SBIನಲ್ಲಿ ಕಸ ಗುಡಿಸುತ್ತಿದ್ದ ಮಹಿಳೆ ಈಗ ಅದೇ ಬ್ಯಾಂಕ್‌ನಲ್ಲಿ ಮ್ಯಾನೇಜರ್: ಇದು ಛಲಗಾತಿ ಪ್ರತೀಕ್ಷಾ ಅವರ ಗೆಲುವಿನ ಕಥೆ

ಬದುಕು ಕೆಲವೊಮ್ಮೆ ನಮಗೆ ಆಯ್ಕೆಗಳನ್ನ ನೀಡುವುದಿಲ್ಲ. ಆದರೆ, ಆ ಬದುಕಿನಲ್ಲಿಎದುರಾದ ಕಷ್ಟಗಳ ವಿರುದ್ಧ ಹೇಗೆ ಹೋರಾಡಬೇಕು ಎಂಬುದನ್ನ ನಾವೇ ಆಯ್ಕೆ ಮಾಡಿಕೊಳ್ಳಬಹುದು. ಕೇವಲ 20ನೇ ವಯಸ್ಸಿನಲ್ಲಿ ಪತಿಯನ್ನ ಕಳೆದುಕೊಂಡು, ಒಂದು ಪುಟ್ಟ ಮಗುವಿನ ಜವಾಬ್ದಾರಿಯನ್ನ ಹೊತ್ತುಕೊಂಡು ಬೀದಿಗೆ ಬಿದ್ದ ಮಹಿಳೆಯೊಬ್ಬಳು, ಬ್ಯಾಂಕ್‌ ಒಂದರಲ್ಲಿ ಕಸ ಗುಡಿಸಲು ಸೇರಿಕೊಂಡಿದ್ದರು. ಆದ್ರೆ ಇಂದು ಛಲದಿಂದ ಅದೇ ಬ್ಯಾಂಕ್‌ನಲ್ಲಿ ಉನ್ನತ ಹುದ್ದೆಗೇರಿದ ಮಹಿಳೆಯ ಸಾಧನೆಯ ಕಥೆ ಇದು.

ಹೌದು, ನಾವು ಮಾತನಾಡುತ್ತಿರುವುದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಸ ಗುಡಿಸುವ ಕೆಲಸದಿಂದ ಆರಂಭಿಸಿ, ಇಂದು ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರತೀಕ್ಷಾ ತೊಂಡ್ವಾಲ್ಕರ್ ಅವರ ಬಗ್ಗೆ.

Pratiksha Tondwalkar The Inspiring Journey From SBI Sweeper to Assistant General Manager

ಪುಣೆಯಲ್ಲಿ 1964ರಲ್ಲಿ ಜನಿಸಿದ ಪ್ರತೀಕ್ಷಾ ಅವರು ಬದುಕಿನಲ್ಲಿ ಎಂದಿಗೂ ಸುಖಕರವಾಗಿರಲಿಲ್ಲ. ಮನೆಯಲ್ಲಿರುವ ಕಡು ಬಡತನದ ಕಾರಣದಿಂದಾಗಿ ತಮ್ಮ 16ನೇ ವಯಸ್ಸಿನಲ್ಲೇ ಸದಾಶಿವ್ ಕಡು ಅವರೊಂದಿಗೆ ವಿವಾಹವಾದರು. ಸದಾಶಿವ್ ಅವರು ಮುಂಬೈನ ಎಸ್‌ಬಿಐ ಶಾಖೆಯೊಂದರಲ್ಲಿ ಬುಕ್ ಬೈಂಡರ್ ಆಗಿ ಕೆಲಸ ಮಾಡುತ್ತಿದ್ದರು.

ವಿವಾಹವಾದ ಒಂದು ವರ್ಷದ ನಂತರ, ತಮ್ಮ ಪುಟ್ಟ ಮಗುವಿನೊಂದಿಗೆ ಊರಿಗೆ ಹೋಗುವಾಗ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅವರ ಪತಿ ಮೃತಪಟ್ಟರು. ಕೇವಲ 20ನೇ ವಯಸ್ಸಿಗೆ ಪ್ರತೀಕ್ಷಾ ವಿಧವೆಯಾದರು.

ಸರಿಯಾದ ಶಿಕ್ಷಣವಿಲ್ಲ, ಕೈಯಲ್ಲಿ ದುಡ್ಡಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮಗುವಿನ ಪಾಲನೆಗಾಗಿ ಪ್ರತೀಕ್ಷಾ ಅವರು ತಮ್ಮ ಪತಿ ಕೆಲಸ ಮಾಡುತ್ತಿದ್ದ ಎಸ್‌ಬಿಐ ಬ್ಯಾಂಕ್‌ನಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿಕೊಂಡರು.ಇದರಿಂದ ಪ್ರತೀಕ್ಷಾ ಅವರಿಗೆ ತಿಂಗಳಿಗೆ ಕೇವಲ 60 ರಿಂದ 65 ರೂಪಾಯಿ ಸಂಬಳ ಸಿಗುತ್ತಿತ್ತು.

ಪ್ರತಿದಿನ ಮುಂಜಾನೆ ಬ್ಯಾಂಕ್‌ನ ಶೌಚಾಲಯ ತೊಳೆಯುವುದು, ಕಸ ಗುಡಿಸುವುದು, ಟೇಬಲ್ ಒರೆಸುವುದೇ ಅವರ ದಿನನಿತ್ಯದ ಕಾಯಕವಾಗಿತ್ತು. ಮಗನಿಗೆ ಒಂದು ಬಿಸ್ಕತ್ ಪ್ಯಾಕೆಟ್ ಕೊಡಿಸಲು ಬಸ್‌ನಲ್ಲಿ ಒಂದು ಸ್ಟಾಪ್ ಮುಂಚೆಯೇ ಇಳಿದು ನಡೆದುಕೊಂಡು ಹೋಗಿ ಆ ಹಣವನ್ನ ಉಳಿಸುತ್ತಿದ್ದ ದಿನಗಳೂ ಅವರ ಬದುಕಿನಲ್ಲಿತ್ತು.

ಶಿಕ್ಷಣ ಮತ್ತು ಕಠಿಣ ಶ್ರಮ

ತನ್ನ ಬದುಕು ಕೇವಲ ಕಸ ಗುಡಿಸುವುದಕ್ಕೆ ಸೀಮಿತವಾಗಬಾರದು, ಕಚೇರಿಯಲ್ಲಿ ಇತರರು ಕೆಲಸ ಮಾಡುವುದನ್ನ ನೋಡಿ ತಾನೂ ಆ ಹುದ್ದೆಗೇರಬೇಕು ಎಂದು ಪ್ರತೀಕ್ಷಾ ತನ್ನಲ್ಲೇ ನಿರ್ಧರಿಸಿದರು. ಅವರ ಈ ಕನಸಿಗೆ ಬ್ಯಾಂಕ್‌ನ ಸಹೋದ್ಯೋಗಿಗಳು ಒಳ್ಳೇಯ ಬೆಂಬಲ ನೀಡಿದರು. ಪುಸ್ತಕಗಳನ್ನ ಖರೀದಿಸಲು ಹಣ ಸಹಾಯ ಮಾಡಿದರು ಹಾಗೂ ಪರೀಕ್ಷೆ ಬರೆಯಲು ಬ್ಯಾಂಕ್‌ನಿಂದ ಒಂದು ತಿಂಗಳ ರಜೆಯೂ ಸಿಕ್ಕಿತು. ಬಿಡುವಿನ ವೇಳೆಯಲ್ಲಿ ಓದಲು ಆರಂಭಿಸಿದ ಅವರು, ಶೇಕಡಾ 60ರಷ್ಟು ಅಂಕಗಳೊಂದಿಗೆ 10ನೇ ತರಗತಿ ಪಾಸ್ ಮಾಡಿದರು.

ಬಳಿಕ ಮುಂಬೈನ ವಿಖ್ರೋಲಿಯಲ್ಲಿರುವ ನೈಟ್ ಕಾಲೇಜಿಗೆ ಸೇರಿಕೊಂಡರು. ಹಗಲಿನಲ್ಲಿ ಕಸ ಗುಡಿಸುವ ಕೆಲಸ ಹಾಗೂ ಇತರ ಸಣ್ಣ-ಪುಟ್ಟ ಕೆಲಸಗಳನ್ನ ಮಾಡುತ್ತಾ, ರಾತ್ರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಹೀಗೆ ಕಷ್ಟಪಟ್ಟು ಓದಿ 12ನೇ ತರಗತಿ ತೇರ್ಗಡೆಯಾದರು.

1995ರಲ್ಲಿ ಸೈಕಾಲಜಿ ವಿಷಯದಲ್ಲಿ ಪದವಿ ಪಡೆದರು. ಪದವಿ ಮುಗಿಯುತ್ತಿದ್ದಂತೆ, ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಿತು. ಕಸ ಗುಡಿಸುತ್ತಿದ್ದ ಪ್ರತೀಕ್ಷಾ ತೊಂಡ್ವಾಲ್ಕರ್ ಎಸ್‌ಬಿಐ ಬ್ಯಾಂಕ್‌ನಲ್ಲಿ ಕ್ಲರ್ಕ್ (ಗುಮಾಸ್ತೆ) ಆಗಿ ಭಡ್ತಿ ಪಡೆದರು.

ಎಸ್‌ಬಿಐ ಎಜಿಎಂ ಯಶಸ್ಸಿನ ಕಥೆ

ಕ್ಲರ್ಕ್ ಹುದ್ದೆ ಸಿಕ್ಕ ತಕ್ಷಣ ಪ್ರತೀಕ್ಷಾ ಅವರ ಮನಸ್ಸು ಇಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳಲಿಲ್ಲ, ಅವರ ಗುರಿ ಇನ್ನೂ ದೊಡ್ಡದಾಗಿತ್ತು. 1993ರಲ್ಲಿ ಪ್ರಮೋದ್ ತೊಂಡ್ವಾಲ್ಕರ್ ಎಂಬುವವರನ್ನ ಎರಡನೇ ವಿವಾಹವಾದರು. ಬ್ಯಾಂಕ್ ಮೆಸೆಂಜರ್ ಆಗಿದ್ದ ಪ್ರಮೋದ್ ಅವರು ಪ್ರತೀಕ್ಷಾ ಅವರ ಕನಸುಗಳಿಗೆ ಬೆನ್ನೆಲುಬಾಗಿ ನಿಂತರು ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳನ್ನ ಬರೆಯಲು ಪ್ರೋತ್ಸಾಹಿಸಿದರು.

ತಮ್ಮ ಕಠಿಣ ಪರಿಶ್ರಮದ ಫಲವಾಗಿ, ಪ್ರತೀಕ್ಷಾ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ 2004ರಲ್ಲಿ ಟ್ರೈನಿ ಆಫೀಸರ್ ಆಗಿ ನೇಮಕಗೊಂಡರು. ಅಲ್ಲಿಂದ ಅವರ ವೃತ್ತಿಜೀವನ ಮತ್ತೊಂದು ಮೈಲಿಗಲ್ಲಿಗೆ ತಲುಪಿತು. ತಮ್ಮ ಕೆಲಸದ ಮೇಲಿನ ಶ್ರದ್ಧೆಯಿಂದ ಸ್ಕೇಲ್ 4 ಅಧಿಕಾರಿ, ಡಿಜಿಎಂ, ಸಿಜಿಎಂ ಆಗಿ ಕಾರ್ಯನಿರ್ವಹಿಸಿದ ಅವರು, ಅಂತಿಮವಾಗಿ 2022ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 'ಅಸಿಸ್ಟೆಂಟ್ ಜನರಲ್ ಮ್ಯಾನೇಜರ್' ಹುದ್ದೆಗೇರಿದರು.

ಒಂದು ಕಾಲದಲ್ಲಿ ಯಾವ ಬ್ಯಾಂಕ್‌ನ ಶೌಚಾಲಯವನ್ನ ಪ್ರತೀಕ್ಷಾ ಒರೆಸುತ್ತಿದ್ದರೋ, ಇಂದು ಅದೇ ಬ್ಯಾಂಕ್‌ನಲ್ಲಿ ಉನ್ನತ ಅಧಿಕಾರಿಯಾಗಿ ಕಚೇರಿಯಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಈ ಪಯಣ ಕೇವಲ ಒಂದು ಯಶಸ್ಸಿನ ಕಥೆಯಲ್ಲ, ಬದಲಾಗಿ ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ದೃಢಸಂಕಲ್ಪದಿಂದ ಹೋರಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+