ಕೋಮುವಾದಿ ಗುಂಪುಗಳನ್ನು ನಕಲಿ ಗಾಂಧಿ ರಾಹುಲ್ ಜಾತ್ಯಾತೀತರು ಎನ್ನುತ್ತಿದ್ದಾರೆ: ಪ್ರಲ್ಹಾದ್ ಜೋಶಿ
ನೈಜ ಕೋಮುವಾದಿ ಗುಂಪುಗಳನ್ನು ನಕಲಿ ಗಾಂಧಿ ರಾಹುಲ್ ಜಾತ್ಯಾತೀತರು ಎಂದು ಬಣ್ಣಿಸುವುದನ್ನ ನಿಲ್ಲಿಸಲಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ. ವಿದೇಶಿ ನೆಲದಲ್ಲಿ ಹಿಂದೂ ಸಂಘಟನೆಗಳನ್ನ ಟೀಕಿಸಿರುವ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಲ್ಹಾದ್ ಜೋಶಿ, ರಾಹುಲ್ ಗಾಂಧಿ ಮೊದಲು ಯಾರು ಕೋಮುವಾದಿ, ಯಾರು ಜಾತ್ಯಾತೀತರು ಎಂಬುದನ್ನ ಅರಿತಿಕೊಳ್ಳಲಿ ಎಂದು ಹೇಳಿದ್ದಾರೆ.
ಭಾರತದಲ್ಲಿ ಕೋಮುವಾದ ಹರಡುತ್ತಿರುವ ನಿಜವಾದ ಕೋಮುವಾದಿ ಮುಸ್ಲಿಂ ಲೀಗ್ ಪಕ್ಷಗಳನ್ನು ರಾಹುಲ್ ಗಾಂಧಿ ಜಾತ್ಯಾತೀತರು ಎಂದು ಬಣ್ಣಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಭಾರತದ ವಿಭಜನೆಗೆ ಮತ್ತು ಲಕ್ಷಾಂತರ ಜನರ ಸಾವಿಗೆ ಕಾರಣವಾದ ಪಕ್ಷ ಜಾತ್ಯಾತೀರು ಆಗುವುದಾದರೂ ಹೇಗೆ ಎಂದು ಪ್ರಶ್ನೆ ಮಾಡಿದ ಜೋಶಿ, ದೇಶ ವಿಭಜನೆ ಮಾಡಿದ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಲಕ್ಷಾಂತರ ಜನರಿಗೆ ಅವಮಾನ ಮಾಡಿದ್ದಾರೆ, ರಾಹುಲ್ ಗಾಂಧಿಯವರ ತುಷ್ಟೀಕರಣ ರಾಜಕೀಯಕ್ಕೆ ಕೊನೆ ಇಲ್ಲದಂತಾಗಿದೆ ಎಂದು ಕಿಡಿ ಕಾರಿದರು.

ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡು ಟ್ವೀಟ್ ಮಾಡಿರುವ ಪ್ರಲ್ಹಾದ್ ಜೋಶಿ, ಹಿಂದುಗಳಷ್ಟು ಜಾತ್ಯಾತೀತರು ಯಾರಿದ್ದಾರೆ ಎಂದಿದ್ದಾರೆ. ಹಿಂದುಗಳ ಯೋಚನೆಯಲ್ಲಿಯೇ ಜಾತ್ಯಾತೀತತೆ ಇದೆ. ಆದರೆ ರಾಹುಲ್ ಗಾಂಧಿ ಹಿಂದು ಸಂಘಟನೆಗಳು ಕೋಮುವಾದ ಬಿತ್ತುತ್ತಿವೆ ಎಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾರು ನಿಜವಾದ ಜಾತ್ಯಾತೀತರು, ಯಾರು ಧರ್ಮಾಂಧ ಪಟ್ಟಭದ್ರ ಹಿತಾಸಕ್ತಿ ಹೊಂದಿದವರು ಎಂಬುದು ದೇಶದ ಜನರಿಗೆ ಅರ್ಥಮಾಡಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರ ಈ ತುಷ್ಠಿಕರಣ ರಾಜನೀತಿ ದೇಶದಲ್ಲಿ ನಡೆಯಲ್ಲ ಎಂದು ಜೋಶಿ ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮೋದಿಯನ್ನು ಟೀಕಿಸಿದ್ದ ರಾಹುಲ್
ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರನ್ನು ಟೀಕಿಸಿದ್ದು ಬಿಜೆಪಿ ನಾಯಕರ ಕೋಪಕ್ಕೆ ಕಾರಣವಾಗಿದೆ. ಭಾರತದ ಪ್ರಧಾನಿಯನ್ನು ವಿದೇಶಿ ನೆಲದಲ್ಲಿ ನಿಂತು ಟೀಕಿಸಿದ್ದಕ್ಕೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಮಾತನಾಡುವ ಸಂದರ್ಭದಲ್ಲಿ, ಕೆಲವರು ತಮ್ಮನ್ನು ದೇವರಿಗಿಂತ ದೊಡ್ಡವರು ಎಂದು ಭಾವಿಸುತ್ತಾರೆ, ಅಂತಹ ವ್ಯಕ್ತಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಒಬ್ಬರು ಎಂದು ಹೇಳಿದ್ದರು. ನಂತರ ಮುಸ್ಲಿಂ ಲೀಗ್ ಪಕ್ಷಗಳು ಜಾತ್ಯಾತೀತರು ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.












Click it and Unblock the Notifications