ಚೀನಾವನ್ನು ಸೋಲಿಸಲು ಭಾರತಕ್ಕೆ ಇನ್ನೆಷ್ಟು ದಿನ ಬೇಕು?
ಬೆಂಗಳೂರು, ಜುಲೈ 06 : ಗುರುವಾರ ಸಂಜೆ 6.49ರ ಹೊತ್ತಿಗೆ ಭಾರತದ ಜನಸಂಖ್ಯೆ 1,342,742,628. ಒಂದೆರಡು ಸೆಕೆಂಡು ಆಸುಪಾಸಿನಲ್ಲಿ ಭಾರತದ ಬದ್ಧವೈರಿ ಚೀನಾದ ಜನಸಂಖ್ಯೆ 1,388,318,848!
ವರ್ಲ್ಡೋಮೀಟರ್ಸ್ ವೆಬ್ ಸೈಟ್ ಪ್ರಕಾರ, ಭಾರತದಲ್ಲಿ ಜನಸಂಖ್ಯೆ ಪ್ರತಿ ಸೆಕೆಂಡಿಗೆ ವೃದ್ಧಿಯಾಗುತ್ತಿದ್ದರೆ, ಚೀನಾದ ಜನಸಂಖ್ಯೆ ಕನಿಷ್ಠ 3 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತಿದೆ. ಚೀನಾವನ್ನು ಜನಸಂಖ್ಯೆಯಲ್ಲಿ ಹಿಂದೆ ಹಾಕಲು ಭಾರತಕ್ಕೆ ಇನ್ನೆಷ್ಟು ಸಮಯ ಬೇಕು? ಲೆಕ್ಕ ಹಾಕಿ!

ಇಡೀ ವಿಶ್ವದ ಜನಸಂಖ್ಯೆಯನ್ನು ಪರಿಗಣನೆಗೆ ತೆಗೆದುಕೊಂಡರೆ, ವಿಶ್ವದ ಜನಸಂಖ್ಯೆಯ ಶೇ.17.86ರಷ್ಟು ಜನರು ಭಾರತದಲ್ಲಿದ್ದರೆ, ಶೇ.18.47ರಷ್ಟು ಜನರು ಚೀನಾದಲ್ಲಿದ್ದಾರೆ. ಜನಸಂಖ್ಯೆಯನ್ನು ಅತ್ಲಾಗಿಡಿ, ಸದ್ಯಕ್ಕೆ ಎರಡೂ ದೇಶಗಳು ಯುದ್ಧಸನ್ನದ್ಧವಾಗಿ ಕುಳಿತಿವೆ.
ಆದರೆ, ಭಾರತ ಜನಸಂಖ್ಯೆಯ ವಿರುದ್ಧ ಆಂತರಿಕವಾಗಿ ಯುದ್ಧವನ್ನು ಸಾರಬೇಕಿದೆ. ಜನರಲ್ಲಿರುವ ಅಜ್ಞಾನ, ಜಾಗೃತಿಯ ಕೊರತೆ, ಉಡಾಫೆ, ವಂಶೋದ್ಧಾರ, ಗಂಡು ಮಕ್ಕಳ ಮೇಲಿನ ಅತಿಯಾದ ಪ್ರೇಮದಿಂದಾಗಿ ಸಂತಾನೋತ್ಪತ್ತಿ ಸಂಗೋಪಾಂಗವಾಗಿ ಭಾರತದಲ್ಲಿ ನಡೆಯುತ್ತಿದೆ.
ಇಂಥ ಸಮಯದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೆಗೆದುಕೊಂಡಿರುವ ಒಂದು ನಿರ್ಧಾರ ಅತ್ಯಂತ ಪ್ರಸ್ತುತವಾಗಿದೆ ಮತ್ತು ನಿಜಕ್ಕೂ ಕಣ್ಣು ತೆರೆಸುವಂತಿದೆ. ಇದೇನಪ್ಪಾ ಇಂಥಾ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರೂ ಕೆಲವರು ಹುಬ್ಬೇರಿಸಿದರೂ ಅಚ್ಚರಿಯಿಲ್ಲ.
ಅದೇನೆಂದರೆ, ಹೊಚ್ಚಹೊಸದಾಗಿ ಮದುವೆಯಾದ ಜೋಡಿಗಳಿಗೆ ಸಂತಾನ ನಿಯಂತ್ರಣಕ್ಕಾಗಿ ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳುಳ್ಳ ಮಾತ್ರೆಗಳನ್ನು ವಿತರಿಸುವುದು. ಹಲವಾರು ವಿನೂತನ ಕ್ರಮಗಳನ್ನು ಕ್ರಮಗಳನ್ನು ತೆಗೆದುಕೊಂಡಿರುವ ಯೋಗಿ ಸರಕಾರದಿಂದ ಇದು ನಿಜಕ್ಕೂ ಪ್ರಳಯಾಂತರ ನಿರ್ಧಾರವೇ.
ಇದು ಉತ್ತರಪ್ರದೇಶ ಸರಕಾರ ಮಾತ್ರವಲ್ಲ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸೇರಿದಂತೆ ಭಾರತದಲ್ಲಿರುವ ಎಲ್ಲ ರಾಜ್ಯಗಳೂ ತ್ವರಿತವಾಗಿ ಕಾಂಡೋಮ್ ವಿತರಿಸುವ, ಸುರಕ್ಷಿತ ಸಂಭೋಗದ ಬಗ್ಗೆ ತಿಳಿವಳಿಕೆ ನೀಡುವ, ಸಂತಾನೋತ್ಪಿಯನ್ನು ನಿಯಂತ್ರಿಸುವ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ.












Click it and Unblock the Notifications