ಫ್ಲಾಟ್ ಫಾರಂ ಪ್ರವೇಶ: ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿ
ನವದೆಹಲಿ, ಮಾರ್ಚ್ 09: ರೈಲು ನಿಲ್ದಾಣಗಳಲ್ಲಿ ಜನಸಂದಣಿ ಕಡಿಮೆ ಮಾಡಲು ಭಾರತೀಯ ರೈಲ್ವೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ನಿಲ್ದಾಣಗಳಲ್ಲಿ ಜನದಟ್ಟಣೆಯ ಕಾರಣಕ್ಕೆ ಕಾಲ್ತುಳಿತ ಸೇರಿದಂತೆ ಇತರ ಘಟನೆಗಳು ನಡೆಯಬಾರದು ಎಂದು ಈ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಬೆಂಗಳೂರು ಸೇರಿದಂತೆ ದೇಶದ 60 ನಿಲ್ದಾಣದಲ್ಲಿ ಈಗ ಪ್ರಾಯೋಗಿಕವಾಗಿ ಹೊಸ ನಿಯಮವೊಂದು ಜಾರಿಗೆ ಬರಲಿದೆ. ಮುಂದಿನ ಬಾರಿ ರೈಲು ಪ್ರಯಾಣ ಮಾಡುವ ಮೊದಲು ಈ ಬಗ್ಗೆ ತಿಳಿದುಕೊಳ್ಳಿ.
ಈ ಕುರಿತು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಪ್ರಮುಖ ರೈಲು ನಿಲ್ದಾಣಗಳಲ್ಲಿ ಜನ ಸಂದಣಿ ಕಡಿಮೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.

ಇನ್ನು ಮುಂದೆ ಬೆಂಗಳೂರು ಸೇರಿದಂತೆ ದೇಶದ 60 ರೈಲು ನಿಲ್ದಾಣದಲ್ಲಿ ಯಾರ ಬಳಿ ಕನ್ಫರ್ಮ್ ಟಿಕೆಟ್ ಇದೆಯೋ ಅವರು ಮಾತ್ರ ಫ್ಲಾಟ್ ಫಾರ್ಮ್ ಪ್ರವೇಶಕ್ಕೆ ಅವಕಾಶ ಇರುತ್ತದೆ. ಇದಕ್ಕಾಗಿ 60 ನಿಲ್ದಾಣಗಳನ್ನು ರೈಲ್ವೆ ಇಲಾಖೆ ಪಟ್ಟಿ ಮಾಡಿದೆ.
ರೈಲ್ವೆ ಇಲಾಖೆ ರೈಲು ನಿಲ್ದಾಣದ ಹೊರಗೆ ವೈಟಿಂಗ್ ಲಿಸ್ಟ್‌ನಲ್ಲಿರುವ ಪ್ರಯಾಣಿಕರಿಗಾಗಿ ಶಾಶ್ವತ ಕಾಯುವ ಸ್ಥಳವನ್ನು ನಿರ್ಮಾಣ ಮಾಡಲಿದೆ. ಈ ಸ್ಥಳದ ಮೇಲೆ ಅಧಿಕಾರಿಗಳು ಸಂಪೂರ್ಣ ಹಿಡಿತ ಹೊಂದಿರುತ್ತಾರೆ. ಯಾರ ಟಿಕೆಟ್ ಕನ್ಫರ್ಮ್ ಆಗಿದೆಯೋ ಅವರು ಮಾತ್ರ ಫ್ಲಾಟ್ ಫಾರ್ಮ್‌ಗೆ ಹೋಗಲು ಅನುಮತಿ ನೀಡುತ್ತಾರೆ.
ಪ್ರಾಯೋಗಿಕವಾಗಿ ನಿಯಮ ಜಾರಿ: ರೈಲು ನಿಲ್ದಾಣಗಳಲ್ಲಿ ಉಂಟಾಗುವ ಜನ ಸಂದಣಿ ಕಡಿಮೆ ಮಾಡಲು ಈ ನಿಯಮವನ್ನು ಪ್ರಾಯೋಗಿಕವಾಗಿ ದೇಶದ 60 ರೈಲು ನಿಲ್ದಾಣದಲ್ಲಿ ಜಾರಿಗೆ ತರಲಾಗುತ್ತಿದೆ. ಕನ್ಫರ್ಮ್ ಟಿಕೆಟ್ ಇರುವ ಪ್ರಯಾಣಿಕರು ಮಾತ್ರ ಫ್ಲಾಟ್ ಫಾರ್ಮ್‌ಗೆ ಪ್ರವೇಶ ಪಡೆಯುವಂತೆ ನೇರ ವ್ಯವಸ್ಥೆ ಮಾಡಲಾಗುತ್ತದೆ.
ರೈಲು ನಿಲ್ದಾಣಕ್ಕೆ ಇರುವ ಅಕ್ರಮ ಪ್ರವೇಶ ದ್ವಾರವನ್ನು ಮುಚ್ಚಲಾಗುತ್ತದೆ. ಕನ್ಫರ್ಮ್ ಟಿಕೆಟ್ ಇರುವವರಿಗೆ ನೇರವಾಗಿ ಹೋಗಲು ಅವಕಾಶವಿದೆ. ವೈಟಿಂಗ್ ಲಿಸ್ಟ್‌ನಲ್ಲಿರುವವರು, ಟಿಕೆಟ್ ಇಲ್ಲದವರು ನಿಲ್ದಾಣದ ಹೊರಗೆ ಇರಬೇಕಿದೆ.
ಈ ಆಕ್ಸೆಸ್ ಕಂಟ್ರೋಲ್ ವ್ಯವಸ್ಥೆ ಬೆಂಗಳೂರು, ನವದೆಹಲಿ, ಆನಂದ್ ವಿಹಾರ್, ವಾರಣಾಸಿ, ಅಯೋಧ್ಯೆ, ಪಾಟ್ನಾ ಸೇರಿದಂತೆ 60 ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ರೈಲು ಫ್ಲಾಟ್ ಫಾರ್ಮ್‌ಗೆ ಬಂದ ಬಳಿಕ ಪ್ರಯಾಣಿಕರನ್ನು ಅಲ್ಲಿಗೆ ತೆರಳಲು ಅನುಕೂಲ ಮಾಡಿಕೊಡಲಾಗುತ್ತದೆ.
ಇತ್ತೀಚೆಗೆ ನವದೆಹಲಿ ರೈಲು ನಿಲ್ದಾಣದಲ್ಲಿ ಜನಸಂದಣಿ ಕಾರಣಕ್ಕೆ ಕಾಲ್ತುಳಿತ ಸಂಭವಿಸಿ 18 ಪ್ರಯಾಣಿಕರು ಮೃತಪಟ್ಟಿದ್ದರು. ಈ ಘಟನೆ ಬಳಿಕ ರೈಲ್ವೆ ಸಚಿವರು ರೈಲು ನಿಲ್ದಾಣದಲ್ಲಿ ಜನಸಂದಣಿ ಕಡಿಮೆ ಮಾಡಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅವರು ಫ್ಲಾಟ್ ಫಾರ್ಮ್‌ಗೆ ಪ್ರಯಾಣಿಕರು ಆಗಮಿಸುವ ಕುರಿತು ಈ ಪ್ರಸ್ತಾವನೆ ಸಿದ್ಧಗೊಳಿಸಿದ್ದಾರೆ.
60 ರೈಲು ನಿಲ್ದಾಣದಲ್ಲಿ ಕ್ಯಾಮರಾಗಳನ್ನು ಅಳವಡಿಕೆ ಮಾಡಿ ನಿಲ್ದಾಣದ, ಫ್ಲಾಟ್ ಫಾರ್ಮ್ ಜನಸಂದಣಿ ಕುರಿತು ನಿರಂತರ ನಿಗಾವಹಿಸಲಾಗುತ್ತದೆ. ಜನಸಂದಣಿ ಹೆಚ್ಚಾದಾಗ ಅದನ್ನು ಕಡಿಮೆ ಮಾಡಲು ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ. ಅವರಿಗೆ ವಿಶೇಷ ಗುರುತಿನ ಚೀಟಿಯನ್ನು ನೀಡಲಾಗುತ್ತದೆ.
ನಿಲ್ದಾಣದ ನಿರ್ದೇಶಕರಾಗಿ ಹಿರಿಯ ಅಧಿಕಾರಿಯನ್ನು ನೇಮಿಸಲಾಗುತ್ತದೆ. ಅವರು ನಿಲ್ದಾಣದ ಜನಸಂದಣಿ ಕುರಿತು ನಿರಂತರ ನಿಗಾವಹಿಸಿ, ನಿಯೋಜನೆಗೊಂಡ ಸಿಬ್ಬಂದಿಗೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡುತ್ತಾರೆ.
ನಿಲ್ದಾಣದ ಜನಸಂದಣಿ, ರೈಲುಗಳ ಲಭ್ಯತೆ ಆಧಾರದ ಮೇಲೆ ಟಿಕೆಟ್‌ಗಳ ಹಂಚಿಕೆಯ ಮೇಲೆಯೂ ಈ ನಿರ್ದೇಶಕರು ನಿಗಾವಹಿಸಲಿದ್ದಾರೆ. ಈ ಯೋಜನೆ ಜಾರಿಗಾಗಿ ರೈಲು ನಿಲ್ದಾಣಗಳನ್ನು ಇಲಾಖೆಯೇ ಗುರುತಿಸಿದೆ. ಈ ವ್ಯವಸ್ಥೆ ಯಾವಾಗಿನಿಂದ ಜಾರಿಗೆ ಬರಲಿದೆ? ಎಂದು ಅಧಿಕಾರಿಗಳು ಇನ್ನೂ ಮಾಹಿತಿ ನೀಡಿಲ್ಲ.












Click it and Unblock the Notifications