Jammu & Kashmir Election: ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ನರೇಂದ್ರ ಮೋದಿ ಪ್ರಚಾರ
ದಶಕಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ದಶಕಗಳ ಬಳಿಕ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಮೊದಲ ಎರಡು ಹಂತದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಮೂರನೇ ಹಂತದ ಚುನಾವಣೆ ಅಕ್ಟೋಬರ್ 1ರಂದು ನಡೆಯಲಿದೆ. ಮೂರನೇ ಹಂತದ ಚುನಾವಣೆಗಾಗಿ ಬಿಜೆಪಿ ಭರ್ಜರಿ ಪ್ರಚಾರ ಮಾಡುತ್ತಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ರ್‍ಯಾಲಿಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.
ಜಮ್ಮು ನಗರದ ಎಂ.ಎ ಸ್ಟೇಡಿಯಂನಲ್ಲಿ ನಡೆಯಲಿರುವ ಬೃಹತ್ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ 'ಬಿಜೆಪಿ ಸಂಕಲ್ಪ ಮಹಾ ರ್‍ಯಾಲಿ' ಎಂದು ಹೆಸರಿಡಲಾಗಿದೆ.

370ನೇ ವಿಧಿಯನ್ನು ರದ್ದು ಮಾಡಿದ ಬಳಿಕ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ, ಅಕ್ಟೋಬರ್ 1 ರಂದು ನಡೆಯಲಿರುವ ಜಮ್ಮು ವಿಭಾಗದ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿರುವ 24 ಬಿಜೆಪಿ ಅಭ್ಯರ್ಥಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಅಭ್ಯರ್ಥಿಗಳು ಜಮ್ಮು ವಿಭಾಗದ ಜಮ್ಮು, ಸಾಂಬಾ, ಕಥುವಾ ಮತ್ತು ಉಧಂಪುರ ಜಿಲ್ಲೆಗಳಿಂದ ಸ್ಪರ್ಧೆ ಮಾಡಿದ್ದಾರೆ.
ಜಮ್ಮು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳು, ಸಾಂಬಾ ಜಿಲ್ಲೆಯ ಮೂರು ಕ್ಷೇತ್ರಗಳು, ಕಥುವ ಜಿಲ್ಲೆಯ ಆರು ಕ್ಷೇತ್ರಗಳು ಮತ್ತು ಉಧಂಪುರ್ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಿದ್ದು, ಭರ್ಜರಿ ಪ್ರಚಾರ ನಡೆಯುತ್ತಿದೆ.
ನಾಲ್ಕನೇ ಬಾರಿ ಪ್ರಚಾರ
ಪ್ರಧಾನಿ ನರೇಂದ್ರ ಮೋದಿ ನಾಲ್ಕನೇ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಈ ಮೊದಲು ಸೆಪ್ಟೆಂಬರ್ 14ರಂದು ದೋಡಾ, ಶ್ರೀನಗರದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ಬಳಿಕ ಸೆಪ್ಟೆಂಬರ್ 19ರಂದು ಮಾತಾವೈಷ್ಣೋದೇವಿ ದೇಗುಲದ ಕತ್ರಾ ಬೇಸ್ ಕ್ಯಾಂಪ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ್ದರು.
ಭಾರಿ ಬಿಗಿ ಭದ್ರೆತೆ
ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನಲೆಯಲ್ಲಿ ಜಮ್ಮುವಿನಲ್ಲಿ ಭಾರಿ ಬಿಗಿಭದ್ರತೆ ಏರ್ಪಡಿಸಲಾಗಿದೆ. ನಗರದ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.
ಜಮ್ಮು ವಿಭಾಗದಲ್ಲಿಬಿಜೆಪಿ ಬಲಿಷ್ಠವಾಗಿದ್ದು ಈ ಬಾರಿ ಕೂಡ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ. 2014ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 87 ವಿಧಾನಸಭಾ ಕ್ಷೇತ್ರಗಳಲ್ಲಿ 25 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು, ಅದರಲ್ಲಿ ಹೆಚ್ಚಿನ ಬಿಜೆಪಿ ಅಭ್ಯರ್ಥಿಗಳು ಜಮ್ಮು ವಿಭಾಗದಿಂದ ಗೆಲುವು ಸಾಧಿಸಿದ್ದರು.
ಡಿಲಿಮಿಟೇಶನ್ ಬಳಿಕ ಈ ಬಾರಿ 90 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಕಾಶ್ಮೀರದಲ್ಲಿ 47 ಕ್ಷೇತ್ರಗಳಿದ್ದು ಮತ್ತು ಜಮ್ಮು ವಿಭಾಗದಲ್ಲಿ 43 ಕ್ಷೇತ್ರಗಳಿವೆ.












Click it and Unblock the Notifications