500 ರೂಪಾಯಿ ಮುಖಬೆಲೆಯ ಮೋದಿ ಫೋಟೋ ಕಂಡು ಕೇಳರಿಯದ ಮೊತ್ತಕ್ಕೆ ಹರಾಜು!
Recommended Video
ನವದೆಹಲಿ, ಸೆ 18: ಪ್ರಧಾನಿ ಮೋದಿಗೆ, ಸ್ವದೇಶ, ವಿದೇಶಗಳ ಗಣ್ಯರು, ಅಭಿಮಾನಿಗಳು ನೀಡುವ ಗಿಫ್ಟ್ ಅನ್ನು ವರ್ಷಕ್ಕೊಮ್ಮೆ, ಇಲ್ಲಾಂದರೆ ಎರಡು ಬಾರಿ ಪ್ರಧಾನಮಂತ್ರಿ ಕಾರ್ಯಾಲಾಯ ಹರಾಜಿಗಿಡುತ್ತದೆ.
ಬಂದ ಹಣವನ್ನು 'ನಮಾಮಿ ಗಂಗಾ' ಪ್ರಾಜೆಕ್ಟಿಗೆ ನೀಡುವ ಪರಿಪಾಠವನ್ನು ಮೋದಿ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಅದರಂತೇ, ಸೆಪ್ಟಂಬರ್ ತಿಂಗಳಲ್ಲಿ ಅವರಿಗೆ ಬಂದ ಗಿಫ್ಟ್ ಗಳನ್ನು ಹರಾಜಿಗೆ ಇಡಲಾಗಿದೆ.
ಆರು ತಿಂಗಳ ಹಿಂದೆ, ಪ್ರಧಾನಿ ಗುಜರಾತ್ ನಲ್ಲಿ ಅಧಿಕೃತ ಪ್ರವಾಸದಲ್ಲಿದ್ದಾಗ, ಅಲ್ಲಿನ ಸಿಎಂ ವಿಜಯ್ ರೂಪಾನಿ, ಬೆಳ್ಳಿಯ ಕಲಶವನ್ನು ಮೋದಿಗೆ ಉಡುಗೊರೆಯಾಗಿ ನೀಡಿದ್ದರು.
ಹದಿನೆಂಟು ಸಾವಿರ ರೂಪಾಯಿ ಮುಖಬೆಲೆಯ ಈ ಉಡುಗೊರೆಯನ್ನು ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್ ಮ್ಯೂಸಿಯಂನಲ್ಲಿ ಇಡಲಾಗಿದೆ. ಇದು ಮತ್ತು ಮೋದಿಯ ಫೋಟೊ ದಾಖಲೆ ಮೊತ್ತಕ್ಕೆ ಇ-ಆಕ್ಷನ್ ನಲ್ಲಿ ಬಿಡ್ ಆಗಿದೆ.

ಮೋದಿಯವರು ಪಡೆದ ಉಡುಗೊರೆಗಳನ್ನು ಹರಾಜು ಹಾಕುವ ಪ್ರಕ್ರಿಯೆ
ಪ್ರಧಾನಮಂತ್ರಿ ಕಾರ್ಯಾಲಯ ಮೋದಿಯವರು ಪಡೆದ ಉಡುಗೊರೆಗಳನ್ನು ಹರಾಜು ಹಾಕುತ್ತಿರುವುದು ಈ ವರ್ಷದಲ್ಲಿ ಇದು ಎರಡನೆಯ ಬಾರಿಗೆ. ಇದೇ ವರ್ಷದ ಜನವರಿ ತಿಂಗಳಲ್ಲಿ ಸುಮಾರು 1,800 ವಸ್ತುಗಳನ್ನು ಹರಾಜು ಹಾಕಲಾಗಿತ್ತು. 4,000 ಕ್ಕೂ ಹೆಚ್ಚು ಆಸಕ್ತರು ಬಿಡ್ ನಲ್ಲಿ ಭಾಗವಹಿಸಿದ್ದರು. ಈ ಬಾರಿಯೂ ಇ-ಆಕ್ಷನ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಬೆಳ್ಳಿಯ ಕಲಶ, ಅದರ ಮೇಲೊಂದು ತೆಂಗಿನಕಾಯಿ
ಗುಜರಾತ್ ಪ್ರವಾಸದಲ್ಲಿದ್ದಾಗ ಸಿಎಂ ರೂಪಾನಿ, ಬೆಳ್ಳಿಯ ಕಲಶ, ಅದರ ಮೇಲೊಂದು ತೆಂಗಿನಕಾಯಿ ಇಟ್ಟು ಪ್ರಧಾನಿ ಮೋದಿಗೆ ಉಡುಗೊರೆಯನ್ನು ನೀಡಿದ್ದರು. ಹದಿನೆಂಟು ಸಾವಿರ ಮುಖಬೆಲೆಯ ಈ ಬೆಳ್ಳಿಯ ಕಲಶನ್ನು ಬಿಡ್ ನಲ್ಲಿ ಒಂದು ಕೋಟಿ ರೂಪಾಯಿಗೆ ಕೂಗಲಾಗಿದೆ. ಈ ಗಿಫ್ಟ್ ನಲ್ಲಿ ಗುಜರಾತಿ ಭಾಷೆಯಲ್ಲಿ ಸಂದೇಶವನ್ನು ಬರೆಯಲಾಗಿತ್ತು. ಬಿಡ್ ಆದ ಮೊತ್ತ 1,00,00,300/-

ಐನೂರು ರೂಪಾಯಿ ಮುಖಬೆಲೆಯ ಮೋದಿಯವರ ಭಾವಚಿತ್ರವಿರುವ ಫೋಟೋ
ಬೆಳ್ಳಿ ಕಲಶವಾದರೂ ಓಕೆ. ಆದರೆ, ಕೇವಲ ಐನೂರು ರೂಪಾಯಿ ಮುಖಬೆಲೆಯ ಮೋದಿಯವರ ಭಾವಚಿತ್ರವಿರುವ ಫೋಟೋ, ಹರಾಜಿನಲ್ಲಿ ನಂಬಲು ಅಸಾಧ್ಯವಾದ ಮೊತ್ತಕ್ಕೆ ಬಿಡ್ ಆಗಿದೆ. ಈ ಫೋಟೋವನ್ನು ಬಿಡ್ ದಾರರೊಬ್ಬರು ಒಂದು ಕೋಟೀ ರೂಪಾಯಿಗೆ ಕೂಗಿ, ಬಹುತೇಕ ತನ್ನದಾಗಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಪ್ರಧಾನಿ ಮೋದಿಯವರ ಸಂದೇಶವೂ ಇದೆ. ಬಿಡ್ ಆದ ಮೊತ್ತ 1,00,00,100/-

ಎರಡು ಲಕ್ಷ ರೂಪಾಯಿವರೆಗಿನ ಮುಖಬೆಲೆಯ 2,772 ವಿವಿಧ ಉಡುಗೊರೆಗಳು
ಇನ್ನೂರು ರೂಪಾಯಿಯಿಂದ ಎರಡೂವರೆ ಲಕ್ಷ ರೂಪಾಯಿವರೆಗಿನ ಮುಖಬೆಲೆಯ 2,772 ವಿವಿಧ ಉಡುಗೊರೆಗಳನ್ನು ಈ ಬಾರಿ ಹರಾಜು ಹಾಕಲಾಗುತ್ತಿದೆ. ಉಡುಗೊರೆಯಲ್ಲಿ, ಶಾಲ್ ಗಳು, ಜ್ಯಾಕೆಟ್, ಖಡ್ಗ ಮುಂತಾದ ವಸ್ತುಗಳೂ ಇವೆ. ಅಕ್ಟೋಬರ್ ಮೂರಕ್ಕೆ ಇ-ಆಕ್ಷನ್ ಮುಗಿಯಲಿದೆ. ಪ್ರತೀ ವಾರಕ್ಕೊಮ್ಮೆ, ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡುವ ಗಿಫ್ಟ್ ಗಳನ್ನು ಬದಲಾಯಿಸಲಾಗುತ್ತದೆ.

www.pmmementos.gov.in ವೆಬ್ಸೈಟ್
ಇ-ಆಕ್ಷನ್ www.pmmementos.gov.in ವೆಬ್ಸೈಟಿನ ಮೂಲಕ ನಡೆಯಲಿದೆ. ಆರ್ಟ್ ವರ್ಕ್, ಗಡಿಯಾರ, ಡ್ರಾಯಿಂಗ್, ಪುಸ್ತಕಗಳು, ಬಟ್ಟೆ, ವಿಗ್ರಹ ಹೀಗೆ ವಿವಿಧ ವಿಭಾಗಗಳನ್ನು ವೆಬ್ಸೈಟಿನಲ್ಲಿ ಮಾಡಲಾಗಿದೆ. ಹರಾಜಿಗಿರುವ ಎಲ್ಲಾ ವಸ್ತುಗಳನ್ನು ವೆಬ್ಸೈಟಿನಲ್ಲಿ ನೋಡಬಹುದಾಗಿದೆ.












Click it and Unblock the Notifications