ಅಂಗವಿಕಲನ ಮೇಲೆ ರೈಲ್ವೇ ಪೊಲೀಸರ ದೌರ್ಜನ್ಯ

Posted By: Chethan
Subscribe to Oneindia Kannada

ಬಾಲಸೋರ್ (ಒಡಿಶಾ), ಜ. 9: ಮೊಬೈಲ್ ಕದ್ದನೆಂಬ ಆರೋಪ ಹೊತ್ತ ಅಂಗವಿಕಲ ವ್ಯಕ್ತಿಯೊಬ್ಬನನ್ನು ಕಾನೂನು ಪ್ರಕಾರ ವಿಚಾರಣೆ ನಡೆಸದೇ ರೈಲ್ವೇ ಪೊಲೀಸರು ಆತನನ್ನು ಮನಸೋ ಇಚ್ಛೆ ಹೊಡೆದಿರುವ ಮನಕಲಕುವ ಘಟನೆ ಬಾಲಸೋರ್ ರೈಲ್ವೇ ನಿಲ್ದಾಣದ ಪ್ಲಾಟ್ ಫಾರಂ 3ರಲ್ಲಿ ನಡೆದಿದೆ.

ಅಸಲಿಗೆ, ಈ ಘಟನೆ ಜ. 5ರಂದೇ ನಡೆದಿದೆಯಾದರೂ ಇಡೀ ದೌರ್ಜನ್ಯ ಪ್ರಕರಣದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋಮವಾರದ ಹೊತ್ತಿಗೆ ವೈರಲ್ ಆಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಏನಾಗಿತ್ತು?: ಮೂಲಗಳ ಪ್ರಕಾರ, ಜ. 5ರ ಬೆಳಗ್ಗೆ 7:30ರ ಸುಮಾರಿಗೆ ನಡೆದಿದೆ. ಅಂದು, ಗುವಾಹಟಿ- ಬೆಂಗಳೂರು ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಅಂಗವಿಕಲನೂ ಪಯಣಿಸಿದ್ದ. ಬಡಕಲು ದೇಹ, ಕೊಳಕು ಬಟ್ಟೆ ಹಾಕಿಕೊಂಡಿದ್ದ ಆತ ನೋಡಲು ಭಿಕ್ಷುಕನಂತೆಯೇ ಕಾಣುತ್ತಿದ್ದ.

RPF Jawans beat the man mercilessly

ಈತ ಪ್ರಯಾಣಿಸುತ್ತಿದ್ದ ಬೋಗಿಯಲ್ಲಿ ಆತ ಸಹ ಪ್ರಯಾಣಿಕರೊಬ್ಬರ ಮೊಬೈಲ ಕದಿಯಲು ಯತ್ನಿಸಿದ ಎಂದು ಗಲಾಟೆ ಶುರುವಾಯಿತು. ತಕ್ಷಣವೇ ಅದೇ ಬೋಗಿಯಲ್ಲಿದ್ದ ರೈಲ್ವೇ ಪೊಲೀಸ್ ಕಾನ್ಸ್ ಟೇಬಲ್ ಗಳು ಜಾಗೃತರಾಗಿ ಆ ವ್ಯಕ್ತಿಯನ್ನು ಹಿಡಿದಿದ್ದಾರೆ.

ಕಾನೂನಿನ ಪ್ರಕಾರ, ಅವರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ, ತಪ್ಪು ನಡೆದಿದ್ದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಅವರು ಹಾಗೆ ಮಾಡಿಲ್ಲ. ತಾವೇ ಕಾನೂನು ಕೈಗೆತ್ತಿಕೊಂಡಿರುವ ಈ ಪೇದೆಗಳು, ರೈಲಿನಲ್ಲೇ ಆತನ ಮೇಲೆ ಹಲ್ಲೆ ಮಾಡಲಾರಂಭಿಸಿದ್ದಾರೆ. ಆತನಿಗೆ ಮಾತನಾಡಲೂ ಅವಕಾಶ ಕೊಡದೇ ಆತನನ್ನು ಥಳಿಸಲಾರಂಭಿಸಿದ್ದಾರೆ.

ಅಷ್ಟರಲ್ಲಿ ಬಾಲಸೋರ್ ರೈಲ್ವೇ ನಿಲ್ದಾಣಕ್ಕೆ ರೈಲು ಆಗಮಿಸಿ ನಿಂತಿದೆ. ತಕ್ಷಣವೇ ಆ ಅಂಗವಿಕಲನನ್ನು ಬೋಗಿಯಿಂದ ಕೆಳಕ್ಕೆ ತಳ್ಳಿ ತಾವೂ ಕೆಳಗಿಳಿದು ಬಂದ ಪೊಲೀಸರು, ತಮ್ಮ ಬೂಟು ಕಾಲುಗಳಿಂದ ಆತನ ಹೊಟ್ಟೆ, ತಲೆ, ಮಖದ ಮೇಲೆ ಮನಸೋ ಇಚ್ಛೆ ಒದ್ದಿದ್ದಾರೆ. ಇದರಿಂದ ತೀವ್ರವಾಗಿ ಆತ ಗಾಯಗೊಂಡು ಇನ್ನೇನು ಸಂಪೂರ್ಣ ನಿತ್ರಾಣನಾದ ನಂತರ ಆತನನ್ನು ಅಲ್ಲೇ ಬಿಟ್ಟು ಹೊರಟುಹೋಗಿದ್ದಾರೆ.

ಆ ವೇಳೆ ಅದೇ ಸ್ಥಳದಲ್ಲಿದ್ದ ಸ್ಥಳೀಯ ಪಾರ್ಥಸಾರಥಿ ಜೆನಾ ಎಂಬಾತ ತನ್ನ ಮೊಬೈಲ್ ನಿಂದ ಇಡೀ ಕೃತ್ಯವನ್ನು ಮೊಬೈಲ್ ನಿಂದ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾನೆ ಎಂದು ಕೆಲ ಜಾಲತಾಣಗಳು ವರದಿ ಮಾಡಿವೆ.

ಅದೇನೇ ಇರಲಿ, ಆತ ಕಳ್ಳನೇ ಆಗಿದ್ದರೂ ಆತ ಸಿಕ್ಕಿಹಾಕಿಕೊಂಡಾಗ ಪೊಲೀಸರಂತೆ ವರ್ತಿಸುವ ಬದಲು ತಾವೇ ಕಾನೂನು ಮುರಿದಿರುವುದು ಎಲ್ಲರ ಬೇಸರಕ್ಕೆ ಕಾರಣವಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಾಲಸೋರ್ ರೈಲ್ವೇ ಎಸ್. ಪಿ. ಸಂಜಯ್ ಕೌಶಲ್, ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಘಟನೆ ನಡೆದಾಗ ಬಾಲಸೋರ್ ರೈಲ್ವೇ ನಿಲ್ದಾಣದ ಭದ್ರತೆ ಹೊಣೆ ಹೊತ್ತಿದ್ದ ಇನ್ಸ್ ಪೆಕ್ಟರ್ ಗೆ ಸೂಚಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Specially abled beaten up by Railway police jawans in Balasore railway station recently. The incident happened on Jan. 5th. But, now it has got intensity after it went viral on social medias on Monday.
Please Wait while comments are loading...