Pushpa 2: ಪುಣ್ಯ ಕ್ಷೇತ್ರ ತಿರುಮಲದಲ್ಲಿ ಪುಷ್ಪ ಚಿತ್ರದ ಕೊಳಕು ಹಾಡಿಗೆ ಸ್ಟೆಪ್ ಹಾಕಿ ರೀಲ್ಸ್ ಮಾಡಿದ ಯುವತಿ- ಹೊತ್ತಿಕೊಂಡ ವಿವಾದ
ತಿರುಪತಿ ಡಿಸೆಂಬರ್ 5: ವಿಶ್ವದಾದ್ಯಂತ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ-2 ದಿ ರೂಲ್' ಸಿನಿಮಾ ಇಂದು (ಡಿಸೆಂಬರ್ 5) ಭರ್ಜರಿಯಾಗಿ ಪ್ರದರ್ಶನ ಕಂಡಿದೆ. ಈ ಸಿನಿಮಾದ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಯುವಜನತೆ ಹಾಡುಗಳಿಗೆ ರೀಲ್ಸ್ ಮಾಡಲು ಆರಂಭಿಸಿದ್ದಾರೆ. ಹೀಗೆ ತಿರುಪತಿಯಲ್ಲಿ ಯುವತಿಯೊಬ್ಬಳು ಪುಷ್ಪ 2 ಚಿತ್ರದ 'ಕಿಸ್ಸಿಕ್' ಹಾಡಿಗೆ ನೃತ್ಯ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಯುವತಿ ಡ್ಯಾನ್ಸ್ ಮಾಡಿದ್ದು ತಪ್ಪಲ್ಲ ಆದರೆ ಡ್ಯಾನ್ಸ್ ಮಾಡಲು ಆಯ್ಕೆ ಮಾಡಿಕೊಂಡ ಸ್ಥಳ ತಪ್ಪಾಗಿದೆ ಎಂದು ಜನ ಆಕ್ರೋಶಗೊಂಡಿದ್ದಾರೆ. ಹೀಗಾಗಿ ವೈರಲ್ ವಿಡಿಯೋ ವಿವಾದಕ್ಕೆ ಕಾರಣವಾಗಿದೆ.
ಹೌದು... ತಿರುಪತಿಗೆ ಹೋಗುವ ಮಾರ್ಗದಲ್ಲಿರುವ ಅಲಿಪಿರಿ ಗೇಟ್ ಬಳಿ ಯುವತಿ ಪುಷ್ಪ 2 ಚಿತ್ರದ 'ಕಿಸ್ಸಿಕ್' ಎನ್ನುವ ಕೊಳಕು ಐಟಂ ಹಾಡಿಗೆ ನೃತ್ಯ ಮಾಡಿ ವೀಡಿಯೋ ಹರಿಬಿಟ್ಟಿದ್ದಾಳೆ. ಈ ವೀಡಿಯೋ (@Mubashir2you) ಇನ್‌ಸ್ಟಾಗ್ರಾಮ್‌ನಲ್ಲಿ ಭಾರೀ ವೈರಲ್ ಆಗಿದೆ. ಈ ವೀಡಿಯೋ ನೋಡುಗರ ಗಮನ ಸೆಳೆದಿದ್ದು ವೆಂಕಟೇಶ್ವರನ ಭಕ್ತರಲ್ಲಿ ಕೋಪ ನೆತ್ತಿಗೇರುವಂತೆ ಮಾಡಿದೆ.

ಯುವತಿ ತನ್ನ ಡ್ಯಾನ್ಸ್ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ. ಅದು ವೇಗವಾಗಿ ಎಲ್ಲೆಡೆ ಹರಿದಾಡುತ್ತಿದೆ. ಅಲ್ಲು ಅರ್ಜುನ್ ಅಭಿಮಾನಿಗಳು ಯುವತಿಯ ಡ್ಯಾನ್ಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಇಂದೇ ಸಿನಿಮಾ ರಿಲೀಸ್ ಆಗಿರುವುದರಿಂದ ಸಿನಿಮಾ ಹಾಡುಗಳು ಸಖತ್ ಸದ್ದು ಮಾಡುತ್ತಿವೆ. ಸಿನಿಮಾ ನೋಡಿ ಬಂದ ಜನ ಅಲ್ಲು ಅರ್ಜುನ್ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಸಿನಿಮಾ ಹಾಡುಗಳು ಕೂಡ ಭಾರೀ ವೈರಲ್ ಆಗಿವೆ.
ಇದೇ ಸಂದರ್ಭವನ್ನು ಬಳಸಿಕೊಂಡು ಹೆಚ್ಚು ಲೈಕ್ಸ್ ಪಡೆಯುವ ಆಸೆಯಿಂದ ಯುವ ಜನತೆ ಸಿನಿಮಾದ ಐಟಂ ಹಾಡಿಗೆ ನೃತ್ಯ ಮಾಡಿ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ದೇವಸ್ಥಾನ, ಧಾರ್ಮಿಕ ಕಾರ್ಯಕ್ರಮ ಎನ್ನದೇ ತಾವಿರುವ ಸ್ಥಳದಲ್ಲೇ ವೀಡಿಯೋಗಳನ್ನು ರೆಕಾರ್ಡ್ ಮಾಡಿ ಹಂಚಿಕೊಳ್ಳುತ್ತಿರುವುದು ಕಂಡು ಬಂದಿದೆ.
ಇದಕ್ಕಾಗಿ ಯುವ ಪೀಳಿಗೆ ತಿರುಪತಿ ತಿಮ್ಮಪ್ಪನ ಸನ್ನಿಧಾನವನ್ನೂ ಬಿಟ್ಟಿಲ್ಲ. ಪವಿತ್ರ ಸ್ಥಳದಲ್ಲಿ ಇಂತಹ ಕ್ಷುಲ್ಲಕ ವೀಡಿಯೊಗಳು ಮತ್ತು ಕುಚೇಷ್ಟೆಗಳನ್ನು ಚಿತ್ರೀಕರಿಸಲಾಗುತ್ತಿದ್ದು ಇದು ಸ್ಥಳದ ಪಾವಿತ್ರ್ಯತೆಗೆ ಕಳಂಕ ತಂದಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ದೂರದೂರುಗಳಿಂದ ದರ್ಶನಕ್ಕಾಗಿ ಬರುವ ಯುವತಿಯರು ದರ್ಶನ ಮಾತ್ರ ಪಡೆದು ಹಿಂದಿರುಗಬೇಕು. ತಿರುಪತಿಯಂತಹ ಪುಣ್ಯ ಕ್ಷೇತ್ರವನ್ನು ತಮ್ಮ ರೀಲ್ಸ್ ಸ್ಥಳವನ್ನಾಗಿ ಮಾಡಿಕೊಳ್ಳುವುದು ತಪ್ಪು ಎಂದು ಭಕ್ತರು ಕಿವಿ ಮಾತು ಹೇಳಿದ್ದಾರೆ.
ತಿರುಪತಿಯಲ್ಲಿ ಇಂತಹ ಘಟನೆ ಇದೇ ಮೊದಲಲ್ಲ. ಇತ್ತೀಚೆಗೆ ತಮಿಳುನಾಡಿನ ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ವೆಂಕಟೇಶ್ವರನ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ತಮಾಷೆಯ ವೀಡಿಯೊವನ್ನು ಚಿತ್ರೀಕರಿಸಿದ್ದರು. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಅದೇ ರೀತಿ ವೈಎಸ್‌ಆರ್ ಕಾಂಗ್ರೆಸ್ ನಾಯಕಿ ದಿವ್ವೆಲಾ ಮಾಧುರಿ ಅವರು ತಿರುಪತಿ ಬೀದಿಗಳಲ್ಲಿ ಮಾಡಿದ ಫೋಟೋಶೂಟ್‌ಗೂ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕಾ ಜೈನ್ ತಿರುಮಲದ ಮೆಟ್ಟಿಲುಗಳ ಮೇಲೆ ನಡೆಯುವಾಗ ಚಿರತೆಯ ಧ್ವನಿಯನ್ನು ಅನುಕರಿಸುವ ಮತ್ತೊಂದು ವೀಡಿಯೊ ಕೂಡ ವಿವಾದದಲ್ಲಿ ಸಿಲುಕಿಕೊಂಡಿತ್ತು.
ಈ ಘಟನೆಗಳ ನಂತರ ಭಕ್ತರು ತಿರುಮಲ ತಿರುಪತಿ ದೇವಸ್ಥಾನಂಗಳು (ಟಿಟಿಡಿ) ಇಂತಹ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಪವಿತ್ರ ಸ್ಥಳದ ಪಾವಿತ್ರ್ಯತೆಯನ್ನು ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications