ಮೇ 1ರಿಂದ ನಿಮ್ಮದೇ ಆಯ್ಕೆಯ ಕೊರೊನಾ ಲಸಿಕೆ ಪಡೆಯಬಹುದು
ನವದೆಹಲಿ, ಏಪ್ರಿಲ್ 26: ದೇಶದಲ್ಲಿ ಮೇ 1ರಿಂದ ಮೂರನೇ ಹಂತದ ಕೊರೊನಾ ಲಸಿಕೆ ಅಭಿಯಾನ ಆರಂಭಗೊಳ್ಳಲಿದ್ದು, 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ತೆಗೆದುಕೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಈಚೆಗೆ ಘೋಷಿಸಿದ್ದಾರೆ.
ಇದೀಗ ಮೇ 1ರಿಂದ ಭಾರತದಲ್ಲಿ ನೀಡಲಾಗುತ್ತಿರುವ ಲಸಿಕೆಗಳಲ್ಲಿ ಆಯ್ಕೆ ಮಾಡುವ ಅವಕಾಶವನ್ನೂ ಜನರಿಗೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಲಸಿಕೆಗೆ ನೋಂದಣಿ ಮಾಡಿಕೊಳ್ಳುವ ಸಂದರ್ಭದಲ್ಲಿ ತಮಗೆ ಬೇಕೆಂದ ಲಸಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಎಲ್ಲಾ ಖಾಸಗಿ ಲಸಿಕಾ ಕೇಂದ್ರಗಳು ಲಸಿಕೆ ನೋಂದಣಿ ಸಮಯದಲ್ಲಿ, ಯಾವ ಲಸಿಕೆ ಲಭ್ಯವಿದೆ, ಎಷ್ಟು ಪ್ರಮಾಣದ ಲಸಿಕೆ ಲಭ್ಯವಿದೆ ಹಾಗೂ ಲಸಿಕೆಗಳ ದರದ ವಿವರವನ್ನು ಕೋವಿನ್ ಆಪ್‌ನಲ್ಲಿ ನಮೂದಿಸಬೇಕು ಎಂದು ಆರೋಗ್ಯ ಸಚಿವಾಲಯ ನಿರ್ದೇಶನ ನೀಡಿದೆ.

ಮೇ 1ರಿಂದ ದೇಶಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಆರಂಭಿಸಲಾಗುತ್ತಿದೆ. ಜನವರಿ 16ರಿಂದ ದೇಶಾದ್ಯಂತ ಬೃಹತ್ ಲಸಿಕಾ ಅಭಿಯಾನ ಆರಂಭಗೊಂಡಿದ್ದು, ಅಭಿಯಾನದ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಕೊರೊನಾ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿಗೆ ಲಸಿಕೆ ನೀಡಲಾಗಿತ್ತು. ಅಭಿಯಾನದ ಎರಡನೇ ಹಂತದ ಮೊದಲ ಭಾಗದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಹಾಗೂ ಎರಡನೇ ಭಾಗದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗಿತ್ತು.
ಮೂರನೇ ಹಂತದ ಅಭಿಯಾನದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಬಹುದು ಎಂದು ಪ್ರಧಾನಿ ಘೋಷಿಸಿದ್ದು, ಮೇ 1ರಿಂದ ಅಭಿಯಾನ ಆರಂಭಗೊಳ್ಳಲಿದೆ.
ಭಾರತದಲ್ಲಿ ಸದ್ಯಕ್ಕೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತಿದ್ದು, ರಷ್ಯಾದ ಸ್ಫುಟ್ನಿಕ್ ವಿ ಲಸಿಕೆಗೂ ಅನುಮೋದನೆ ದೊರೆತಿದೆ. ಶೀಘ್ರವೇ ಸ್ಫುಟ್ನಿಕ್ ವಿ ಲಸಿಕೆ ಭಾರತದಲ್ಲಿ ನೀಡಲಾಗುವುದು ಎಂದು ಕೇಂದ್ರ ತಿಳಿಸಿದೆ.












Click it and Unblock the Notifications