One Nation One Election: ಜಂಟಿ ಸದನ ಸಮಿತಿ ಮೊದಲ ಸಭೆ ದಿನಾಂಕ ನಿಗದಿ
ನವದೆಹಲಿ, ಡಿಸೆಂಬರ್ 24; ಲೋಕಸಭೆಯಲ್ಲಿ ಮಂಡನೆಯಾದ 'ಒಂದು ರಾಷ್ಟ್ರ ಒಂದು ಚುನಾವಣೆ' ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಪರಿಶೀಲನೆಗೆ ವಹಿಸಲಾಗಿದೆ. ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಮಸೂದೆ ವಿರೋಧಿಸುತ್ತಿವೆ. ಲೋಕಸಭೆಯಲ್ಲಿ ಮಸೂದೆ ಪರವಾಗಿ ಮತದಾನ ನಡೆಸಿದಾಗ 269 ಮತಗಳ ಮೂಲಕ ವಿಧೇಯಕ ಮಂಡನೆ ಪ್ರಸ್ತಾಪವನ್ನು ಅಂಗೀಕಾರ ಮಾಡಲಾಗಿತ್ತು.
'ಒಂದು ರಾಷ್ಟ್ರ ಒಂದು ಚುನಾವಣೆ' ಬಗ್ಗೆ ಜಂಟಿ ಸಂಸದೀಯ ಸಮಿತಿಯ ಮೊದಲ ಸಭೆಗೆ ದಿನಾಂಕ ನಿಗದಿಯಾಗಿದೆ. 2025ರ ಜನವರಿ 8ರಂದು ಬೆಳಗ್ಗೆ 11 ಗಂಟೆಗೆ ಮೊದಲ ಸಭೆ ನಡೆಯಲಿದೆ. ಕಾನೂನು ಸಚಿವಾಲಯದ ಅಧಿಕಾರಿಗಳು ಸಭೆಯಲ್ಲಿ ಮಸೂದೆ ಕುರಿತು ಮೊದಲ ವಿವರಣೆಯನ್ನು ಸಮಿತಿಗೆ ನೀಡಲಿದ್ದಾರೆ.

ಪ್ರತಿಪಕ್ಷಗಳ ವಿರೋಧದ ನಡುವೆಯೂ ಕಳೆದ ವಾರ 'ಒಂದು ದೇಶ ಒಂದು ಚುನಾವಣೆ' ಕುರಿತ ಎರಡು ವಿಧೇಯಕಗಳನ್ನು ಲೋಕಸಭೆಯಲ್ಲಿ ಮಂಡನೆ ಮಾಡಲಾಗಿತ್ತು. ಕಾನೂನು ಸಚಿವ ಅರ್ಜುನ್ ಮೇಘಾವಾಲ್ ಸಂವಿಧಾನದ 219ನೇ ತಿದ್ದುಪಡಿ ಒಳಗೊಂಡ ಒಂದು ದೇಶ ಒಂದು ಚುನಾವಣೆ ವಿಧೇಯಕ 2024 ಹಾಗೂ ಸಾಮಾನ್ಯ ವಿಧೇಯಕ ಮಂಡಿಸಿದ್ದರು. ಆದರೆ ವಿರೋಧ ಪಕ್ಷಗಳು ವಿಧೇಯಕ ವಿರೋಧಿಸಿದ್ದವು.
ಸರ್ಕಾರವೇ ಈ ವಿಧೇಯಕದ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಪರಿಶೀಲಿಸಲಿ ಎಂದು ಹೇಳಿತ್ತು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿಧೇಯಕವನ್ನು ಜೆಪಿಸಿ ಪರಿಶೀಲನೆಗೆ ವಹಿಸಿದ್ದರು. ಈಗ ಈ ಕುರಿತು ಜೆಪಿಸಿ ಮೊದಲ ಸಭೆ ಜನವರಿಯಲ್ಲಿ ನಡೆಯಲಿದೆ. 'ಇಂಡಿಯಾ' ಮೈತ್ರಿಕೂಟದ ವಿವಿಧ ಪಕ್ಷಗಳು ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿವೆ.
ರಾಜ್ಯಗಳ ಅಧಿಕಾರ ಕಡಿತವಿಲ್ಲ: ಮಸೂದೆ ಮಂಡನೆ ಮಾಡಿದ್ದ ಕಾನೂನು ಸಚಿವ ಅರ್ಜುನ್ ಮೇಘಾವಾಲ್, 'ಒಂದು ದೇಶ ಒಂದು ಚುನಾವಣೆ ವಿಧೇಯಕದಿಂದ ರಾಜ್ಯ/ ಕೇಂದ್ರಾಡಳಿತ ಪ್ರದೇಶದ ಯಾವುದೇ ಅಧಿಕಾರ ಕಡಿತವಾಗುವುದಿಲ್ಲ. ಸಂಸದೀಯ ವ್ಯವಸ್ಥೆಗೂ ಅಪಾಯವಿಲ್ಲ. ಏಕಕಾಲಕ್ಕೆ ಚುನಾವಣೆ ನಡೆಸುತ್ತಿರುವುದು ಇದು ಮೊದಲಲ್ಲ" ಎಂದು ಹೇಳಿದ್ದರು.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ಒಂದೇ ದಿನದಲ್ಲಿ ಎರಡೂ ಹಂತಗಳಿಗೆ ಮತ ಚಲಾಯಿಸಲು ಅನುಕೂಲ ಮಾಡಿಕೊಡುತ್ತದೆ. ಆದರೆ ಮತದಾನವು ದೇಶಾದ್ಯಂತ ವಿವಿಧ ಹಂತಗಳಲ್ಲಿ ನಡೆಯಲಿದೆ. ವೆಚ್ಚವನ್ನು ಕಡಿಮೆ ಮಾಡಲು ಮತ್ತು ಆಗಾಗ್ಗೆ ಚುನಾವಣೆಗಳಿಂದ ಉಂಟಾಗುವ ಅಡಚಣೆಗಳನ್ನು ಕಡಿಮೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.
ಭಾರತದಲ್ಲಿ ಏಕಕಾಲಿಕ ಚುನಾವಣೆಗಳನ್ನು ನಡೆಸಲು ಉನ್ನತ ಮಟ್ಟದ ಸಮಿತಿಯ ವರದಿಯನ್ನು ಸಲ್ಲಿಕೆ ಮಾಡಿತ್ತು. ಸಮಿತಿಯ ಶಿಫಾರಸುಗಳನ್ನು ಕೇಂದ್ರ ಸಚಿವ ಸಂಪುಟವು ಸೆಪ್ಟೆಂಬರ್ 18, 2024 ರಂದು ಅಂಗೀಕರಿಸಿತು. ಇದು ಚುನಾವಣಾ ಸುಧಾರಣೆಯತ್ತ ಮಹತ್ವದ ಹೆಜ್ಜೆಯಾಗಿದೆ. ಅಂತಹ ವ್ಯವಸ್ಥೆಯು ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸಬಹುದು, ಚುನಾವಣಾ ಸಂಬಂಧಿತ ವೆಚ್ಚಗಳನ್ನು ಕಡಿಮೆ ಮಾಡಬಹುದು ಎಂದು ಸಮಿತಿ ಹೇಳಿತ್ತು.
ಒಂದು ರಾಷ್ಟ್ರ ಒಂದು ಚುನಾವಣೆ ಪರಿಕಲ್ಪನೆ ಭಾರತಕ್ಕೆ ಹೊಸದೇನಲ್ಲ. ಸಂವಿಧಾನದ ಅಂಗೀಕಾರದ ನಂತರ, ಲೋಕಸಭೆ ಮತ್ತು ಎಲ್ಲಾ ರಾಜ್ಯ ವಿಧಾನಸಭೆಗಳಿಗೆ 1951 ರಿಂದ 1967 ರವರೆಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲಾಗಿತ್ತು. ಲೋಕಸಭೆ ಮತ್ತು ರಾಜ್ಯ ಅಸೆಂಬ್ಲಿಗಳಿಗೆ ಮೊದಲ ಸಾರ್ವತ್ರಿಕ ಚುನಾವಣೆಗಳು 1951-52 ರಲ್ಲಿ ಒಟ್ಟಿಗೆ ನಡೆದವು.












Click it and Unblock the Notifications