ಇನ್ನು ಟೋಲ್ ಬಳಿ ನಿಲ್ಲುವಂತಿಲ್ಲ: ನಿತಿನ್ ಗಡ್ಕರಿ ನೀಡಿದ ಭರ್ಜರಿ ಸಿಹಿ ಸುದ್ದಿ
National Highway Toll: ನೀವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ಇನ್ನು ಮುಂದೆ ಟೋಲ್ ಕಟ್ಟಲು ಸಾಲಿನಲ್ಲಿ ನಿಲ್ಲುವ ಕಿರಿಕಿರಿ ಇರುವುದಿಲ್ಲ!. ಹೌದು, 2026ರ ಅಂತ್ಯದ ವೇಳೆಗೆ ದೇಶಾದ್ಯಂತ ಭೌತಿಕವಾಗಿ ಇರುವ ಟೋಲ್ ಪ್ಲಾಜಾಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.
'ಟೈಮ್ಸ್ ಡ್ರೈವ್ ಆಟೋ ಸಮಿಟ್ 2026' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಹನ ಸವಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

ಏನಿದು ಹೊಸ ಸಿಸ್ಟಮ್?
ಈಗಿರುವ ಟೋಲ್ ಬೂತ್‌ಗಳ ಬದಲಿಗೆ 'ಮಲ್ಟಿ-ಲೇನ್ ಫ್ರೀ ಫ್ಲೋ' (MLFF) ಎಂಬ ಅತ್ಯಾಧುನಿಕ ತಂತ್ರಜ್ಞಾನ ಬರಲಿದೆ. ಹೆದ್ದಾರಿಗಳ ಮೇಲೆ ಅಳವಡಿಸಲಾಗುವ ವಿಶೇಷ ಕ್ಯಾಮೆರಾಗಳು ಮತ್ತು ಸೆನ್ಸಾರ್‌ಗಳು ನಿಮ್ಮ ವಾಹನದ ನಂಬರ್ ಪ್ಲೇಟ್ ಹಾಗೂ ಫಾಸ್ಟ್‌ಟ್ಯಾಗ್ (FASTag) ವಿವರಗಳನ್ನು ಚಲನೆಯಲ್ಲಿರುವಾಗಲೇ ಗುರುತಿಸುತ್ತವೆ.
ನೀವು ಗಂಟೆಗೆ 80 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದರೂ ನಿಮ್ಮ ವಾಹನದ ವಿವರಗಳನ್ನು ಸಿಸ್ಟಮ್ ಸೆರೆಹಿಡಿಯುತ್ತದೆ. ನೀವು ಕ್ರಮಿಸಿದ ಕಿಲೋಮೀಟರ್ ಆಧಾರದ ಮೇಲೆ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಯಿಂದ ಕಡಿತವಾಗುತ್ತದೆ, ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಪ್ರಯಾಣಿಕರಿಗೆ ಆಗುವ ಲಾಭಗಳೇನು?
ವೇಗದ ಸಂಚಾರ: ಟೋಲ್ ಪ್ಲಾಜಾಗಳ ಬಳಿ ಬ್ರೇಕ್ ಹಾಕುವ ಅಥವಾ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ.
ಇಂಧನ ಉಳಿತಾಯ: ಟೋಲ್ ಬಳಿ ಇಂಜಿನ್ ಚಾಲನೆಯಲ್ಲಿಟ್ಟು ಕಾಯುವ ಅಗತ್ಯವಿಲ್ಲದ ಕಾರಣ ಇಂಧನ ವ್ಯರ್ಥವಾಗುವುದು ತಪ್ಪುತ್ತದೆ.
ಸಮಯದ ಸದುಪಯೋಗ: ಪ್ರಸ್ತುತ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ದಟ್ಟಣೆಯಿಂದಾಗಿ ಪ್ರಯಾಣಿಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಹೊಸ ವ್ಯವಸ್ಥೆಯಿಂದ ವಾಹನಗಳು ಸಾಲುಗಟ್ಟಿ ನಿಲ್ಲುವುದು ತಪ್ಪಲಿದ್ದು, ಪ್ರಯಾಣದ ಸಮಯ ಉಳಿತಾಯವಾಗಲಿದೆ.
ಕಡಿಮೆ ಟೋಲ್ ದರ: ಪ್ರಸ್ತುತ ಕೆಲವು ಕಡೆಗಳಲ್ಲಿ ನಿಗದಿತ ಟೋಲ್ ದರ (ಉದಾಹರಣೆಗೆ 125 - 150) ಇರುತ್ತದೆ. ಆದರೆ ಹೊಸ ಪದ್ಧತಿಯಲ್ಲಿ ನೀವು ಎಷ್ಟು ದೂರ ಕ್ರಮಿಸುತ್ತೀರೋ ಅಷ್ಟಕ್ಕೆ ಮಾತ್ರ ಹಣ ನೀಡಿದರೆ ಸಾಕು. ಇದರಿಂದ ಕೆಲವು ಕಡೆಗಳಲ್ಲಿ ದರ 15 ರವರೆಗೆ ಇಳಿಕೆಯಾಗುವ ಸಾಧ್ಯತೆ ಇದೆ.
ಫಾಸ್ಟ್‌ಟ್ಯಾಗ್ ಕಡ್ಡಾಯ
ಟೋಲ್ ಬೂತ್‌ಗಳು ಇಲ್ಲವಾದರೂ ಫಾಸ್ಟ್‌ಟ್ಯಾಗ್ ಬಳಕೆ ಮುಂದುವರಿಯಲಿದೆ. ಒಂದು ವೇಳೆ ನಿಮ್ಮ ಫಾಸ್ಟ್‌ಟ್ಯಾಗ್‌ನಲ್ಲಿ ಹಣವಿಲ್ಲದಿದ್ದರೆ ಅಥವಾ ಅದು ಕೆಲಸ ಮಾಡದಿದ್ದರೆ, 72 ಗಂಟೆಯೊಳಗೆ ಹಣ ಪಾವತಿಸಬೇಕಾಗುತ್ತದೆ. ಇಲ್ಲದಿದ್ದರೆ ದ್ವಿಗುಣ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಈಗಾಗಲೇ ದೇಶದ 85 ಕಡೆಗಳಲ್ಲಿ ಈ ಪ್ರಾಯೋಗಿಕ ವ್ಯವಸ್ಥೆ ಜಾರಿಯಲ್ಲಿದ್ದು, ಮುಂದಿನ ದಿನಗಳಲ್ಲಿ ದೆಹಲಿ-ಜೈಪುರ, ಚೆನ್ನೈ-ಬೆಂಗಳೂರು ಸೇರಿದಂತೆ ಪ್ರಮುಖ ಹೆದ್ದಾರಿಗಳಲ್ಲಿ ಇದು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ. ಒಟ್ಟಿನಲ್ಲಿ, ಭಾರತದ ರಸ್ತೆ ಪ್ರಯಾಣ ಇನ್ನು ಮುಂದೆ ಹೈಟೆಕ್ ಆಗುವುದರಲ್ಲಿ ಸಂಶಯವಿಲ್ಲ.














Click it and Unblock the Notifications