇದೀಗ ಎರಡೂ ದೇಶಗಳ ನಡುವೆ ನಡೆಯುವ ಒಪ್ಪಂದದ ಬಗ್ಗೆ ತಿಳಿಯಲು ಕಾಯುತ್ತಿದೆ. ಪದೇ ಪದೇ ರಷ್ಯಾ ಮತ್ತು ಭಾರತದ ಸಂಬಂಧ ಬಗ್ಗೆ ಉಕ್ರೇನ್ ಅಸೂಯೆ ಹೊರ ಹಾಕಿದ್ದನ್ನ ನಾವು ಹಿಂದೆ ನೋಡಿದ್ದನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು.












Click it and Unblock the Notifications