Oscar 2023: ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ ಕಂಗೊಳಿಸಲಿರುವ ನಟಿ ದೀಪಿಕಾ ಪಡುಕೋಣೆ
ಶಾರುಖ್ ಖಾನ್ ಮತ್ತು ಜಾನ್ ಅಬ್ರಹಾಂ ಜೊತೆಗೆ ನಟಿಸಿರುವ ಪಠಾಣ್‌ನ ಭಾರೀ ಯಶಸ್ಸಿನಲ್ಲಿ ತೇಲುತ್ತಿರುವ ನಟಿ ದೀಪಿಕಾ ಪಡಿಕೋಣೆಗೆ ಆಸ್ಕರ್ ಮತ್ತಷ್ಟು ಖುಷಿ ನೀಡಿದೆ.
ನವದೆಹಲಿ, ಮಾರ್ಚ್ 03: ಇತ್ತೀಚೇಗಷ್ಟೇ ಆರ್‌ಆರ್‌ಆರ್ ತೆಲುಗು ಸಿನಿಮಾ ಹಾಡು ನಾಟು ನಾಟು ಆಸ್ಕರ್ ವೇದಿಕೆಯಲ್ಲಿ ಪ್ರದರ್ಶನವಾಗಲಿದೆ ಎಂದು ಹೆಮ್ಮೆ ಪಟ್ಟಿದ್ದ ಭಾರತೀಯರಿಗೆ ಮತ್ತೊಂದು ಸಿಹಿ ಸುದ್ದಿಯಿದೆ. ನಟಿ ದೀಪಿಕಾ ಪಡುಕೋಣೆ ಅವರು ಆಸ್ಕರ್ 2023 ರ ನಿರೂಪಕಿಯಾಗಿ ಆಯ್ಕೆಯಾಗಿದ್ದು, ಇದು ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ.
ಆಸ್ಕರ್ ನಿರೂಪಣೆ ಮಾಡಲಿರುವ ಡ್ವೇನ್ ಜಾನ್ಸನ್, ಮೈಕೆಲ್ ಬಿ ಜೋರ್ಡಾನ್, ರಿಜ್ ಅಹ್ಮದ್, ಎಮಿಲಿ ಬ್ಲಂಟ್, ಗ್ಲೆನ್ ಕ್ಲೋಸ್ ಸೇರಿದಂತೆ ಹಲವರು ಹಾಲಿವುಡ್ ಸೆಲೆಬ್ರಿಟಿಗಳ ಪಟ್ಟಿಗೆ ದೀಪಿಕಾ ಪಡುಕೋಣೆ ಸೇರಿಕೊಂಡಿದ್ದಾರೆ. ಟ್ರಾಯ್ ಕೋಟ್ಸೂರ್, ಜೆನ್ನಿಫರ್ ಕೊನ್ನೆಲ್ಲಿ, ಸ್ಯಾಮ್ಯುಯೆಲ್ ಎಲ್. ಜಾಕ್ಸನ್, ಮೆಲಿಸ್ಸಾ ಮೆಕಾರ್ಥಿ, ಜೊಯ್ ಸಲ್ಡಾನಾ, ಡೊನ್ನಿ ಯೆನ್, ಜೊನಾಥನ್ ಮೇಜರ್ಸ್ ಮತ್ತು ಕ್ವೆಸ್ಟ್‌ಲೋವ್ ಕೂಡ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

ಆಸ್ಕರ್ 2023 ಮಾರ್ಚ್ 12 ರಂದು (ಭಾರತದಲ್ಲಿ ಮಾರ್ಚ್ 13) ಲಾಸ್ ಏಂಜಲೀಸ್‌ನ ಡಾಲಿ ಥಿಯೇಟರ್‌ನಲ್ಲಿ ನಡೆಯಲಿದೆ. ಮೂರು ಭಾರತೀಯ ಚಲನಚಿತ್ರಗಳು ಅಸ್ಕರ್ ಆಸ್ಕರ್ ಅವಾರ್ಡ್ಸ್ 2023 ನಾಮನಿರ್ದೇಶನಕ್ಕೆ ಸ್ಪರ್ಧಿಸುತ್ತಿರುವುದರಿಂದ ಈ ವರ್ಷ ಭಾರತಕ್ಕೆ ವಿಶೇಷವಾಗಿದೆ. ಈ ವರ್ಷದ ಆರಂಭದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದ ಆರ್‌ಆರ್‌ಆರ್ ತೆಲುಗು ಸಿನಿಮಾ ಹಾಡು ನಾಟು ನಾಟು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ.
ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆರ್‌ಆರ್‌ಆರ್ ತೆಲುಗು ಸಿನಿಮಾ ಹಾಡು ನಾಟು ನಾಟು, ಶೌನಕ್ ಸೇನ್ ಅವರ ಆಲ್ ದಟ್ ಬ್ರೀಥ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರ ಚಲನಚಿತ್ರಕ್ಕಾಗಿ ಮತ್ತು ಗುನೀತ್ ಮೊಂಗಾ ಅವರ ದಿ ಎಲಿಫೆಂಟ್ ವಿಸ್ಪರರ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ನಾಮನಿರ್ದೇಶನಗೊಂಡಿದೆ. ಆರ್‌ಆರ್‌ಆರ್‌ನ ನಾಟು ನಾಟು ಹಾಡಿನ ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಅವರು ಮೊದಲ ಬಾರಿಗೆ ಆಸ್ಕರ್ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದ್ದಾರೆ.
ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆಸ್ಕರ್ ನಿರೂಪಕರ ಪಟ್ಟಿಯನ್ನು ಪೋಸ್ಟ್ ಮಾಡಿರುವ ನಟಿ ದೀಪಿಕಾ ಪಡುಕೋಣೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ದೀಪಿಕಾ ಅವರ ಪತಿ, ನಟ ರಣವೀರ್ ಸಿಂಗ್ ಅಭಿನಂದನೆ ಹೇಳಿದವರಲ್ಲಿ ಮೊದಲಿಗರು, ಹಾಗೆಯೇ ಬೇಷರಂ ರಂಗ್ ಗಾಯಕಿ ಶಿಲ್ಪಾ ರಾವ್ ಸೇರಿದಂತೆ ಅನೇಕ ಸೆಲಬ್ರಿಟಿಗಳು ಶುಭಾಶಯಗಳನ್ನು ಹೇಳಿದ್ದಾರೆ.

ದೀಪಿಕಾ ಪಡುಕೋಣೆ ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಇದೇ ಮೊದಲಲ್ಲ. ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಫೈನಲ್‌ನಲ್ಲಿ ಫ್ರಾನ್ಸ್‌ನೊಂದಿಗೆ ಪಂದ್ಯವಾಡುವ ಮೊದಲು ಡಿಸೆಂಬರ್ 18, 2022 ರಂದು ಲುಸೈಲ್ ಸ್ಟೇಡಿಯಂನಲ್ಲಿ ಫಿಫಾ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದರು.
ಶಾರುಖ್ ಖಾನ್ ಮತ್ತು ಜಾನ್ ಅಬ್ರಹಾಂ ಜೊತೆಗೆ ನಟಿಸಿರುವ ಪಠಾಣ್‌ನ ಭಾರೀ ಯಶಸ್ಸಿನಲ್ಲಿ ತೇಲುತ್ತಿರುವ ನಟಿ ದೀಪಿಕಾ ಪಡಿಕೋಣೆಗೆ ಆಸ್ಕರ್ ಮತ್ತಷ್ಟು ಖುಷಿ ನೀಡಿದೆ. ಸಿನಿಮಾ ಬಿಡುಗಡೆಯಾಗಿ ಏಳು ವಾರಗಳು ಕಳೆದರೂ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಟಿ ಖಾರುಖ್ ಖಾನ್ ಅವರ ಮುಂದಿನ ಜವಾನ್ ಚಿತ್ರದಲ್ಲೂ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ.












Click it and Unblock the Notifications