ಉಕ್ರೇನ್ನಿಂದ ವಾಪಸ್ಸಾದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಅವಕಾಶ; ಎನ್‌ಎಂಸಿ
ನವದೆಹಲಿ, ಮಾರ್ಚ್ 5: ರಷ್ಯಾದ ದಾಳಿಯಿಂದಾಗಿ ಉಕ್ರೇನ್ನಿಂದ ವೈದ್ಯಕೀಯ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಇದೀಗ ಭಾರತಕ್ಕೆ ಬಂದಿರುವ ವಿದ್ಯಾರ್ಥಿಗಳಿಗೆ ಭಾರತದಲ್ಲೇ ಇಂಟರ್ನ್ಶಿಪ್ ಮಾಡಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಅವಕಾಶ ನೀಡಿದೆ.
ವೈದ್ಯಕೀಯ ಪದವೀಧರ ವಿದ್ಯಾರ್ಥಿಗಳು 12 ತಿಂಗಳು ಇಂಟರ್ನ್ಶಿಪ್ ಮಾಡುವುದು ಕಡ್ಡಾಯವಾಗಿರುತ್ತದೆ. ಈಗ ಭಾರತಕ್ಕೆ ಬಂದಿರುವ ವಿದೇಶಿ ವೈದ್ಯಕೀಯ ಪದವೀಧರರು ಇಲ್ಲಿಯೇ ಆ ಇಂಟರ್ನ್ಶಿಪ್ ಮಾಡಬಹುದು ಎಂದು ಎನ್‌ಎಂಸಿ ತನ್ನ ವೆಬ್ಸೈಟ್ http://nmc.org.in. ನಲ್ಲಿ ಸುತ್ತೋಲೆ ಹೊರಡಿಸಿದೆ.
ಯುದ್ಧ ಪೀಡಿತ ಉಕ್ರೇನ್ನಿಂದ ಭಾರತಕ್ಕೆ ಬಂದ ವಿದೇಶಿ ವೈದ್ಯಕೀಯ ಪದವೀಧರರಲ್ಲಿ ಹಲವರಿಗೆ ಅವರ ಇಂಟರ್ನ್ಶಿಪ್ ಪೂರ್ಣಗೊಂಡಿಲ್ಲ. ಕೋವಿಡ್-19 ಪರಿಸ್ಥಿತಿ, ಯುದ್ಧಗಳಂಥ ಕಾರಣದಿಂದ ಅವರಿಗೆ ಇಂಟರ್ನ್ಶಿಪ್ ಪೂರ್ತಿ ಮಾಡಲು ಸಾಧ್ಯವಾಗಲಿಲ್ಲ. ಈ ವಿಚಾರದಲ್ಲಿ ಅವರು ತುಂಬ ಒತ್ತಡ ಮತ್ತು ಕಷ್ಟ ಅನುಭವಿಸಿದ್ದಾರೆ. ಹೀಗಾಗಿ ಅವರು ತಮ್ಮ ಇಂಟರ್ನ್ಶಿಪ್ ಪೂರ್ತಿ ಮುಗಿಸಲು ಭಾರತದಲ್ಲಿ ಅವಕಾಶ ನೀಡಲಾಗುವುದು. ಅವರ ಅರ್ಜಿಯನ್ನು ಅರ್ಹ ಎಂದು ಪರಿಗಣಿಸಲಾಗುವುದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಹೀಗೆ ಇಂಟರ್ನ್ಶಿಪ್ಗೆ ಭಾರತದಲ್ಲಿ ನೋಂದಣಿ ಬಯಸುವ ವಿದ್ಯಾರ್ಥಿಗಳು ನ್ಯಾಶನಲ್ ಬೋರ್ಡ್ ಆಫ್ ಎಕ್ಸಾಮಿನೇಶನ್ ನಡೆಸುವ ವಿದೇಶಿ ಮೆಡಿಕಲ್ ಗ್ರಾಜ್ಯುಯೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರಾ ಎಂಬುದನ್ನು ರಾಜ್ಯ ಮೆಡಿಕಲ್ ಕೌನ್ಸಿಲ್ಗಳು ಖಚಿತಪಡಿಸಿಕೊಳ್ಳಬೇಕು. ನೋಂದಣಿಗೆ ಇರುವ ಮಾನದಂಡಗಳನ್ನು ಪೂರೈಸಿರುವ ಅಭ್ಯರ್ಥಿಗೆ 12 ತಿಂಗಳ ಅಥವಾ ಅವರಿಗೆ ಬಾಕಿ ಇರುವ ಅವಧಿಯ ಇಂಟರ್ನ್ಶಿಪ್ಗೆ ಅವಕಾಶ ನೀಡಬಹುದು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಅಷ್ಟೇ ಅಲ್ಲ, ಈ ವಿದ್ಯಾರ್ಥಿಗಳು ಇಂಟರ್ನ್ಶಿಪ್ ಪಡೆಯುವ ಕಾಲೇಜು ಇವರಿಂದ ಯಾವುದೇ ಶುಲ್ಕ ಪಡೆದಿಲ್ಲ/ಪಡೆಯುವುದಿಲ್ಲ ಎಂಬುದಕ್ಕೆ ರಾಜ್ಯ ಮೆಡಿಕಲ್ ಕೌನ್ಸಿಲ್ಗಳು ಆ ಕಾಲೇಜುಗಳಿಂದ ಭರವಸೆ ಪಡೆಯಬೇಕು. ಈ ವಿದೇಶಿ ವೈದ್ಯಕೀಯ ಪದವೀಧರ ವಿದ್ಯಾರ್ಥಿಗಳಿಗೆ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ತರಬೇತಿ ಪಡೆಯುತ್ತಿರುವ ಭಾರತೀಯ ವೈದ್ಯಕೀಯ ಪದವೀಧರರಿಗೆ ನೀಡಲಾಗುತ್ತಿರುವಷ್ಟೇ ಸ್ಟೈಫಂಡ್ ಮತ್ತು ಇತರ ಸೌಲಭ್ಯಗಳನ್ನು ನೀಡಬೇಕು ಎಂದೂ ಎನ್‌ಎಂಸಿ ಹೇಳಿದೆ.
ರಷ್ಯಾ- ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಅನಿವಾರ್ಯ ಪರಿಸ್ಥಿತಿಯಲ್ಲಿ ಭಾರತಕ್ಕೆ ಹಿಂದಿರುಗಿರುವ ವಿದ್ಯಾರ್ಥಿಗಳಿಗೆ ಇಲ್ಲಿನ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿಯೇ ಪ್ರವೇಶ ಕಲ್ಪಿಸಬೇಕು ಎಂದು ಭಾರತೀಯ ವೈದ್ಯಕೀಯ ಒಕ್ಕೂಟ (ಐಎಂಎ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿತ್ತು.
ಸದ್ಯದ ಮಟ್ಟಿಗಂತೂ ಉಕ್ರೇನ್ ಪರಿಸ್ಥಿತಿ ಸರಿಯಾಗಲಿದೆ ಎಂಬುದು ಅನುಮಾನ. ಇದೀಗ ಬಂದಿರುವ ವಿದ್ಯಾರ್ಥಿಗಳು ಮತ್ತೆ ಅಲ್ಲಿ ಹೋಗಿ ಶಿಕ್ಷಣ ಮುಂದುವರಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಭಾರತದಲ್ಲಿಯೇ ಅನುಕೂಲ ಮಾಡಿಕೊಡಬೇಕೆಂಬ ಬೇಡಿಕೆ ಕೇಳಿಬಂದಿದೆ.












Click it and Unblock the Notifications