Petrol Price Hike: ಪೆಟ್ರೋಲ್ - ಡೀಸೆಲ್ ಬೆಲೆ 25 ರೂ.ದಿಂದ 28 ರೂ. ಹೆಚ್ಚಳ ಸಾಧ್ಯತೆ: ಕೇಂದ್ರ ಸರ್ಕಾರ ಹೇಳಿದ್ದೇನು
Petrol Price Hike: ಮಧ್ಯಪ್ರಾಚ್ಯದ ಯುದ್ಧದ ನಂತರ ಕಚ್ಚಾ ತೈಲದ ಬೆಲೆಯ ವಿಚಾರದಲ್ಲಿ ಹಲವು ಬದಲಾವಣೆಗಳು ಆಗಿವೆ. ಭಾರತದಲ್ಲೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಬೇಕಾಗಿತ್ತಾದರೂ, ಬೆಲೆ ಏರಿಕೆ ಆಗಿಲ್ಲ. ಇದಕ್ಕೆ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯು ನಂತರ ಬೆಲೆ ಏರಿಕೆ ಆಗಲಿದೆ ಎನ್ನುವ ಮಾತಿದೆ. ಪೆಟ್ರೋಲ್ - ಡೀಸೆಲ್ ಬೆಲೆ ಲೀಟರ್‌ಗೆ 25 ರೂಪಾಯಿಯಿಂದ 28 ರೂಪಾಯಿ ಏರಿಕೆ ಆಗಲಿದೆ ಎನ್ನುವ ಬಗ್ಗೆ ಗಂಭೀರವಾದ ಚರ್ಚೆಗಳು ನಡೆದಿವೆ. ಇದೀಗ ಈ ವಿಚಾರವಾಗಿ ಕೇಂದ್ರ ಸರ್ಕಾರವು ಮಹತ್ವದ ಮಾಹಿತಿ ಹಂಚಿಕೊಂಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಏರಿಕೆ ಆಗಲಿದೆಯೇ ಇಲ್ಲಿದೆ ಸಂಪೂರ್ಣ ವಿವರ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಲೀಟರ್‌ಗೆ 25 ರೂಪಾಯಿಯಿಂದ 28 ರೂಪಾಯಿ ರವರೆಗೆ ಏರಿಕೆಯಾಗಲಿದೆ ಎಂಬ ವರದಿಗಳನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ಇಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಸಾಮಾಜಿಕ ಜಾಲತಾಣದಲ್ಲಿ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯ ಕುರಿತು ಹರಿದಾಡುತ್ತಿರುವ ಸುದ್ದಿಗಳು ತಪ್ಪು ಹಾಗೂ ಜನರಲ್ಲಿ ಆತಂಕ ಸೃಷ್ಟಿಸುವ ಉದ್ದೇಶ ಹೊಂದಿವೆ ಎಂದು ತಿಳಿಸಿದೆ. ಒಂದು ವರದಿ ಪ್ರಕಾರ, ಏಪ್ರಿಲ್ 29ರವರೆಗೆ ನಡೆಯುತ್ತಿರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಮೇ 4ಕ್ಕೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ $120 ಸಮೀಪದಲ್ಲೇ ಮುಂದುವರಿದರೆ ಬೆಲೆ ಏರಿಕೆ ಸಂಭವಿಸಬಹುದು ಎಂಬ ಅಂದಾಜು ವ್ಯಕ್ತವಾಗಿತ್ತು. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿಲ್ಲ ಎಂದು ಕೇಂದ್ರ ಸರ್ಕಾರವು ಪುನರುಚ್ಚರಿಸಿದೆ.
ಮಧ್ಯಪ್ರಾಚ್ಯದ ಸಂಘರ್ಷದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದ ಹಾರ್ಮುಜ್ ಜಲಸಂಧಿಯಲ್ಲಿ ವ್ಯತ್ಯಯ ಉಂಟಾಗಿ ತೈಲ ಸಾಗಣೆ ಮೇಲೆ ಪರಿಣಾಮ ಬೀರಿದೆ. ಈ ಪರಿಸ್ಥಿತಿಯ ನಡುವೆಯೂ, ದೇಶೀಯ ಗ್ರಾಹಕರ ಮೇಲೆ ಭಾರ ಬೀಳದಂತೆ ಕೇಂದ್ರ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸು ಸುಂಕವನ್ನು ಲೀಟರ್‌ಗೆ ₹10 ಕಡಿತಗೊಳಿಸಲಾಗಿದೆ.
Petrol Price Hike: ಪೆಟ್ರೋಲ್ - ಡೀಸೆಲ್ ಬೆಲೆ ಹೆಚ್ಚಾಗಲಿದೆಯೇ
ಇದಲ್ಲದೆ, ದೇಶದ ಎಲ್ಲಾ ರಿಫೈನರಿಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾಕಷ್ಟು ಕಚ್ಚಾ ತೈಲ ಸಂಗ್ರಹವೂ ಲಭ್ಯವಿದೆ ಎಂದು ಸರ್ಕಾರ ತಿಳಿಸಿದೆ.
ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹ ಕೂಡ ಸಮರ್ಪಕವಾಗಿದ್ದು, ಕೊರತೆ ಉಂಟಾಗುವ ಸಾಧ್ಯತೆ ಇಲ್ಲ ಎಂದು ಭರವಸೆ ನೀಡಲಾಗಿದೆ. ಒಟ್ಟಿನಲ್ಲಿ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಕುರಿತು ಹರಿದಾಡುತ್ತಿರುವ ಸುದ್ದಿಗಳಿಗೆ ಸರ್ಕಾರ ಸ್ಪಷ್ಟನೆ ನೀಡಿದ್ದು, ಸಾರ್ವಜನಿಕರು ಆತಂಕಪಡಬೇಕಿಲ್ಲ ಎಂದು ಹೇಳಿದೆ. ಆದರೆ ಮೇ 5ರ ನಂತರವೇ ಪೆಟ್ರೋಲ್ - ಡೀಸೆಲ್ ಬೆಲೆ ಹೆಚ್ಚಾಗಲಿದೆಯೇ ಇಲ್ಲವೇ ಎಂದು ತಿಳಿಯಲಿದೆ.












Click it and Unblock the Notifications