ಆಧಾರ್-ಪಾನ್ ಜೋಡಣೆಗೆ ಎರಡೇ ದಿನ: ಜೋಡಣೆಯಾಗದಿದ್ದರೆ ಏನಾಗಲಿದೆ?
ಬೆಂಗಳೂರು, ಸೆಪ್ಟೆಂಬರ್ 28: ನಿಮ್ಮ ಪರ್ಮನೆಂಟ್ ಅಕೌಂಟ್ ನಂಬರ್ (ಪಾನ್) ಮತ್ತು ವಿಶಿಷ್ಟ ಗುರುತಿನ ಚೀಟಿ (ಆಧಾರ್) ಜೋಡಣೆ ಮಾಡಿಕೊಳ್ಳಲು ಇನ್ನು ಎರಡು ದಿನ ಮಾತ್ರ ಬಾಕಿ ಇದೆ. ಒಂದು ವೇಳೆ ಆಧಾರ್ ಸಂಖ್ಯೆ ಜತೆ ಸೆ.30ರ ಒಳಗೆ ಜೋಡಣೆಯಾಗದೆ ಇದ್ದರೆ ಪಾನ್ ಸಂಖ್ಯೆ ಅ.1ರಿಂದ ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇದೆ.
ಆದಾಯ ತೆರಿಗೆ ಇಲಾಖೆಯು ಒಟ್ಟು 10 ಸಂಖ್ಯೆ ಮತ್ತು ಇಂಗ್ಲಿಷ್ ಅಕ್ಷರಗಳನ್ನು ಒಳಗೊಂಡ ಪಾನ್ ಕಾರ್ಡ್‌ಅನ್ನು ನೀಡುತ್ತದೆ. ಹಾಗೆಯೇ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು 12 ಸಂಖ್ಯೆಗಳಿರುವ ಆಧಾರ್ ಕಾರ್ಡ್‌ಅನ್ನು ನೀಡುತ್ತವೆ.
ಈ ಎರಡೂ ಕಾರ್ಡ್‌ಗಳನ್ನು ಜೋಡಣೆ ಮಾಡಿಕೊಳ್ಳುವಂತೆ ಸೂಚನೆ ಹೊರಡಿಸಲಾಗಿತ್ತು. ಪಾನ್ ಮತ್ತು ಆಧಾರ್‌ಗಳನ್ನು ಜೋಡಣೆ ಮಾಡಿಕೊಳ್ಳದೆ ಇರುವವರು ಶೀಘ್ರವೇ ಪ್ರಕ್ರಿಯೆ ನಡೆಸಬೇಕಿದೆ. ಬಳಕೆದಾರರು ಐಟಿ ವೆಬ್‌ಸೈಟ್ ಅಥವಾ ಎಸ್‌ಎಂಎಸ್ ಮೂಲಕ ಸುಲಭವಾಗಿ ಜೋಡಣೆ ಮಾಡಬಹುದು. ಕೇಂದ್ರ ಸರ್ಕಾರ ಹೊರಡಿಸಿರುವ ಸೂಚನೆಯಂತೆ ಈ ಎರಡೂ ಕಾರ್ಡ್‌ಗಳನ್ನು ಜೋಡಣೆ ಮಾಡುವುದು ಕಡ್ಡಾಯ. ಒಂದು ವೇಳೆ ಅದನ್ನು ನಿರ್ಲಕ್ಷಿಸಿದರೆ ಪಾನ್ ಕಾರ್ಡ್ ತನ್ನ ಮೌಲ್ಯವನ್ನೇ ಕಳೆದುಕೊಳ್ಳಬಹುದು. ಇದರಿಂದ ಭವಿಷ್ಯದ ಆರ್ಥಿಕ ವ್ಯವಹಾರಗಳಿಗೆ ಅಡಚಣೆಯಾಗುವ ಸಾಧ್ಯತೆಯಿದೆ.

ಮೂರು ಸಂಗತಿ ಹೊಂದಾಣಿಯಾಗಬೇಕು
ಜೋಡಣೆಯ ಸಂದರ್ಭದಲ್ಲಿ ಹೆಸರು, ಲಿಂಗ ಮತ್ತು ಜನ್ಮದಿನಾಂಕದ ವಿವರಗಳಲ್ಲಿ ಎರಡೂ ಕಾರ್ಡ್‌ಗಳಲ್ಲಿ ಹೊಂದಾಣಿಕೆಯಾಗುವಂತಿರಬೇಕು. ಒಂದು ವೇಳೆ ಹೊಂದಾಣಿಕೆಯಾಗದೆ ಇದ್ದರೆ ಯುಐಡಿಎಐ (ಆಧಾರ್ ಸಂಬಂಧಿಸಿದ ಸಮಸ್ಯೆಗಳು) ಮತ್ತು ಯುಟಿಐ-ಐಟಿಎಸ್ಎಲ್ (ಪಾನ್ ಸಂಬಂಧಿಸಿದ ಸಮಸ್ಯೆಗಳು) ಮೂಲಕ ಅದನ್ನು ಸರಿಪಡಿಸಿಕೊಳ್ಳಬೇಕು.

ಹಣಕಾಸು ವ್ಯವಹಾರ ನಡೆಸಲು ತೊಂದರೆ
ಪಾನ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡದೆ ಇದ್ದರೆ, ಜೋಡಣೆ ಮಾಡುವವರೆಗೂ ಬಳಕೆದಾರರು ಯಾವುದೇ ಹಣಕಾಸು ವ್ಯವಹಾರಗಳನ್ನು ನಡೆಸಲು ಅಡ್ಡಿಯಾಗುತ್ತದೆ. ಆದಾಯ ತೆರಿಗೆಯ ಇ-ಫಿಲ್ಲಿಂಗ್ ವೆಬ್‌ಸೈಟ್ ಪ್ರಕಾರ 8.47 ಕೋಟಿಯಲ್ಲಿ 6.77 ಕೋಟಿ ಮಂದಿ ತಮ್ಮ ಪಾನ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿದ್ದಾರೆ. ಅಂದರೆ ಸುಮಾರು 1.50 ಕೋಟಿಯಷ್ಟು ಮಂದಿ ಇನ್ನೂ ಆಧಾರ್-ಪಾನ್ ಜೋಡಣೆ ಮಾಡಿಲ್ಲ.

ಪಾನ್-ಆಧಾರ್ ಜೋಡಣೆ ಕಡ್ಡಾಯ
2019ರ ಮಾರ್ಚ್ 31ರಂದು ಹಣಕಾಸು ಸಚಿವಾಲಯ ಹೊರಡಿಸಿದ ಅಧಿಸೂಚನೆಯಂತೆ ಕೇಂದ್ರ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ಪಾನ್ ಮತ್ತು ಆಧಾರ್ ಜೋಡಣೆಗೆ ಅಂತಿಮ ಗಡುವು ನೀಡುವ ಸಂಬಂಧ ಸ್ಪಷ್ಟೀಕರಣ ಜಾರಿ ಮಾಡಿತ್ತು. 2019ರ ಏಪ್ರಿಲ್ 1ರಿಂದ ಆದಾಯ ತೆರಿಗೆ ಪಾವತಿ ಮಾಡುವಾಗ ಆಧಾರ್ ಮತ್ತು ಪಾನ್ ಜೋಡಣೆಯನ್ನು ಕಡ್ಡಾಯ ಎಂಬ ಸೂಚನೆ ನೀಡಲಾಗುತ್ತಿದೆ. ಈಗಾಗಲೇ ಜೋಡಣೆ ಪ್ರಕ್ರಿಯೆಯ ಗಡುವನ್ನು ಕಳೆದ ಎರಡು ವರ್ಷಗಳಿಂದ ಹಲವು ಬಾರಿ ವಿಸ್ತರಿಸಲಾಗಿದೆ.

ಪಾನ್ ಕಾರ್ಡ್ 'ನಿಷ್ಕ್ರಿಯ'
ಈ ಮುನ್ನ ಪಾನ್ ಮತ್ತು ಆಧಾರ್ ಕಾರ್ಡ್‌ಗಳ ಜೋಡಣೆ ಮಾಡುವುದರಲ್ಲಿ ವಿಫಲರಾದರೆ ಒಂದು ನಿರ್ದಿಷ್ಟ ಅವಧಿಯ ಬಳಿಕ ಪಾನ್ ಕಾರ್ಡ್ ಅಮಾನ್ಯವಾಗುತ್ತದೆ ಎಂದು ಹೇಳಲಾಗಿತ್ತು. ಹೊಸ ನಿಯಮದ ಪ್ರಕಾರ ಈ ತಿಂಗಳ ಒಳಗೆ ಪಾನ್ ಕಾರ್ಡ್ ಮತ್ತು ಆಧಾರ್ ಜೋಡಣೆಯಾಗದೆ ಇದ್ದರೆ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ. ಆದರೆ 'ನಿಷ್ಕ್ರಿಯ' ಎನ್ನುವುದು ಯಾವ ರೀತಿ ಎಂಬುದನ್ನು ಸರ್ಕಾರ ವಿವರಿಸಿಲ್ಲ. ಹಾಗೆಯೇ ಜೋಡಣೆ ಮಾಡದೆ ಇದ್ದರೆ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ.












Click it and Unblock the Notifications