'ಪೆಟ್ರೋಲ್- ಡೀಸೆಲ್ ಬೆಲೆ ಹೊತ್ತಿ ಉರಿಯಲು ಅಮೆರಿಕದ ನೀತಿ ಕಾರಣ'
ಭುವನೇಶ್ವರ್ (ಒಡಿಶಾ), ಸೆಪ್ಟೆಂಬರ್ 1: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಸಿಕ್ಕಾಪಟ್ಟೆ ಏರಿಕೆ ಆಗುವುದಕ್ಕೆ ನಿರ್ದಿಷ್ಟ ದೇಶಗಳ ವಿರುದ್ಧದ ಅಮೆರಿಕದ ನೀತಿ ಕಾರಣ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಆರೋಪಿಸಿದ್ದಾರೆ.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ವಿಪರೀತ ಏರಿಕೆ ಆಗುತ್ತಿರುವ ಬಗ್ಗೆ ಸರಕಾರಕ್ಕೆ ಕಾಳಜಿ ಇದೆ. ಅದರ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ಶುಕ್ರವಾರ ಹೇಳಿದ್ದಾರೆ.
ಯಾವುದೋ ನಿರ್ದಿಷ್ಟ ದೇಶದ ವಿರುದ್ಧದ ಅಮೆರಿಕ ನೀತಿಯಿಂದಾಗಿ ಜಗತ್ತಿನಾದ್ಯಂತ ನಾನಾ ದೇಶಗಳ ಕರೆನ್ಸಿ ವಿನಿಮಯ ಮೌಲ್ಯವು ಡಾಲರ್ ವಿರುದ್ಧ ಭಾರೀ ಕುಸಿತ ಕಂಡಿದೆ. ಭಾರತದ ರುಪಾಯಿ ಮೇಲೂ ಇದರ ಪರಿಣಾಮ ಆಗಿದ್ದು, ತೈಲ ಬೆಲೆಯು ವಿಪರೀತ ಏರಿಕೆ ಆಗಿದೆ ಎಂದಿದ್ದಾರೆ.

ಹೆಚ್ಚುತ್ತಿರುವ ತೈಲ ಬೆಲೆ ಹಾಗೂ ರುಪಾಯಿ ಅಪಮೌಲ್ಯ ಈ ಎರಡೂ ಅಂಶ ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿವೆ ಎಂದು ಅವರು ತಿಳಿಸಿದ್ದಾರೆ. ಅಮೆರಿಕ ಡಾಲರ್ ವಿರುದ್ಧ ಭಾರತದ ರುಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡು 71ಕ್ಕೆ ತಲುಪಿತ್ತು. ಶನಿವಾರ ಕೂಡ ಭಾರತದ ಹಲವು ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ದಾಖಲೆ ಪ್ರಮಾಣದಲ್ಲಿ ಏರಿಕೆ ಆಗಿದೆ.
ದೆಹಲಿ ಒಂದನ್ನು ಹೊರತುಪಡಿಸಿ ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಪೆಟ್ರೋಲ್- ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ ಆಗಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಗೆ 86.09 ರುಪಾಯಿ ಹಾಗೂ ಡೀಸೆಲ್ ಗೆ ರು. 74.76 ಇದೆ.












Click it and Unblock the Notifications