ಮಾರುಕಟ್ಟೆಗೆ 10-20 ರೂ.ಯ ಪ್ಲಾಸ್ಟಿಕ್ ನೋಟು : ಹೊಸ ನೋಟು ಬಂದ ಮೇಲೆ ಹಳೆಯ ನೋಟು ಏನು ಮಾಡುವುದು?
ದೇಶದಲ್ಲಿ 10 ಮತ್ತು 20 ರೂಪಾಯಿ ನೋಟುಗಳು ಶೀಘ್ರದಲ್ಲೇ ಬದಲಾಗಬಹುದು. 10 ಮತ್ತು 20 ರ ಪಾಲಿಮರ್ ಬ್ಯಾಂಕ್ ನೋಟುಗಳ ಫೀಲ್ಡ್ ಟ್ರಯಲ್‌ಗೆ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಯಡಿಯಲ್ಲಿ, 10 ಮತ್ತು 20 ರ 100 ಕೋಟಿ ಪಾಲಿಮರ್ ಅಥವಾ ಪ್ಲಾಸ್ಟಿಕ್ ನೋಟುಗಳನ್ನು ನೀಡಲಾಗುವುದು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ಈ ನೋಟುಗಳ ಬಳಕೆಯ ಸಾಧ್ಯತೆ ಮತ್ತು ಬಾಳಿಕೆಯನ್ನು ನಿರ್ಣಯಿಸಿದ ನಂತರ ಅವುಗಳ ಭವಿಷ್ಯದ ಬಗ್ಗೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು.
ಈ ಹೊಸ ನೋಟು ಜಾರಿಗೆ ಬಂದ ತಕ್ಷಣ ಪ್ರಸ್ತುತ ಚಲಾವಣೆಯಲ್ಲಿರುವ 10 ಮತ್ತು 20 ರೂ.ಯ ಕಾಗದದ ನೋಟುಗಳನ್ನು ಏನು ಮಾಡುವುದು? ಈ ನೋಟುಗಳು ತಕ್ಷಣದಿಂದಲೇ ಮೌಲ್ಯ ಕಳೆದುಕೊಳ್ಳುತ್ತದೆಯೇ ಎನ್ನುವ ಪ್ರಶ್ನೆ ಈಗ ಮೂಡುವುದು ಸಹಜ. ಆದರೆ, ಹೊಸ ನೋಟು ಮಾರುಕಟ್ಟೆಗೆ ಬಂದ ತಕ್ಷಣ ಹಳೆ ನೋಟು ಬ್ಯಾನ್ ಆಗಿ ಬಿಡುತ್ತದೆ ಎಂದಲ್ಲ. ಆರ್‌ಬಿಐ ಯೋಜನೆಯ ಪ್ರಕಾರ, ಹೊಸ ನೋಟು ಬಂದ ಬಳಿಕವೂ ಹಳೆಯ ನೋಟುಗಳು ಕೂಡಾ ಚಲಾವಣೆಯಲ್ಲಿ ಇರುತ್ತವೆ.

ಸಣ್ಣ ಮುಖಬೆಲೆಯ ನೋಟುಗಳ ಬಾಳಿಕೆ ಮತ್ತು ಜೀವಿತಾವಧಿಯನ್ನು ಹೆಚ್ಚಿಸಲು ಈ ಕ್ರಮವನ್ನು ನಿರ್ದಿಷ್ಟವಾಗಿ ತೆಗೆದುಕೊಳ್ಳಲಾಗುತ್ತಿದೆ. ಆರ್‌ಬಿಐ ಪ್ರಕಾರ, 10 ಮತ್ತು 20 ರೂ.ಯಂತಹ ಕಡಿಮೆ ಮುಖಬೆಲೆಯ ನೋಟುಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದ್ದರಿಂದ ಅವು ಬೇಗನೆ ಹಾಳಾಗುತ್ತದೆ ಕೂಡಾ. ಈ ಸಮಸ್ಯೆಗೆ ಪರಿಹಾರವಾಗಿ ಈಗ ಪಾಲಿಮರ್ ನೋಟುಗಳನ್ನು ತರಲು ಸರ್ಕಾರ ಮುಂದಾಗಿದೆ.
ಭಾರತದಲ್ಲಿ ಈಗ ಪಾಲಿಮರ್ ನೋಟುಗಳನ್ನು ಪರಿಚಯಿಸಲಾಗುತ್ತದೆಯೇ?
ಹೌದು, ಆದರೆ ದೇಶಾದ್ಯಂತ ಅವುಗಳನ್ನು ನಿಯಮಿತವಾಗಿ ನೀಡಲಾಗುತ್ತಿಲ್ಲ. ಸರ್ಕಾರವು ಆರ್‌ಬಿಐಗೆ ಮೊದಲು ಫೀಲ್ಡ್ ಟ್ರಯಲ್ ನಡೆಸಲು ಅನುಮೋದನೆ ನೀಡಿದೆ. ಈ ಪ್ರಯೋಗಗಳ ಫಲಿತಾಂಶಗಳ ಆಧಾರದ ಮೇಲೆ, ನಿಯಮಿತ ಮುದ್ರಣ ಮತ್ತು ಪಾಲಿಮರ್ ನೋಟುಗಳ ದೊಡ್ಡ ಪ್ರಮಾಣದ ವಿತರಣೆಯನ್ನು ಪ್ರಾರಂಭಿಸಬೇಕೆ ಬೇಡವೇ ಎನ್ನುವುದರ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ಪ್ರಸ್ತಾವನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ, 1934 ರ ಸೆಕ್ಷನ್ 25 ರ ಅಡಿಯಲ್ಲಿ ಆರ್‌ಬಿಐನ ಕೇಂದ್ರ ಮಂಡಳಿಯು ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರ ಕೂಡಾ ಈ ಪ್ರಸ್ತಾವನೆಯನ್ನು ಅನುಮೋದಿಸಿದೆ.
ಆರ್‌ಬಿಐ ಪ್ರಕಾರ, ಈಗ ಅಸ್ತಿತ್ವದಲ್ಲಿರುವ ಕಾಗದದ ನೋಟುಗಳ ಜೊತೆಗೆ ಪಾಲಿಮರ್ ನೋಟುಗಳನ್ನು ನೀಡಲು ಪ್ರಸ್ತಾಪಿಸಲಾಗಿದೆ. ಇದರರ್ಥ ಪಾಲಿಮರ್ ನೋಟುಗಳು ಸದ್ಯಕ್ಕೆ ಕಾಗದದ ನೋಟುಗಳನ್ನು ಸಂಪೂರ್ಣವಾಗಿ ಬದಲಾಯಿಸುವುದಿಲ್ಲ. ಎರಡೂ ರೀತಿಯ ಕರೆನ್ಸಿಗಳನ್ನು ಏಕಕಾಲದಲ್ಲಿ ಚಲಾವಣೆ ಮಾಡಬಹುದು.
ಎಷ್ಟು ಪಾಲಿಮರ್ ನೋಟುಗಳನ್ನು ನೀಡಲಾಗುವುದು?
10 ಮತ್ತು 20 ರೂಪಾಯಿ ಮುಖಬೆಲೆಯ 1 ಬಿಲಿಯನ್ ಪಾಲಿಮರ್ ನೋಟುಗಳನ್ನು ಉತ್ಪಾದಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ. ಅಂದರೆ ಈ ಎಲ್ಲಾ ನೋಟುಗಳನ್ನು ತಕ್ಷಣವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದಲ್ಲ. ಮೊದಲನೆಯದಾಗಿ, ಈ ನೋಟುಗಳನ್ನು ನೈಜ ಜಗತ್ತಿನ ಪರಿಸ್ಥಿತಿಗಳಲ್ಲಿ ಪರೀಕ್ಷಿಸಲಾಗುತ್ತದೆ. ನಂತರ ಆರ್‌ಬಿಐ ಅವುಗಳ ಬಾಳಿಕೆ, ನಿರ್ವಹಣೆ ಮತ್ತು ಬಳಕೆಗೆ ಸಂಬಂಧಿಸಿದ ಸವಾಲುಗಳನ್ನು ನೋಡಿಕೊಂಡು ದೊಡ್ಡ ಪ್ರಮಾಣದಲ್ಲಿ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ.
ಏನಿದು ಫೀಲ್ಡ್ ಟ್ರಯಲ್ ?
ಫೀಲ್ಡ್ ಟ್ರಯಲ್ ಎಂದರೆ ಸೀಮಿತ ಅಥವಾ ನಿಯಂತ್ರಿತ ಪ್ರಮಾಣದಲ್ಲಿ ಹೊಸ ವ್ಯವಸ್ಥೆ ಅಥವಾ ಉತ್ಪನ್ನವನ್ನು ಪರೀಕ್ಷಿಸುವುದು. ಪಾಲಿಮರ್ ನೋಟುಗಳಿಗೂ ಇದೇ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತಿದೆ. ಸಾರ್ವಜನಿಕರು, ಅಂಗಡಿಯವರು, ಬ್ಯಾಂಕುಗಳು ಮತ್ತು ನಗದು ನಿರ್ವಹಣಾ ವ್ಯವಸ್ಥೆಗಳಿಗೆ RBI ಮೊದಲು ಈ ನೋಟುಗಳನ್ನು ನೀಡುತ್ತದೆ. ನಂತರ ಈ ನೋಟುಗಳು ಎಷ್ಟು ಪರಿಣಾಮಕಾರಿಯಾಗಿದೆ ಎನ್ನುವುದನ್ನು ಪರಿಶೀಲಿಸಲಾಗುತ್ತದೆ. ನೋಟುಗಳು ಕಾಗದದ ನೋಟುಗಳಿಗಿಂತ ಬಲವಾಗಿವೆಯೇ ಎಂದು ಪರಿಶೀಲಿಸಿದರೆ ಸಾಕಾಗುವುದಿಲ್ಲ. ಇತರ ಹಲವು ಅಂಶಗಳನ್ನು ಸಹ ಪರೀಕ್ಷಿಸಬೇಕಾಗುತ್ತದೆ. ಅವುಗಳೆಂದರೆ
೧.ಒಂದು ನೋಟು ಎಷ್ಟು ಕಾಲ ಉಳಿಯುತ್ತದೆ?
೨.ಪದೇ ಪದೇ ಮಡಚಿದ ನಂತರ ಅದರ ಸ್ಥಿತಿ ಹೇಗಿರುತ್ತದೆ?
೩.ಶಾಖ ಮತ್ತು ತೇವಾಂಶವು ಅದರ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
೪.ಮೆಶಿನ್ ಅದನ್ನು ಗುರುತಿಸುವಲ್ಲಿ ಸಮಸ್ಯೆಯನ್ನು ಎದುರಿಸುತ್ತವೆಯೇ ?
೫.ಎಟಿಎಂಗಳು ಮತ್ತು ನಗದು ಸಂಸ್ಕರಣಾ ಮಿಶಿನ್‌ಗಳಲ್ಲಿ ಇದನ್ನು ಹೇಗೆ ಬಳಸಲಾಗುತ್ತದೆ?
೬.ಜನರು ಅದನ್ನು ಗುರುತಿಸುವುದು ಮತ್ತು ಬಳಸುವುದು ಸುಲಭವೇ?
೭.ನೋಟಿನ ಭದ್ರತಾ ವೈಶಿಷ್ಟ್ಯಗಳು ಎಷ್ಟು ಪರಿಣಾಮಕಾರಿ?
೮.ಉತ್ಪಾದಿಸಲು ಮತ್ತು ನಿರ್ವಹಿಸಲು ಎಷ್ಟು ವೆಚ್ಚವಾಗುತ್ತದೆ?
ಈ ಎಲ್ಲಾ ಅಂಶಗಳನ್ನು ಮೌಲ್ಯಮಾಪನ ಮಾಡಿದ ನಂತರವೇ ಪಾಲಿಮರ್ ನೋಟುಗಳನ್ನು ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು.
ಪಾಲಿಮರ್ ನೋಟುಗಳ ಪ್ರಯೋಜನ
ಭಾರತದಲ್ಲಿ ಹೆಚ್ಚಿನ ನೋಟುಗಳನ್ನು ಕಾಗದ ಆಧಾರಿತ ವಸ್ತುವಿನಿಂದ ತಯಾರಿಸಲಾಗುತ್ತದೆ. ಪಾಲಿಮರ್ ನೋಟುಗಳು ಕಾಗದದ ಬದಲಿಗೆ ವಿಶೇಷ ರೀತಿಯ ಪ್ಲಾಸ್ಟಿಕ್ ಆಧಾರಿತ ವಸ್ತುವನ್ನು ಬಳಸುತ್ತವೆ. ಪಾಲಿಮರ್ ನೋಟುಗಳು ಸಾಮಾನ್ಯ ಕಾಗದದ ನೋಟುಗಳಂತೆ ಕಾಣುತ್ತವೆ, ಕಾರ್ಯನಿರ್ವಹಿಸುತ್ತವೆ. ಆದರೆ ಅವುಗಳ ಮೂಲವು ವಿಭಿನ್ನವಾಗಿರುತ್ತದೆ. ಇದು ನೋಟಿನ ಶಕ್ತಿ ಮತ್ತು ಬಾಳಿಕೆಯನ್ನು ಹೆಚ್ಚಿಸುತ್ತದೆ.
ಪೇಪರ್ ನೋಟುಗಳನ್ನು ಪಾಲಿಮರ್ ನೋಟುಗಳೊಂದಿಗೆ ಬದಲಾಯಿಸಲು ಅವುಗಳ ಸುಧಾರಿತ ಬಾಳಿಕೆ ಒಂದು ಪ್ರಮುಖ ಕಾರಣ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ಧಾರೆ. ಅವರ ಪ್ರಕಾರ, ಕಡಿಮೆ ಮೌಲ್ಯದ ನೋಟುಗಳಿಗೆ ಇದು ವಿಶೇಷವಾಗಿ ಮುಖ್ಯವಾಗಿದೆ. ಏಕೆಂದರೆ ಈ ನೋಟುಗಳು ಹೆಚ್ಚಿನ ಚಲಾವಣೆ ದರವನ್ನು ಹೊಂದಿವೆ.
10 ಮತ್ತು20 ರೂ. ನೋಟುಗಳನ್ನು ಮೊದಲು ಆಯ್ಕೆ ಮಾಡಿದ್ದು ಯಾಕೆ?
ಇದಕ್ಕೆ ಪ್ರಮುಖ ಕಾರಣ ಈ ನೋಟುಗಳು ಅತಿ ಹೆಚ್ಚು ಬಳಕೆಯಾಗುತ್ತಿರುವುದು. 10 ಮತ್ತು 20 ರೂ. ನೋಟುಗಳನ್ನು ಸಾಮಾನ್ಯ ಜನರು ದೈನಂದಿನ ಖರೀದಿಗಳಿಂದ ಹಿಡಿದು ಸಣ್ಣ ಪುಟ್ಟ ಖರ್ಚುಗಳಿಗೂ ಬಳಸುತ್ತಾರೆ. ಅವುಗಳನ್ನು ದಿನಸಿ ಅಂಗಡಿಗಳು, ಚಹಾ ಅಂಗಡಿಗಳು, ತಿಂಡಿಗಳು, ಸ್ಥಳೀಯ ಸಾರಿಗೆ, ಸಣ್ಣ ಪಾವತಿ ಮತ್ತು ಇತರ ಹಲವು ಸ್ಥಳಗಳಲ್ಲಿ ಬಳಸಲಾಗುತ್ತದೆ. ನೋಟು ವೇಗವಾಗಿ ಚಲಾವಣೆಯಾದಷ್ಟೂ ಅದು ಹರಿದುಹೋಗುವ, ಕೊಳಕಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ, ಸಣ್ಣ ಮುಖಬೆಲೆಯ ನೋಟುಗಳ ಜೀವಿತಾವಧಿಯನ್ನು ವಿಸ್ತರಿಸುವುದು ಆರ್‌ಬಿಐ ಮುಂದಿರುವ ಸವಾಲು. ಆರ್‌ಬಿಐ ಗವರ್ನರ್ ಪ್ರಕಾರ, ಪಾಲಿಮರ್ ನೋಟುಗಳು ಅನೇಕ ದೇಶಗಳಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲ ಬಳಕೆಯಲ್ಲಿವೆ. ಪಾಲಿಮರ್ ನೋಟುಗಳು ಕಾಗದದ ನೋಟುಗಳಿಗಿಂತ ಸರಿಸುಮಾರು ಎರಡರಿಂದ ನಾಲ್ಕು ಪಟ್ಟು ಹೆಚ್ಚು ಜೀವಿತಾವಧಿಯನ್ನು ಹೊಂದಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಪಾಲಿಮರ್ ನೋಟುಗಳು ನೀರಿನಲ್ಲಿ ಹಾಳಾಗುವುದಿಲ್ಲವೇ?
ಪಾಲಿಮರ್ ನೋಟುಗಳು ಕಾಗದದ ನೋಟಿಗೆ ಹೋಲಿಸಿದರೆ ತೇವಾಂಶ ಮತ್ತು ವಾಟರ್ ಪ್ರೂಫ್ ಎನ್ನಲಾಗಿದೆ. ನೀರು ಬಿದ್ದಾಗ ಕಾಗದದ ನೋಟುಗಳು ಹರಿಯಬಹುದು. ತುಂಬಾ ಸಮಯದವರೆಗೆ ತೇವಾಂಶಕ್ಕೆ ಒಡ್ಡಿಕೊಂಡಾಗಲೂ ಹೀಗಾಗಬಹುದು. ಆದರೆ ಪಾಲಿಮರ್ ನೋಟುಗಳಿಗೆ ಈ ಅಪಾಯ ಇರುವುದಿಲ್ಲ. ಹಾಗಂತ ಎಲ್ಲಾ ಸಂದರ್ಭಗಳಲ್ಲಿಯೂ ಪಾಲಿಮರ್ ನೋಟುಗಳು ಸಂಪೂರ್ಣವಾಗಿ ಸುರಕ್ಷಿತ ಎಂದರ್ಥವಲ್ಲ. ನೋಟುಗಳ ಮುದ್ರಣ, ಭದ್ರತಾ ವೈಶಿಷ್ಟ್ಯಗಳು ಮತ್ತು ಇತರ ತಾಂತ್ರಿಕ ವಿಶೇಷಣಗಳು ಸಹ ಇಲ್ಲಿ ಮುಖ್ಯ.
ಪಾಲಿಮರ್ ನೋಟುಗಳನ್ನು ನಕಲಿ ಮಾಡುವುದು ಕಷ್ಟವೇ?
ಪಾಲಿಮರ್ ನೋಟುಗಳು ವಿಶಿಷ್ಟ ಭದ್ರತಾ ವೈಶಿಷ್ಟ್ಯಗಳನ್ನು ಸಂಯೋಜಿಸಬಲ್ಲವು ಎಂಬ ಕಾರಣದಿಂದಾಗಿ ಅವುಗಳನ್ನು ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಬಳಸಲಾಗುತ್ತದೆ. ಪಾಲಿಮರ್ ನೋಟುಗಳು ಪಾರದರ್ಶಕ ಅಥವಾ ಅರೆ-ಪಾರದರ್ಶಕ ಕಿಟಕಿಗಳಂತಹ ವೈಶಿಷ್ಟ್ಯಗಳನ್ನು ಒಳಗೊಂಸಿರಬಹುದು. ಈ ಭದ್ರತಾ ವೈಶಿಷ್ಟ್ಯಗಳು ಪ್ರಮಾಣಿತ ಕಾಗದದ ನೋಟುಗಳಿಗಿಂತ ವಿಭಿನ್ನವಾದ ಅನುಭವವನ್ನು ನೀಡುತ್ತವೆ ಮತ್ತು ಕಳ್ಳ ನೋಟುಗಳನ್ನು ಗುರುತಿಸುವುದು ಸುಲಭವಾಗುತ್ತದೆ. ಭಾರತದಲ್ಲಿ ನೀಡಲಾಗುವ ಪಾಲಿಮರ್ ನೋಟುಗಳ ಭದ್ರತಾ ವೈಶಿಷ್ಟ್ಯಗಳ ಸಂಪೂರ್ಣ ವಿವರಗಳು ಫೀಲ್ಡ್ ಟ್ರಯಲ್ ಮತ್ತು ಅಧಿಕೃತ ವಿನ್ಯಾಸ ಮಾಹಿತಿಯ ಬಿಡುಗಡೆಯ ನಂತರವೇ ಸ್ಪಷ್ಟವಾಗುತ್ತವೆ.
ಉಳಿದ ನೋಟುಗಳು ಸಹ ಪಾಲಿಮರ್ ಆಗುತ್ತವೆಯೇ?
ಈ ಸಮಯದಲ್ಲಿ, ಎಲ್ಲಾ ಭಾರತೀಯ ನೋಟುಗಳನ್ನು ಪಾಲಿಮರ್‌ಗೆ ಪರಿವರ್ತಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ. ಪ್ರಸ್ತುತ, 10 ಮತ್ತು 20 ರ ಪಾಲಿಮರ್ ನೋಟುಗಳ ಫೀಲ್ಡ್ ಟ್ರಯಲ್ ನಡೆಯಲಿದೆ. ಈ ಪ್ರಯೋಗಗಳು ಯಶಸ್ವಿಯಾದರೆ, ಭವಿಷ್ಯದಲ್ಲಿ ವಿವಿಧ ಹಂತಗಳಲ್ಲಿ ಇತರ ಮುಖಬೆಲೆಗಳ ಬಗ್ಗೆ RBI ನಿರ್ಧರಿಸಬಹುದು.
ಪಾಲಿಮರ್ ನೋಟುಗಳು ಮಾರುಕಟ್ಟೆಗೆ ಯಾವಾಗ ಬರುತ್ತವೆ?
ಇದರ ನಿಖರವಾದ ದಿನಾಂಕವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಪಾಲಿಮರ್ ನೋಟುಗಳ ಖರೀದಿ ಪ್ರಕ್ರಿಯೆಯು ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ಹಣಕಾಸು ಸಚಿವರು ರಾಜ್ಯಸಭೆಗೆ ಮಾಹಿತಿ ನೀಡಿದರು. ಆದ್ದರಿಂದ, ಅವುಗಳ ವಿತರಣೆಗೆ ನಿರ್ದಿಷ್ಟ ಸಮಯದ ಚೌಕಟ್ಟು ಮತ್ತು ವೆಚ್ಚವನ್ನು ಈ ಸಮಯದಲ್ಲಿ ನಿರ್ಧರಿಸಲಾಗುವುದಿಲ್ಲ. ಯೋಜನೆಯು ಇನ್ನೂ ಪ್ರಾಯೋಗಿಕ ಹಂತದಲ್ಲಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಈ ಹಿಂದೆ ಹೇಳಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ಹಣಕಾಸು ವರ್ಷದ ಆರಂಭದ ವೇಳೆಗೆ ಪಾಲಿಮರ್ ನೋಟುಗಳನ್ನು ಚಲಾವಣೆಗೆ ತರುವ ಗುರಿಯನ್ನು ಹೊಂದಲಾಗಿದೆ.
ಪಾಲಿಮರ್ ನೋಟುಗಳಿಂದ ಸರ್ಕಾರಕ್ಕೆ ಸಿಗುವ ಪ್ರಯೋಜನಗಳೇನು?
ಪಾಲಿಮರ್ ನೋಟುಗಳ ಅತಿದೊಡ್ಡ ಸಂಭಾವ್ಯ ಪ್ರಯೋಜನವೆಂದರೆ ಅವುಗಳ ದೀರ್ಘಾಯುಷ್ಯ. ಒಂದು ನೋಟನ್ನು ದೀರ್ಘಕಾಲದವರೆಗೆ ಬಳಸಲು ಸಾಧ್ಯವಾದರೆ, ಹೊಸ ನೋಟುಗಳನ್ನು ಆಗಾಗ್ಗೆ ಮುದ್ರಿಸುವ ಅಗತ್ಯ ಇರುವುದಿಲ್ಲ. ಇದು ಕರೆನ್ಸಿ ನಿರ್ವಹಣೆಗೆ ಸಂಬಂಧಿಸಿದ ಕೆಲವು ವೆಚ್ಚಗಳನ್ನು ಕಡಿಮೆ ಮಾಡುವಲ್ಲಿ ಸಹಾಯವಾಗುತ್ತದೆ. ಆದರೂ, ಪಾಲಿಮರ್ ನೋಟುಗಳು ಉತ್ಪಾದನೆ, ಸಂಗ್ರಹಣೆ ಮತ್ತು ಸಂಸ್ಕರಣೆಗೆ ಸಂಬಂಧಿಸಿದ ತಮ್ಮದೇ ಆದ ವೆಚ್ಚಗಳನ್ನು ಹೊಂದಿವೆ.
ಸಾಮಾನ್ಯ ಜನರಿಗೆ ನೋಟು ಗುರುತಿಸುವುದು ಕಷ್ಟವಾಗುತ್ತದೆಯೇ?
ಆರಂಭದಲ್ಲಿ, ಪಾಲಿಮರ್ ನೋಟುಗಳನ್ನು ಕಾಗದದ ನೋಟುಗಳಿಗಿಂತ ಭಿನ್ನವಾಗಿ ಕಾಣಬಹುದು. ಕಾಗದ ಮತ್ತು ಪಾಲಿಮರ್ ನೋಟುಗಳ ವಿನ್ಯಾಸ ಅಥವಾ ಸ್ಪರ್ಶ ಸಂವೇದನೆಯು ಬೇರೆಯಾಗಿರಬಹುದು. ಇದಲ್ಲದೆ, ನೋಟುಗಳನ್ನು ಮಡಿಚುವುದು, ನಿರ್ವಹಿಸುವುದು ಸ್ವಲ್ಪ ವಿಭಿನ್ನವಾಗಿ ಅನ್ನಿಸಬಹುದು. ಕ್ರಮೇಣ ಇದು ಅಭ್ಯಾಸವಾಗಿ ಬಿಡಬಹುದು.ಬ್ಯಾಂಕುಗಳು, ಅಂಗಡಿಯವರು ಮತ್ತು ನಗದು ನಿರ್ವಹಣೆ ಸಂಸ್ಥೆಗಳಿಗೆ ಹೊಸ ನೋಟುಗಳ ಕುರಿತು ಮಾಹಿತಿ ಮತ್ತು ತರಬೇತಿಯ ಅಗತ್ಯವಿರಬಹುದು.


Click it and Unblock the Notifications
