Toll Fee: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕದ ಬಗ್ಗೆ ನಿತಿನ್ ಗಡ್ಕರಿ ಮಹತ್ವದ ಮಾಹಿತಿ
Toll Fee: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕಕ್ಕೆ ಸಂಬಂಧಿಸಿದಂತಹ ಕೆಲವೊಂದು ವಿಚಾರಗಳು ಆಗಾಗ ಮುನ್ನಲೆಗೆ ಬರುತ್ತಲೇ ಇರುತ್ತವೆ. ಹಾಗೆಯೇ ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ರಾಷ್ಟ್ರೀಯ ಹೆದ್ದಾರಿ ಹಾಗೂ ಸಾರಿಗೆ ಸಚಿವಾಲಯವು ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಇಲ್ಲಿದೆ ನೋಡಿ ಮಾಹಿತಿ.
ಪ್ರಾಧಿಕಾರವು ದೇಶದಲ್ಲಿ ಏಕರೂಪದ ಟೋಲ್ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇಂದು (ಫೆಬ್ರವರಿ 03) ತಿಳಿಸಿದ್ದಾರೆ. ಅಲ್ಲದೆ ಇದು ಯಾವೆಲ್ಲ ಸಮಸ್ಯೆಗಳಿಗೂ ಪರಿಹಾರ ಅಂತಲೂ ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಇದೀಗ ಭಾರತದ ಹೆದ್ದಾರಿ ಮೂಲಸೌಕರ್ಯವು ಅಮೆರಿಕಕ್ಕೆ ಹೊಂದಿಕೆ ಆಗುತ್ತದೆ. ನಾವು ದೇಶದಾದ್ಯಂತ ಏಕರೂಪದ ಟೋಲ್ ನೀತಿಯನ್ನು ಜಾರಿಗೆ ತರಲು ಕೆಲಸ ಮಾಡುತ್ತಿದ್ದೇವೆ. ಇದು ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸುತ್ತದೆ ಎಂದು ಹೇಳಿದರು.
ಹೆಚ್ಚಿನ ಟೋಲ್ ಶುಲ್ಕಗಳು ಮತ್ತು ಕೆಟ್ಟ ರಸ್ತೆ, ಭಾರಿ ಟ್ರಾಫಿಕ್, ಗೊಂದಲಮಯ ಸಂಕೇತಗಳು ಅಥವಾ ಅಸುರಕ್ಷಿತ ಡ್ರೈವಿಂಗ್ ಅನುಭವವನ್ನು ನೀಡುವ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಜಾಗತಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಆರಂಭದಲ್ಲಿ ಜಾರಿಗೆ ತರಲು ಸಚಿವಾಲಯ ನಿರ್ಧರಿಸಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಯಾಣಿಕರು ಮಾಡುತ್ತಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಮತ್ತು ಇದರಲ್ಲಿ ಒಳಗೊಂಡಿರುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಸದ್ಯ, ಖಾಸಗಿ ಕಾರುಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಮಾರು ಶೇಕಡ 60ರಷ್ಟು ದಟ್ಟಣೆಯನ್ನ ಒಳಗೊಂಡಿದ್ದರೆ, ಈ ವಾಹನಗಳಿಂದ ಬರುವ ಟೋಲ್ ಆದಾಯದ ಪಾಲು ಕೇವಲ ಶೇಕಡ 20-26ರಷ್ಟಿದೆ. ಕಳೆದ 10 ವರ್ಷಗಳಲ್ಲಿ ಟೋಲಿಂಗ್ ವ್ಯವಸ್ಥೆ ಅಡಿಯಲ್ಲಿ ಹೆಚ್ಚು ವಿಸ್ತರಣೆಗಳು ಆಗಿದ್ದರೂ ಸಹ ಹೆದ್ದಾರಿಗಳಲ್ಲಿ ಟೋಲ್ ಶುಲ್ಕಗಳು ಹೆಚ್ಚಾಗಿದೆ. ಇದು ಸಾಮಾನ್ಯವಾಗಿ ಬಳಕೆದಾರರ ಅಸಮಾಧಾನಕ್ಕೆ ಕಾರಣವಾಗಿದೆ.
2023-24ರಲ್ಲಿ ಭಾರತದಲ್ಲಿ ಒಟ್ಟು ಟೋಲ್ ಸಂಗ್ರಹವು 64,809.86 ಕೋಟಿ ರೂಪಾಯಿಗೆ ತಲುಪಿದೆ. ಇದು ಹಿಂದಿನ ವರ್ಷಕ್ಕಿಂತ ಶೇಕಡ 35ರಷ್ಟು ಏರಿಕೆ ಆಗಿದೆ. 2019-20ರಲ್ಲಿ 27,503 ಕೋಟಿ ರೂಪಾಯಿ ಸಂಗ್ರಹ ಆಗಿತ್ತು ಎಂದು ತಿಳಿದುಬಂದಿತ್ತು.












Click it and Unblock the Notifications