ಪಾಕಿಸ್ತಾನದ ಸಂಭಾವ್ಯ ಪ್ರಧಾನಿಗೆ ಕರೆ ಮಾಡಿದ ನರೇಂದ್ರ ಮೋದಿ
ನವದೆಹಲಿ, ಜುಲೈ 30: ಪಾಕಿಸ್ತಾನದ ಪ್ರಧಾನಿ ಹುದ್ದೆ ಅಲಂಕರಿಸಲಿರುವ ಪಾಕಿಸ್ತಾನ್ ತಾರೇಕ್ ಇ ಇನ್ಸಾಫ್ ಪಕ್ಷದ ಮುಖಂಡ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್‌ಗೆ ಕರೆ ಮಾಡಿರುವ ಭಾರತದ ಪ್ರಧಾನಿ ಮೋದಿ ಅವರು ಶುಭಾಶಯ ತಿಳಿಸಿದ್ದಾರೆ.
ಇಮ್ರಾನ್ ಖಾನ್‌ಗೆ ಕರೆ ಮಾಡಿದ್ದ ಮೋದಿ ಅವರು, ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಇನ್ನಷ್ಟು ಬಲಗೊಳ್ಳಲಿ ಎಂದಿದ್ದಾರೆ. ಅಲ್ಲದೆ ನೆರೆ-ಹೊರೆ ದೇಶಗಳಲ್ಲಿ ಶಾಂತಿ ನೆಲೆಸಲು ಮತ್ತು ಪರಸ್ಪರ ಪೂರಕವಾಗಿ ಅಭಿವೃದ್ಧಿ ಹೊಂದಲು ಕೈಗೆತ್ತುಕೊಳ್ಳಬಹುದಾದ ಕಾರ್ಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ.

ಇಮ್ರಾನ್ ಖಾನ್ ನೇತೃತ್ವದ ಪಿಟಿಐ (ಪಾಕಿಸ್ತಾನ್ ತಾರೇಕ್ ಇ ಇನ್ಸಾಫ್) ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಇಮ್ರಾನ್ ಖಾನ್ ಅವರು ಪ್ರಧಾನಿ ಪಟ್ಟ ಅಲಂಕರಿಸುವುದು ಬಹುತೇಕ ಖಚಿತವಾಗಿದೆ. ಇಮ್ರಾನ್ ಖಾನ್ ಅವರು ಆಗಸ್ಟ್ 14 ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಂದು ಪಾಕಿಸ್ತಾನದ ಸ್ವತಂತ್ರ್ಯ ದಿನಾಚರಣೆಯೂ ಹೌದು.
ಚುನಾವಣೆಯಲ್ಲಿ ಗೆದ್ದ ನಂತರ ಸುದ್ದಿಗೋಷ್ಠಿ ನಡೆಸಿದ್ದ ಇಮ್ರಾನ್ ಖಾನ್ ಭಾರತದೊಂದಿಗೆ ವಾಣಿಜ್ಯ ಬಾಂಧವ್ಯ ಉತ್ತಮ ಪಡಿಸುವುದಾಗಿ ಹೇಳಿದ್ದರು. ಆದರೆ ಅದರ ಮರು ದಿನವೇ ಭಾರತ ಒಂದು ಹೆಜ್ಜೆ ಮುಂದಿಟ್ಟರೆ ಪಾಕಿಸ್ತಾನ ಎರಡು ಹೆಜ್ಜೆ ಮುಂದಿಡುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದರು.












Click it and Unblock the Notifications