ಭಾರತದಲ್ಲಿ 45,432 ಕಪ್ಪು ಶಿಲೀಂಧ್ರ ಪ್ರಕರಣಗಳು ಪತ್ತೆ
ನವದೆಹಲಿ, ಜುಲೈ 20: ಭಾರತದಲ್ಲಿ ಇದುವರೆಗೆ 45,432 ಕಪ್ಪು ಶಿಲೀಂಧ್ರ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 21,085 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಹಾಗೆಯೇ 4,252 ಮಂದಿ ಸಾವನ್ನಪ್ಪಿದ್ದಾರೆ.
ಈ ಕುರಿತು ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯಾ ಮಾಹಿತಿ ನೀಡಿದ್ದು, ಒಟ್ಟು ಪ್ರಕರಣಗಳಲ್ಲಿ ಶೇ.84.4ರಷ್ಟು ರೋಗಿಗಳು ಕೊರೊನಾ ಪೀಡಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕಪ್ಪು ಶಿಲೀಂಧ್ರ ಹಾಗೂ ಇತರೆ ಶಿಲೀಂಧ್ರಗಳು ಅವಕಾಶವಾದಿ ಸೋಂಕುಗಳು, ಸಾಮಾನ್ಯವಾಗಿ ಇವು ಮಧುಮೇಹ, ಕ್ಯಾನ್ಸರ್ ಹಿನ್ನೆಲೆಯ ರೋಗಿಗಳು ಹಾಗೂ ಮದ್ಯವ್ಯಸನಿಗಳು ಸೇರಿದಂತೆ ಪ್ರತಿರೋಧ ಶಕ್ತಿಯು ಕಡಿಮೆ ಪ್ರಮಾಣದಲ್ಲಿಇರುವ ರೋಗಿಗಳಲ್ಲಿ ಕಂಡುಬರಲಿದೆ ಎಂದು ಹೇಳಿದ್ದಾರೆ.

ಕೊರೊನಾ ಎರಡನೇ ಅಲೆ ಬಳಿಕ ಗಣನೀಯ ಸಂಖ್ಯೆಯಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳು ವರದಿಯಾದವು. ಸೋಂಕು ಕುರಿತ ವಿಶ್ಲೇಷಣೆ ನಂತರ ಹಲವು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ30,093 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದೇ ದಿನ ಕೊರೊನಾವೈರಸ್‌ಗೆ 374 ಮಂದಿ ಪ್ರಾಣ ಬಿಟ್ಟಿದ್ದಾರೆ. ಇದೇ ಅವಧಿಯಲ್ಲಿ 45,254 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಒಟ್ಟು 3,11,74,322 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 3,03,53,710 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 4,14,482 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 4,06,130 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications