Rashmika Mandanna Deepfake Video: ಎಐ ದುರ್ಬಳಕೆ, ಐಟಿ ನಿಯಮ ಬಗ್ಗೆ ಕೇಂದ್ರ ಸಚಿವರ ಎಚ್ಚರಿಕೆ, ಪ್ರತಿಕ್ರಿಯೆ
ನವದೆಹಲಿ, ನವೆಂಬರ್ 06: ಸದ್ಯ ಮತ್ತು ಭವಿಷ್ಯದ ಪರಿಣಾಮಕಾರಿ ತಂತ್ರಜ್ಞಾನ ಎನ್ನಲಾಗುತ್ತಿರುವ ಆರ್ಟಿಫಿಸಿಯಲ್ ಇಂಟಲಿಜೆನ್ಸ್ (AI) ದುರ್ಬಳಕೆ ಆಗುತ್ತಿದೆ. ನಟಿಯರ ಮುಖಗಳನ್ನು ಬೇರೆಯ ಫೋಟೊಗಳಿಗೆ ಎಡಿಟ್ ಮಾಡಿ ನಿಜವೆಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಇಂತಹ ತಪ್ಪು ಮಾಹಿತಿ, ದುರ್ಬಳಕೆ ವಿರುದ್ಧ ಕೇಂದ್ರ ಸರ್ಕಾರ ಸೂಕ್ತ ಕ್ರಮದ ಎಚ್ಚರಿಕೆ ನೀಡಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‌ಪೇಕ್ (Deepfake video) ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. ಇದು ಅಸಲಿ ರಶ್ಮಿಕಾ ಮಂದಣ್ಣ ಅಲ್ಲ ಎಂಬುದು ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಗೊತ್ತಾಗುತ್ತದೆ.

ಜರಾ ಪಟೇಲ್ ಎಂಬ ಮಹಿಳೆ ವಿಡಿಯೋಗೆ ನಟಿ ರಶ್ಮಿಕಾ ಮಂದಣ್ಣ ಮುಖವನ್ನು ಎಐ ತಂತ್ರಜ್ಞಾನದ ಸಹಾಯದಿಂದ ಡೀಫ್ ಫೇಕ್ ಎಡಿಟ್ ಮಾಡಲಾಗಿದೆ. ಇದು ನೀಜವಾಗಿಯು ರಶ್ಮಿಕಾ ಎಂಬಂತೆ ಕಾಣುತ್ತದೆ. ಆದರೆ ಇದು ಎಐ ಆಧಾರಿತ ಎಡಿಟ್ ಆಗಿದೆ. ಇಂತಹ ವಿಡಿಯೋ ಮಾಡುವ ಕಿಡಿಗೇಡಿಗಳ ವಿರುದ್ಧ, ಎಐ ನಿಯಮ ಪಾಲಿಸದವರ ವಿರುದ್ಧ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
The original video is of Zara Patel, a British-Indian girl with 415K followers on Instagram. She uploaded this video on Instagram on 9 October. (2/3) pic.twitter.com/MJwx8OldJU
— Abhishek (@AbhishekSay) November 5, 2023
ಐಟಿ ನಿಯಮಗಳ ಬಗ್ಗೆ ಸಚಿವರು ಪ್ರಸ್ತಾಪ
ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಸೋಮವಾರ ಟ್ವೀಟ್ ಮಾಡಿರುವ ಕೇಂದ್ರ ಸಚಿವರು, ಭಾರತದ ಐಟಿ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ವಿಡಿಯೋ, ಇನ್ನಿತರ ವಿಷಯಗಳನ್ನು ತೆಗೆದುಹಾಕಬೇಕು ಎಂದು ಹೇಳಿದ್ದಾರೆ. ಅಲ್ಲದೇ ಐಟಿ ಹಕ್ಕು ಬಾಧ್ಯತೆಗಳ ಕುರಿತು ಸಚಿವರು ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ, ವಿಡಿಯೋ, ಪೋಸ್ಟ್‌ಗಳಲ್ಲಿ ತಪ್ಪು ಮಾಹಿತಿ ಕಂಡು ಬಂದಲ್ಲಿ ಅದನ್ನು 36 ಗಂಟೆಯೊಳಗೆ ತೆಗೆದು ಹಾಕಬೇಕೆಂಬ ನಿಯಮವನ್ನು ಅವರು ಪ್ರಸ್ತಾಪಿಸಿದ್ದಾರೆ. ತಪ್ಪು ಮಾಹಿತಿ ತೆಗೆದು ಹಾಕದಿದ್ದರೆ, ಐಟಿ ನಿಯಮಗಳ ಪಾಲನೆ ಆಗದಿದ್ದಲ್ಲಿ ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ನೊಂದ ವ್ಯಕ್ತಿಯು ನ್ಯಾಯಾಲಯದ ಮೊರೆ ಹೋಗಬಹುದಾಗಿದೆ ಎಂದಿದ್ದಾರೆ.
ಡಿಜಿಟಲ್ ನಾಗರಿಕರ ಸುರಕ್ಷತೆಗೆ ಸರ್ಕಾರ ಬದ್ಧ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಇಂಟರ್ನೆಟ್, ಸಾಮಾಜಿಕ ಮಾಧ್ಯಮ ಬಳಸುವ ಎಲ್ಲಾ ಡಿಜಿಟಲ್ ನಾಗರಿಕರ ಸುರಕ್ಷತೆ ಮತ್ತು ನಂಬಿಕೆ ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ. ಸಾಮಾಜಿಕ ಜಾಲತಾಣಗಳು IT ನಿಯಮಗಳ ವ್ಯಾಪ್ತಿಗೆ ಬರುತ್ತವೆ ಎಂಬುದನ್ನು ನೆನಪಿಸಿದ್ದಾರೆ. ಈ ಮೂಲಕ ವೈರಲ್ ಆದ ವಿಡಿಯೋ ಡಿಫ್‌ಫೆಕ್ ವಿಡಿಯೋ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.
ಇದ ರಶ್ಮಿಕಾರದ್ದಲ್ಲ, ಜರಾ ಪಟೇಲ್ ವಿಡಿಯೋ
ಸದ್ಯ ವೈರಲ್ ಆದ ರಶ್ಮಿಕಾ ಮಂದಣ್ಣಾ ರೀತಿ ಕಾಣುವ ಜಾರಾ ಪಟೇಲ್ ಅವರ ವಿಡಿಯೋ ವೈರಲ್ ಆಗಿದೆ. ಲಕ್ಷಾಂತರ ಜನ ನೋಡಿದ್ದಾರೆ. ಅಸಲಿಗೆ ಜರಾ ಪಟೇಲ್ ಅವರು ಕಳೆದ ತಿಂಗಳು ಕಪ್ಪು ಉಡುಪಿನಲ್ಲಿ ಅರೆಬೆತ್ತಲೆಯಾಗಿ ಲಿಫ್ಟ್‌ನ ಒಳಕ್ಕೆ ಬರುವ ವಿಡಿಯೋ ಹಂಚಿಕೊಂಡಿದ್ದರು. ಜರಾ ಪಟೇಲ್ ಅವರಿಗೆ Instagram ನಲ್ಲಿ 400,000 ಕ್ಕೂ ಹೆಚ್ಚು ಫಾಲೋವರ್ಸ್‌ಗಳಿದ್ದಾರೆ.
ಇದೀಗ ಜರಾ ಅವರ ವಿಡಿಯೋವನ್ನು ಎಐ ತಂತ್ರಜ್ಞಾನ ಬಳಸಿ ಕಿಡಿಗೇಡಿಗಳು ನಟಿ ರಶ್ಮಿಕ ಮಂದಣ್ಣಾ ಅವರ ಮುಖ ಎಡಿಟ್ (ಡೀಫ್‌ಫೇಕ್) ಮಾಡಿ ಹರಿಬಿಟ್ಟಿದ್ದಾರೆ. ಇದು ವೈರಲ್ ಆಗುತ್ತಿದ್ದಂತೆ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ವಿಡಿಯೋ, ತಪ್ಪು ಮಾಹಿತಿ ಹರಡದಂತೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ಅಮಿತಾಬ್ ಬಚ್ಚನ್ ಅವರೊಂದಿಗೆ 'ಗುಡ್‌ಬೈ' ಹಿಂದಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಸದ್ಯ ವೈರಲ್ ಆದ ವಿಡಿಯೋ ಕುರಿತು ರಶ್ಮಿಕ ಮಂದಣ್ಣ ಅವರು ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications