ಕೊರೊನಾ ಲಸಿಕೆ ಪಡೆದ ಶೇ.97ರಷ್ಟು ಮಂದಿ ಹೇಳಿದ್ದೇನು?
ನವದೆಹಲಿ,ಫೆಬ್ರವರಿ 04: ಕೊರೊನಾ ಲಸಿಕೆ ಪಡೆದ ಸುಮಾರು ಶೇ. 97 ರಷ್ಟು ಮಂದಿ ತಮ್ಮ ಅನುಭವ ತೃಪ್ತಿದಾಯವಾಗಿರುವುದಾಗಿ ಹೇಳಿದ್ದಾರೆ.
ಈ ಕುರಿತು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ, ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಕೋವಿಡ್ ಲಸಿಕೆ ನೀಡಿರುವ ಮಧ್ಯಪ್ರದೇಶ ರಾಜ್ಯವನ್ನು ಕೇಂದ್ರ ಸರ್ಕಾರ ಹೊಗಳಿದೆ.
ಈವರೆಗೂ ದೇಶದಲ್ಲಿ ಒಟ್ಟಾರೆ 45,93,427 ಡೋಸ್ ಗಳನ್ನು ನೀಡಲಾಗಿದ್ದು, ಫೆಬ್ರವರಿ 13ರಿಂದ ಎರಡನೇ ಹಂತದ ಲಸಿಕೆ ವಿತರಣೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ವೇಗವಾಗಿ 4 ಮಿಲಿಯನ್ ಮಂದಿ ಕೋವಿಡ್ 19 ಲಸಿಕೆ ಪಡೆದ ರಾಷ್ಟ್ರ ಭಾರತವಾಗಿದ್ದು, ಕೇವಲ 18 ದಿನಗಳಲ್ಲಿ ವೇಗವಾಗಿ 4 ಮಿಲಿಯನ್ ಜನರು ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದರು.
ಕಳೆದ ಮೂರು ವಾರಗಳಲ್ಲಿ ದೇಶದಲ್ಲಿನ 251 ಜಿಲ್ಲೆಗಳಲ್ಲಿ ಯಾವುದೇ ಹೊಸ ಕೋವಿಡ್ -19 ಸೋಂಕು ಹಾಗೂ ಸಾವಿನ ಪ್ರಕರಣಗಳು ಸಂಭವಿಸಿಲ್ಲ ಎಂದು ರಾಜೇಶ್ ಭೂಷಣ್ ಹೇಳಿದರು.
ಮಾಹಿತಿಗಳ ಪ್ರಕಾರ, ಮಧ್ಯಪ್ರದೇಶದಲ್ಲಿ ಶೇ. 73ಕ್ಕೂ ಹೆಚ್ಚು, ರಾಜಸ್ಥಾನದಲ್ಲಿ ಸುಮಾರು ಶೇ. 66 ರಷ್ಟು ಮಂದಿ ಲಸಿಕೆ ಪಡೆದಿದ್ದರೆ, ತಮಿಳುನಾಡಿನಲ್ಲಿ ಕೇವಲ ಶೇ. 23 ಮಂದಿ ಲಸಿಕೆ ಸ್ವೀಕರಿಸಿದ್ದಾರೆ. 50 ವರ್ಷಕ್ಕೂ ಮೇಲ್ಪಟ್ಟ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಇದರಲ್ಲಿ 60 ವರ್ಷಕ್ಕೂ ಮೇಲ್ಪಟ್ಟ ಉಪ ಗುಂಪೊಂದು ಇರುವುದಾಗಿ ಆರೋಗ್ಯ ಕಾರ್ಯದರ್ಶಿ ತಿಳಿಸಿದರು.
ದೇಶಾದ್ಯಂತ ಮೊದಲ ಹಂತದ ಲಸಿಕೆ ವಿತರಣೆ ಅಭಿಯಾನದಲ್ಲಿ 1239 ಖಾಸಗಿ ಸ್ಥಳಗಳು ಹಾಗೂ 5,912 ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗಿದೆ.
ಲಸಿಕೆ ಪಡೆದ ನಂತರ ಕೋವಿನ್ ಪೋರ್ಟಲ್ ಮೂಲಕ ಎಸ್ ಎಂಎಸ್ ಮೂಲಕ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿತ್ತು. 5,12,128 ಮಂದಿ ಪ್ರತಿಕ್ರಿಯಿಸಿದ್ದು, ಅವರಲ್ಲಿ ಶೇ. 97 ರಷ್ಟು ಮಂದಿ ಲಸಿಕೆ ಅನುಭವದೊಂದಿಗೆ ತೃಪ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.












Click it and Unblock the Notifications