ಜುಲೈ 15ರಂದು 'ಕೌಶಲ್ಯ ಭಾರತ' ಕ್ಕೆ ಮೋದಿಯಿಂದ ಚಾಲನೆ
ನವದೆಹಲಿ, ಜುಲೈ 15: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದೆನಿಸಿರುವ ಕೌಶಲ್ಯ ಭಾರತ (ಸ್ಕಿಲ್ ಇಂಡಿಯಾ) ಕ್ಕೆ ಜುಲೈ 15ರಂದು ಚಾಲನೆ ಸಿಗಲಿದೆ ಎಂದು ಸಚಿವ ರಾಜೀವ್ ಪ್ರತಾಪ್ ರೂಡಿ ಹೇಳಿದ್ದಾರೆ.
ವಿಶ್ವ ಯುವ ಕೌಶಲ್ಯ ದಿನ(ಜುಲೈ 15)ದಂದು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಿಷನ್ ಅಧಿಕೃತವಾಗಿ ಆರಂಭಗೊಳ್ಳಲಿದೆ. [ಮೋದಿ ಕನಸುಗಳು: ಸ್ವಚ್ಛಭಾರತದಿಂದ ಡಿಜಿಟಲ್ ಇಂಡಿಯಾ ತನಕ]
ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮ 2015 ಕುರಿತ ನಿಯಮಾವಳಿಗಳನ್ನು ಕೂಡಾ ಪ್ರಕಟಿಸಲಾಗುವುದು ಎಂದು ಕೌಶಲ್ಯ ಅಭಿವೃದ್ಧಿ ಸಚಿವ ರಾಜೀವ್ ಪ್ರತಾಪ್ ಹೇಳಿದರು.

ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ(ಪಿಎಂಕೆ ವಿವೈ) ಮೂಲಕ ಮುಂದಿನ ವರ್ಷದಲ್ಲಿ 24 ಲಕ್ಷ ಯುವ ಸಮುದಾಯಕ್ಕೆ ಉದ್ಯೋಗ, ತರಬೇತಿ, ಕೌಶಲ್ಯ ಅಭಿವೃದ್ಧಿ ಸಿಗಲಿದೆ. ಕೌಶಲ್ಯ ಸಾಲ ನೀಡಲಾಗುತ್ತದೆ. 5 ಸಾವಿರ ರು ನಿಂದ 1.5 ಲಕ್ಷ ರು ತನಕ ಸಾಲ ಪಡೆಯಬಹುದು. ಇದು ದೇಶದ 34 ಲಕ್ಷ ಯುವ ಸಮುದಾಯಕ್ಕೆ ನೆರವಾಗಲಿದೆ ಎಂದು ಸಚಿವ ರಾಜೀವ್ ತಿಳಿಸಿದರು.
ದೇಶದ ಶೇ.54ರಷ್ಟು ಜನರು 25 ವರ್ಷಕ್ಕಿಂತ ಕೆಳಗಿದ್ದಾರೆ. ಕೌಶಲ್ಯ ಭಾರತ (ಸ್ಕಿಲ್ ಇಂಡಿಯಾ) ಯೋಜನೆಯು "ಮೇಕ್ ಇನ್ ಇಂಡಿಯಾ' ಜತೆ ಸಮನ್ವಯ ಹೊಂದುವಂತಾಗಬೇಕು ಎಂಬ ಮೋದಿ ಅವರ ಆಶಯದಂತೆ ಯೋಜನೆ ರೂಪಿತಗೊಂಡಿದೆ. ಸ್ಕಿಲ್ ಇಂಡಿಯಾ ಭಾರತದ ಯುವಜನತೆಯ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯೋಗಕ್ಕೆ ತಯಾರಿಗೊಳಿಸುವ ಯೋಜನೆ. 2020ರ ಹೊತ್ತಿಗೆ 500 ಮಿಲಿಯನ್ ಯುವ ಜನತೆಗೆ ಇದರಿಂದ ಲಾಭ ಸಿಗುವ ಭರವಸೆಯನ್ನು ಎನ್ ಡಿಎ ಸರ್ಕಾರ ನೀಡುತ್ತಿದೆ. (ಐಎಎನ್ಎಸ್)











Click it and Unblock the Notifications