ಕೇರಳ ಚುನಾವಣೆ 2026: ನೇಮಂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್‌ಗೆ ಭರ್ಜರಿ ಜಯ
ತಿರುವನಂತಪುರಂ: ಭಾರಿ ಕುತೂಹಲ ಕೆರಳಿಸಿರುವ ಕೇರಳ ವಿಧಾನಸಭಾ ಚುನಾವಣೆ 2026ರ ಫಲಿತಾಂಶ ಹೊರಬೀಳುತ್ತಿದ್ದು, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ದಕ್ಷಿಣದ ರಾಜ್ಯದಲ್ಲಿ ಹೊಸ ಇತಿಹಾಸ ಬರೆದಿದೆ. ತಿರುವನಂತಪುರಂನ ಪ್ರತಿಷ್ಠಿತ ನೇಮಂ (Nemom) ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಸಾವಿರಾರು ಮತಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಈ ಐತಿಹಾಸಿಕ ಗೆಲುವಿನೊಂದಿಗೆ ಕೇರಳ ವಿಧಾನಸಭೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಇಬ್ಬರು ಶಾಸಕರನ್ನು ಹೊಂದುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
'ಕೇರಳದ ಗುಜರಾತ್' ಎಂದೇ ಕರೆಯಲ್ಪಡುವ ನೇಮಂ ಕ್ಷೇತ್ರವು ಮೊದಲಿನಿಂದಲೂ ಬಿಜೆಪಿಗೆ ಭರವಸೆಯ ತಾಣವಾಗಿದೆ. 2016ರ ವಿಧಾನಸಭಾ ಚುನಾವಣೆಯಲ್ಲಿ ಹಿರಿಯ ನಾಯಕ ಓ. ರಾಜಗೋಪಾಲ್ ಅವರು ಇದೇ ಕ್ಷೇತ್ರದಿಂದ ಗೆಲ್ಲುವ ಮೂಲಕ ಕೇರಳ ವಿಧಾನಸಭೆಯಲ್ಲಿ ಬಿಜೆಪಿಯ ಖಾತೆ ತೆರೆದಿದ್ದರು. ಇದೀಗ 2026ರ ಚುನಾವಣೆಯಲ್ಲಿ ಅಖಾಡಕ್ಕಿಳಿದಿದ್ದ ರಾಜೀವ್ ಚಂದ್ರಶೇಖರ್ ಅವರು, ಎಲ್‌ಡಿಎಫ್ (LDF) ಮತ್ತು ಯುಡಿಎಫ್ (UDF) ಅಭ್ಯರ್ಥಿಗಳಿಗೆ ಪ್ರಬಲ ಪೈಪೋಟಿ ನೀಡಿ ಗೆಲುವಿನ ನಗೆ ಬೀರಿದ್ದಾರೆ.

ಇದುವರೆಗಿನ ಕೇರಳದ ಚುನಾವಣಾ ಇತಿಹಾಸದಲ್ಲಿ ಬಿಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿತ್ತು ಅಥವಾ ಖಾತೆ ತೆರೆಯಲು ವಿಫಲವಾಗುತ್ತಿತ್ತು. ಆದರೆ ಈ ಬಾರಿ ಆ ಟ್ರೆಂಡ್ ಬದಲಾಗಿದೆ. ರಾಜೀವ್ ಚಂದ್ರಶೇಖರ್ ಅವರ ಗೆಲುವಿನ ಜೊತೆಗೆ ರಾಜ್ಯದ ಮತ್ತೊಂದು ವಿಧಾನಸಭಾ ಕ್ಷೇತ್ರವಾದ ಚಾತನ್ನೂರನಲ್ಲಿಯೂ ಬಿಜೆಪಿ ಅಭ್ಯರ್ಥಿ ಪಿ.ಡಿ.ಗೋಪಕುಮಾರ್ ಗೆದ್ದಿದ್ದಾರೆ., ಇದೇ ಮೊದಲ ಬಾರಿಗೆ ಇಬ್ಬರು ಕಮಲ ಪಾಳಯದ ಶಾಸಕರು ಕೇರಳ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಕಮ್ಯುನಿಸ್ಟ್ ಪಕ್ಷಗಳು ಹಾಗೂ ಕಾಂಗ್ರೆಸ್ ಪ್ರಾಬಲ್ಯದ ನಡುವೆಯೂ, ಬಿಜೆಪಿ ಎರಡು ಸ್ಥಾನಗಳನ್ನು ಗೆಲ್ಲುವ ಮೂಲಕ ಕೇರಳದ ದ್ವಿಧ್ರುವ ರಾಜಕಾರಣಕ್ಕೆ ದೊಡ್ಡ ಸವಾಲೆಸೆದಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್‌ನಲ್ಲಿ ಗೆಲ್ಲುವ ಮೂಲಕ ಕೇರಳದಲ್ಲಿ ಬಿಜೆಪಿ ತನ್ನ ಖಾತೆ ತೆರೆದು ಶಕ್ತಿ ಪ್ರದರ್ಶಿಸಿತ್ತು. ಈಗ ವಿಧಾನಸಭಾ ಚುನಾವಣೆಯಲ್ಲೂ ತನ್ನ ನೆಲೆಯನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆಡಳಿತ ವಿರೋಧಿ ಅಲೆ ಹಾಗೂ ನಿರುದ್ಯೋಗ ಸಮಸ್ಯೆಗಳ ನಡುವೆ, ಕೇರಳದ ಮತದಾರರ ಒಂದು ವರ್ಗವು ಮೂರನೇ ಪರ್ಯಾಯ ಶಕ್ತಿಯಾಗಿ ಬಿಜೆಪಿಯನ್ನು ಬೆಂಬಲಿಸುತ್ತಿರುವ ಸ್ಪಷ್ಟ ಸಂದೇಶ ಈ ಫಲಿತಾಂಶದಿಂದ ಹೊರಬಿದ್ದಿದೆ. ಒಟ್ಟಿನಲ್ಲಿ ಈ ಗೆಲುವು ಮುಂಬರುವ ದಿನಗಳಲ್ಲಿ ಕೇರಳ ರಾಜಕಾರಣದಲ್ಲಿ ಹೊಸ ಸಮೀಕರಣಗಳಿಗೆ ಮುನ್ನುಡಿ ಬರೆಯಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications