Heavy Rain: ರೆಡ್ ಅಲರ್ಟ್; ಈ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ
ತಮಿಳುನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಫೆಂಗಲ್ ಚಂಡಮಾರುತದ ಪರಿಣಾಮ ತಮಿಳು ನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು ಮುಂಜಾಗ್ರತಾ ಕ್ರಮವಾಗಿ ಶನಿವಾರ ಕೂಡ ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ತಮಿಳುನಾಡಿನ ಚೆನ್ನೈ, ತಿರುವಳ್ಳೂರು, ಚೆಂಗಲ್ಪಟ್ಟು, ವಿಲ್ಲುಪ್ಪುರಂ, ಕಡಲೂರು, ಮೈಲಾಡುತುರೈ, ಕಲ್ಲಕುರಿಚಿ, ನಾಗಪಟ್ಟಿಣಂ, ಪುದುಚೇರಿ ಮತ್ತು ಕಾರೈಕಾಲ್‌ನಲ್ಲಿ ಭಾರಿ ಮಳೆಯಾಗಲಿದ್ದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇವು ಮಾತ್ರವಲ್ಲದೆ ತಮಿಳುನಾಡಿನ 24 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ.

ರಾಣಿಪೇಟ್, ತಿರುವಣ್ಣಾಮಲೈ, ವೆಲ್ಲೂರು, ಪೆರಂಬಲೂರ್, ಅರಿಯಲೂರ್, ತಂಜಾವೂರು, ತಿರುವರೂರ್, ಮೈಲಾಡುತುರೈ, ನಾಗಪಟ್ಟಿಣಂ ಮತ್ತು ಕಾರೈಕಾಲ್‌ಗೆ ಆರೆಂಜ್ ಅಲರ್ಟ್‌ಗಳನ್ನು ನೀಡಲಾಗಿದ್ದು, ತಿರುಪತ್ತೂರ್, ಕೃಷ್ಣಗಿರಿ, ಧರ್ಮಪುರಿ, ಸೇಲಂ, ನಾಮಕ್ಕಲ್, ತಿರುಚಿರಾಪಳ್ಳಿ, ಪುದುಕ್ಕೊಟ್ಟೈ ಮತ್ತು ಕರ್ಕೊತ್ತೈ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಶನಿವಾರ ಈ ಜಿಲ್ಲೆಗಳಲ್ಲಿ ರಜೆ ಘೋಷಣೆ
ಹವಾಮಾನ ಇಲಾಖೆ ಭಾರಿ ಮಳೆ ಎಚ್ಚರಿಕೆ ನೀಡಿದ ಬಳಿಕ, ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಚೆಂಗಲ್ಪಟ್ಟು, ವಿಲ್ಲುಪ್ಪುರಂ, ಕಲ್ಲಕುರಿಚಿ, ಕಡಲೂರು, ಪುದುಚೇರಿ ಮತ್ತು ಕಾರೈಕಲ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶನಿವಾರ ರಜೆ ಘೋಷಣೆ ಮಾಡಲಾಗಿದೆ.
ಫೆಂಗಲ್ ಚಂಡಮಾರುತ ಶನಿವಾರ ತಮಿಳುನಾಡಿನ ಕರಾವಳಿ ತೀರಗಳಿಗೆ ಅಪ್ಪಳಿಸುವ ಮುನ್ಸೂಚನೆ ಇದ್ದು, ಸಂಜೆ ವೇಳೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಭಾನುವಾರ ಕೂಡ ಮಳೆ ಮುಂದುವರೆಯಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಶನಿವಾರ ರಾತ್ರಿ ಚೆನ್ನೈನಲ್ಲಿ 50-60 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಚಂಡಮಾರುತ ಅಪ್ಪಳಿಸಿದ ಸಮಯದಲ್ಲಿ 70-80 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹೇಳಲಾಗಿದೆ.
ಬೆಂಗಳೂರಿಗೆ ಮಳೆ ಸೂಚನೆ
ತಮಿಳುನಾಡಿನಲ್ಲಿ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದಲ್ಲಿ ಕೂಡ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಡಿಸೆಂಬರ್ 1ರಂದು ದಕ್ಷಿಣ ಒಳನಾಡಿ 10 ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಕರ್ನಾಟಕದಲ್ಲಿ ಚಳಿ ಚಳಿ
ಒಂದು ಕಡೆ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದರೆ ಕರ್ನಾಟಕದಲ್ಲಿ ಚಳಿ ಹೆಚ್ಚಾಗಿದೆ. ರಾತ್ರಿಯಾದಂತೆ ಚಳಿ ಪ್ರಮಾಣ ತೀವ್ರವಾಗುತ್ತಿದ್ದು, ಜನ ನಡುಗುವಂತಾಗಿದೆ. ಬೆಂಗಳೂರಿನಲ್ಲಿ ಹಗಲಿನಲ್ಲಿ ಕೂಡ ಚಳಿಯ ವಾತಾವರಣವಿದ್ದು, ಈಗಲೇ ಇಷ್ಟು ಚಳಿಯಾದರೆ ಇನ್ನು ಡಿಸೆಂಬರ್, ಜನವರಿ ಚಳಿ ಹೇಗಿರಲಿದೆ ಎನ್ನುವ ಆತಂಕ ಆರಂಭವಾಗಿದೆ.












Click it and Unblock the Notifications