ಜೈಲಿನಲ್ಲಿರುವ ಮಗನಿಗೆ ಗಾಂಜಾ ತಂದ ತಾಯಿ: ಮುಂದಾಗಿದ್ದು ರೋಚಕ..!
ಅಪರಾಧ ಕೃತ್ಯ ಮಾಡಿ ಜೈಲು ಸೇರಿರುವ ಮಗನನ್ನು ಕಾಣಲು ಬರುವ ತಾಯಿ ಸಾಮಾನ್ಯವಾಗಿ ಏನನ್ನು ತರಬಹುದು. ಊಟ, ಬಟ್ಟೆ, ಇಷ್ಟವಾದ ತಿಂಡಿ ಹೀಗೆ, ಜೈಲಿನಲ್ಲಿದ್ದರೂ ಆತನಿಗೆ ಖುಷಿ ಎನಿಸಲಿ ಎನ್ನುವ ಕಾರಣಕ್ಕೆ ಮನೆಯಿಂದ ಏನಾದರೂ ತಂದು ಕೊಡಬಹುದು. ಆದರೆ ಇಲ್ಲೊಬ್ಬಳು ಮಹಾ ತಾಯಿ ಜೈಲಿನಲ್ಲಿರುವ ಮಗನನ್ನು ಕಾಣಲು, ಆತನಿಗೆ ಖುಷಿ ಪಡಿಸಲು ಜೈಲಿಗೆ ಗಾಂಜಾವನ್ನು ತೆಗೆದುಕೊಂಡು ಹೋದ ಘಟನೆ ಬೆಳಕಿಗೆ ಬಂದಿದೆ.
47 ವರ್ಷದ ಮಹಿಳೆಯೊಬ್ಬರು ವಿಯ್ಯೂರು ಕೇಂದ್ರ ಕಾಗೃಹದಲ್ಲಿರುವ ತನ್ನ ಮಗನನ್ನು ನೋಡಲು ಬಂದಿದ್ದು, ಜೊತೆಗೆ ಆತನಿಗೆ ನೀಡಲು 80 ಗ್ರಾಂ ಗಾಂಜಾವನ್ನು ತಂದಿದ್ದಾಳೆ. ಜೈಲಿನಲ್ಲಿರುವ ಮಗನಿಗೆ ತಾಯಿಯೇ ಗಾಂಜಾ ತೆಗೆದುಕೊಂಡ ಹೋದ ಘಟನೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಹರಿಕೃಷ್ಣನ್ ಎನ್ನುವಾತ ಅಪರಾಧ ಕೃತ್ಯ ಎಸಗಿ ವಿಯ್ಯೂರು ಜೈಲು ಸೇರಿದ್ದ. ಈತನನ್ನು ಕಾಣಲು ಬಂದ ಆತನ ತಾಯಿ ಲತಾ, ಜೊತೆಗೆ ಗಾಂಜಾವನ್ನು ಸಹ ತೆಗೆದುಕೊಂಡು ಬಂದಿದ್ದಾಳೆ. ಜೈಲಿನೊಳಗಿರುವ ಮಗನಿಗೆ ಗಾಂಜಾ ಕೊಡಲು ಯತ್ನಿಸಿ, ತಾಯಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಹರಿಕೃಷ್ಣನ್ ತಾಯಿ ಬರುತ್ತಿದ್ದಂತೆ ಅನುಮಾನಗೊಂಡ ವಿಯ್ಯೂರು ಕೇಂದ್ರ ಕಾರಾಗೃಹದ ಸಿಬ್ಬಂದಿ ಪ್ರವೇಶ ದ್ವಾರದ ಬಳಿ ತಡೆದು ಆಕೆಯನ್ನು ವಿಚಾರಿಸಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಕೆಯ ಬಳಿ ಗಾಂಜಾ ಇರುವುದು ಪತ್ತೆಯಾಗಿದೆ. ಮಹಿಳೆ ರೆಡ್ ಹ್ಯಾಂಡ್ ಆಗಿ ಕಾರಾಗೃಹದ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದು, ಸುಮಾರು 80 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಆಕೆಯನ್ನು ಬಂಧಿಸಿರುವ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಮುಂದಾಗಿದ್ದಾರೆ. ಯಾಕೆಂದರೆ ಈ ಹಿಂದೆ ಸಹ ಹರಿಕೃಷ್ಣನ್‌ನನ್ನು ಕಾಣಲು ತಾಯಿ ಲತಾ ಜೈಲಿಗೆ ಬಂದಿದ್ದಳು. ಹೀಗಾಗಿ ಪೊಲೀಸರು ತತ್‌ಕ್ಷಣ ತನಿಖೆಯನ್ನು ಚುರುಕುಗೊಳಿಸಿದ್ದಾರೆ.












Click it and Unblock the Notifications