ಇನ್ನಷ್ಟು ಬಲವಾಗಲಿದೆ ಎನ್‌ಐಎ, ಎಫ್‌ಬಿಐನಷ್ಟು ಅಧಿಕಾರ!
ನವದೆಹಲಿ, ಜುಲೈ 23 : ದೇಶದ ಪ್ರತಿಷ್ಠಿತ ತನಿಖಾ ಸಂಸ್ಥೆ ಎನ್‌ಐಎಗೆ ಅಮೆರಿಕದ ಎಫ್‌ಬಿಐ ರೀತಿ ಹೆಚ್ಚಿನ ಅಧಿಕಾರ ಸಿಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಯುಎಪಿಎ ಕಾಯ್ದೆಗೆ ತಿದ್ದುಪಡಿ ತರಲಿದೆ. ಈ ಮುಂಗಾರು ಅಧಿವೇಶನದಲ್ಲಿಯೇ ಮಸೂದೆ ಮಂಡನೆ ಮಾಡಲಾಗುತ್ತದೆ.
ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ(ಯುಎಪಿಎ), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ. ಈಗಾಗಲೇ ಕರಡು ಮಸೂದೆ ಸಿದ್ಧವಾಗಿದ್ದು, ಅಧಿವೇಶನದಲ್ಲಿ ಮಂಡನೆಯಾಗಲಿದೆ.
ಕಾಯ್ದೆಗೆ ತಿದ್ದುಪಡಿ ತಂದರೆ ಎನ್‌ಐಎಗೆ ವಿದೇಶದಲ್ಲಿ ಭಾರತೀಯರ ಮೇಲೆ ಭಯೋತ್ಪಾದಕ ದಾಳಿ ನಡೆದರೆ ಆ ಬಗ್ಗೆ ತನಿಖೆ ನಡೆಸಲು ಅವಕಾಶ ಸಿಗಲಿದೆ. ಭಯೋತ್ಪಾದಕ ಸಂಘಟನೆಗಳ ಆಸ್ತಿಗಳನ್ನು ವಶಕ್ಕೆ ಪಡೆಯುವ ಅಧಿಕಾರವೂ ಸಿಗಲಿದೆ.

ಅಮೆರಿಕದ ಫೆಡರಲ್ ಬ್ಯರೋ ಆಫ್ ಇನ್‌ವೆಸ್ಟಿಗೇಷನ್ (ಎಫ್‌ಬಿಐ) ಇಂತಹ ಅಧಿಕಾರವನ್ನು ಹೊಂದಿದೆ. 2008ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಪೋಟ ನಡೆದಾಗ 7 ಅಮೆರಿಕದ ಪ್ರಜೆಗಳು ಮೃತಪಟ್ಟಿದ್ದರು. ಅದರ ತನಿಖೆಯನ್ನು ಎಫ್‌ಬಿಐ ನಡೆಸಿತ್ತು.
ಮುಂಬೈ ಸರಣಿ ಬಾಂಬ್ ಸ್ಫೋಟದ ಘಟನೆ ಬಳಿಕ 2009ರಲ್ಲಿ ಎನ್‌ಐಎಯನ್ನು ಸ್ಥಾಪನೆ ಮಾಡಲಾಗಿದೆ. ದೇಶದಲ್ಲಿ ನಡೆದ ವಿವಿಧ ಭಯೋತ್ಪಾದಕ ದಾಳಿಗಳ ತನಿಖೆಯನ್ನು ಎನ್‌ಐಎ ನಡೆಸುತ್ತಿದೆ.












Click it and Unblock the Notifications