ಬಿಜೆಪಿಗೆ ನೂತನ ಚುನಾವಣಾ ಪ್ರಚಾರ ಸಮಿತಿ ಸಾರಥಿ
ನವದೆಹಲಿ, ಸೆಪ್ಟೆಂಬರ್ 30: ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಇನ್ನು ಮುಂದೆ ಪಕ್ಷದ ಚುನಾವಣಾ ಪ್ರಚಾರ ಸಮಿತಿಯ ಜವಾಬ್ದಾರಿಯನ್ನೂ ನಿಭಾಯಿಸಬೇಕಿದೆ. ಏಕೆಂದರೆ ಬಿಜೆಪಿ ಪ್ರಚಾರ ಸಮಿತಿಯ ಸಾರಥ್ಯವನ್ನು ರಾಜನಾಥ್ ಸಿಂಗ್ ಅವರಿಗೆ ವಹಿಸಲಾಗಿದೆ.
ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ನೇಮಕ ಹೆಚ್ಚು ಮಹತ್ವ ಪಡೆದಿದೆ. ಈ ತಕ್ಷಣಕ್ಕೆ ಅವರು ಸದ್ಯದಲ್ಲೇ ನಡೆಯಲಿರುವ 5 ರಾಜ್ಯಗಳ ವಿಧಾನಸಭಾ ಚುನಾವಣೆಯ ಪ್ರಚಾರದ ಹೊಣೆ ಹೊರಲಿದ್ದಾರೆ.

ಇದುವರೆಗೂ (ಜೂ. 9ರಿಂದ) ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿ ಮುಖ್ಯಸ್ಥರಾಗಿದ್ದರು. ಆದರೆ, ಸೆ. 13 ರಂದು ನರೇಂದ್ರ ಮೋದಿ ಅವರನ್ನು ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ ಹಿನ್ನೆಲೆಯಲ್ಲಿ, ಮಹತ್ವದ ಚುನಾವಣಾ ಪ್ರಚಾರ ಸಮಿತಿಗೆ ಹೊಸ ಅಧ್ಯಕ್ಷರ ಆಯ್ಕೆಯಾಗಿದೆ.
ಭಾನುವಾರ ಇಲ್ಲಿ ನಡೆದ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ಆಯ್ಕೆ ಮಾಡಲಾಗಿದೆ. ಸಂಸದೀಯ ಮಂಡಳಿ ಸಭೆಯಲ್ಲಿ ರಾಜನಾಥ್ ಸಿಂಗ್ ಅವರ ಹೆಸರನ್ನು ಸ್ವತಃ ನರೇಂದ್ರ ಮೋದಿ ಪ್ರಸ್ತಾಪಿಸಿದರು. ಈ ಪ್ರಸ್ತಾಪಕ್ಕೆ ಸಭೆ ಸರ್ವಾನುಮತದ ಅನುಮೋದನೆ ನೀಡಿತು ಎಂದು ಸಭೆಯ ಬಳಿಕ ಪಕ್ಷದ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಹೇಳಿಕೆ ನೀಡಿದರು.












Click it and Unblock the Notifications