ಅಸಹಿಷ್ಣುತೆ: ಮೌನ ಮುರಿದ ಮೋದಿಯಿಂದ ಕಾಂಗ್ರೆಸ್ ವಿರುದ್ದ ವಾಗ್ದಾಳಿ
ಪುರ್ನಿಯಾ, ದರ್ಭಾಂಗ (ಬಿಹಾರ), ನ 3: ಭಾರೀ ಕುತೂಹಲ ಹುಟ್ಟು ಹಾಕಿರುವ ಬಿಹಾರದ ಅಸೆಂಬ್ಲಿ ಚುನಾವಣೆ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇದೇ ಗುರುವಾರದಂದು (ನ 5) ಐದನೇ ಮತ್ತು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಭಾನುವಾರ (ನ 8) ಮತಎಣಿಕೆ.
ಈ ನಡುವೆ ದೇಶದೆಲ್ಲಡೆ ಭಾರೀ ಚರ್ಚೆಯ ವಿಷಯವಾಗಿರುವ ಅಸಹಿಷ್ಣುತೆ ಬಗ್ಗೆ ಮೌನ ಮುರಿದಿರುವ ಪ್ರಧಾನಿ ಮೋದಿ, ಬಿಹಾರದ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ವಿರುದ್ದ ಟೀಕಾ ಪ್ರಹಾರ ನಡೆಸಿದ್ದಾರೆ.
ಚುನಾವಣೆಯ ವೇಳೆ ಅಸಹಿಷ್ಣುತೆಯ ವಿಚಾರದಲ್ಲಿ ನಾಟಕವಾಡುತ್ತಿರುವ ಕಾಂಗ್ರೆಸ್ 1984ರ ಸಿಖ್ ಗಲಭೆಯನ್ನು ನೆನಪಿಸಿಕೊಳ್ಳಲಿ. 31ವರ್ಷದ ಹಿಂದೆ ನಡೆದ ಘಟನೆಯನ್ನು ಕಾಂಗ್ರೆಸ್ ಮೆಲುಕು ಹಾಕಿಕೊಳ್ಳಲಿ ಎಂದು ಮೋದಿ, ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ. (ಮೋದಿ ಟಾರ್ಗೆಟ್ ಆದಷ್ಟು ಬೇರೆ ಯಾರೂ ಆಗಿಲ್ಲ)
ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಅಷ್ಟೇನೂ ಪ್ರಾಭಲ್ಯವಿಲ್ಲ ಎನ್ನಲಾಗುವ ಸೀಮಾಂಚಲ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರೀ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಸೋಮವಾರ (ನ 2) ಮಾತನಾಡುತ್ತಿದ್ದರು.
1994ರ ಸಿಖ್ ಹತ್ಯಾಕಾಂಡದಲ್ಲಿ ಮಡಿದಿರುವ ಕುಟುಂಬಗಳ ಕಣ್ಣೀರು ಇನ್ನೂ ನಿಂತಿಲ್ಲ ನಿಮಗೆ ಅಸಹಿಷ್ಣುತೆಯ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಮೋದಿ, ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ್ದಾರೆ.
ಮೋದಿಗೆ ಬುದ್ದಿ ಹೇಳಿ, ರಾಷ್ಟ್ರಪತಿ ಮೊರೆ ಹೋದ ಕಾಂಗ್ರೆಸ್ ಹೈಕಮಾಂಡ್, ಮುಂದೆ ಓದಿ

ಸಿಖ್ಖರ ಮಾರಣಹೋಮ
ಇಂದು ನವೆಂಬರ್ ಎರಡು. ಇಂದಿರಾ ಗಾಂಧಿ ಹತ್ಯೆಯಾದ ಎರಡು, ಮೂರು ಮತ್ತು ನಾಲ್ಕನೇ ದಿನದಂದು ದೆಹಲಿ ಸೇರಿದಂತೆ ದೇಶದೆಲ್ಲಡೇ ಸಿಖ್ಖರ ವಿರುದ್ದ ಮಾರಣಹೋಮ ನಡೆಯಿತಲ್ಲವೇ? ಘಟನೆಯಲ್ಲಿ ಕಾಂಗ್ರೆಸ್ ನಾಯಕರ ಹೆಸರು ಶಾಮೀಲಾಗಿತ್ತಲ್ಲವೇ ಅದನ್ನು ಮರೆಯಬೇಡಿ - ಮೋದಿ. (ಚಿತ್ರ: ಪಿಟಿಐ)

ಕಣ್ಣೀರು ಇನ್ನೂ ನಿಂತಿಲ್ಲ
ಅಂದು ಮಡಿದ ಕುಟುಂಬದ ಕಣ್ಣೀರು ಇನ್ನೂ ನಿಂತಿಲ್ಲ, ಮನಸ್ಸಿಗಾದ ಗಾಯ ಇನ್ನೂ ಗುಣವಾಗಿಲ್ಲ. ಚುನಾವಣೆಯ ವೇಳೆ ಅಸಹಿಷ್ಣುತೆಯ ವಿಚಾರದಲ್ಲಿ ಈಗ ಡ್ರಾಮಾಬಾಜಿ ಮಾಡುತ್ತಿದ್ದೀರಾ - ಕಾಂಗ್ರೆಸ್ ವಿರುದ್ದ ಮೋದಿ.(ಚಿತ್ರ: ಪಿಟಿಐ)

ಕಾಂಗೆಸ್ಸಿಗೆ ನೆಲೆಯಿದೆಯೇ
ಬಿಹಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆಲೆಯೇ ಇಲ್ಲ. ಆದರೂ ನಿತೀಶ್ - ಲಾಲೂ ಜೋಡಿ ಕಾಂಗ್ರೆಸ್ ಪಕ್ಷಕ್ಕೆ ನಲವತ್ತು ಸೀಟು ಬಿಟ್ಟು ಕೊಟ್ಟಿದ್ದಾರೆ. ಈ ಎಲ್ಲಾ ನಲವತ್ತು ಸೀಟನ್ನು ಮಹಾಮೈತ್ರಿಕೂಟ, ಎನ್ಡಿಎಗೆ ಬಿಟ್ಟುಕೊಟ್ಟ ಹಾಗೆ ಎಂದು ಮೋದಿ ಲೇವಡಿ ಮಾಡಿದ್ದಾರೆ. (ಚಿತ್ರ: ಪಿಟಿಐ)

ನಿತೀಶ್ ಈ ಮಟ್ಟಕ್ಕೆ ಬೆಳೆಯಲು ಅಟಲ್ ಕಾರಣ
ಇಂದು ನಿತೀಶ್ ಕುಮಾರ್ ರಾಜಕೀಯದಲ್ಲಿ ಈ ಮಟ್ಟಕ್ಕೆ ಬೆಳೆಯಲು ನಮ್ಮ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎನ್ನುವುದನ್ನು ಮರೆಯಬಾರದು. ಜಂಗಲ್ ರಾಜ್ ನಿಂದ ಬೇಸತ್ತಿದ್ದ ಬಿಹಾರದ ಜನತೆಗೆ ಅಟಲ್, ನಿತೀಶ್ ಗೆ ನೀಡಿದ ಆಶೀರ್ವಾದದ ಭಿಕ್ಷೆಯಿದು - ಮೋದಿ. (ಚಿತ್ರ: ಪಿಟಿಐ)

ರಾಷ್ಟ್ರಪತಿ ಭೇಟಿ ಮಾಡಿದ ಕಾಂಗ್ರೆಸ್ ಹೈಕಮಾಂಡ್
ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ, ಗೋಮಾಂಸ ವಿಚಾರದ ಬಗ್ಗೆ ಸೋನಿಯಾ ಮತ್ತು ರಾಹುಲ್ ಗಾಂಧಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಸೋಮವಾರ ಭೇಟಿ ಮಾಡಿ ಪ್ರಧಾನಿ ಮೋದಿಗೆ ಬುದ್ದಿವಾದ ಮತ್ತು ಆದೇಶ ನೀಡಿ ಎಂದು ಮನವಿ ಮಾಡಿದ್ದಾರೆ. (ಚಿತ್ರ: ಪಿಟಿಐ)

ಗೋಧ್ರಾ ಗಲಭೆ
ಗೋಧ್ರಾ ಗಲಭೆಯನ್ನು ಮರೆಮಾಚಲು ಪ್ರಧಾನಿ ಮೋದಿ, ಸಿಖ್ ಹತ್ಯಾಕಾಂಡದ ಬಗ್ಗೆ ಮಾತನಾಡುತ್ತಿದ್ದಾರೆ. ಅಸಹಿಷ್ಣುತೆಯ ವಿಚಾರದಲ್ಲಿ ಮೋದಿ ಬಳಿ ಉತ್ತರವಿಲ್ಲ ಎಂದು ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಲೇವಡಿ ಮಾಡಿದ್ದಾರೆ. (ಚಿತ್ರ: ಪಿಟಿಐ)












Click it and Unblock the Notifications