Highway: ಶೀಘ್ರವೇ ಹೆದ್ದಾರಿಗಳಲ್ಲಿ GPS ಆಧಾರಿತ ಟೋಲ್ ಸಂಗ್ರಹ, ಏಕೆ? ನಿರ್ವಹಣೆ ವಿವರ
ಬೆಂಗಳೂರು, ಫೆಬ್ರವರಿ 11: ಭಾರತೀಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸದ್ಯ ಫಾಸ್ಟ್ಯಾಗ್ ಮೂಲಕ ವಾಹನಗಳಿಂದ ಟೋಲ್ ಸಂಗ್ರಹವಾಗುತ್ತಿದೆ. ಇದರ ಜತೆ ಜತೆಗೆ ಟೋಲ್ ಸಂಗ್ರಹಕ್ಕೆ ಹೊಸ ತಂತ್ರಜ್ಞಾನ ಅಳವಡಿಕೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ಮುಂದಿನ ಏಪ್ರಿಲ್ ತಿಂಗಳಿಂದಲೇ ಜಾರಿಗೆ ಬರಲಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.
ಸವಾರರಿಗೆ ಮಹತ್ವದ ಸುದ್ದಿ ನೀಡಿರುವ ಕೇಂದ್ರ ಸರ್ಕಾರವು ಹೆದ್ದಾರಿಗಳು, ಎಕ್ಸ್‌ಪ್ರೆಸ್ ವೇಗಳ ಟೋಲ್‌ಗಳಲ್ಲಿ GPS ಆಧಾರಿತ ಟೋಲ್ ಸಂಗ್ರಹ ಮಾಡಲಿದೆ. ಮೂಲಗಳ ಪ್ರಕಾರ ಮುಂದಿನ ಏಪ್ರಿಲ್ ನಿಂದ ಈ ನೂತನ ಟೋಲ್ ಸಂಗ್ರಹದ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಎಂದು ಅವರು ಹೇಳಿದರು.

ಯಾವ ಉದ್ದೇಶದಿಂದ ಈ ನೂತನ ತಂತ್ರಜ್ಞಾನ ಅಳವಡಿಕೆ ಮಾಡಲಾಗುತ್ತಿದೆ?, ಹಾಲಿ ಎಷ್ಟು ಕೋಟಿ ಹಣ ಟೋಲ್ ನಿಂದ ಸಂಗ್ರಹವಾಗುತ್ತಿದೆ?, ಮುಂದೆ ಎಷ್ಟು ಸಂಗ್ರಹವಾಗಲಿದೆ? ಇದರ ಪ್ರಯೋಜನ? ಸೇರಿದಂತೆ ಪೂರ್ಣ ಮಾಹಿತಿ ಇಲ್ಲಿದೆ.
ಅತ್ಯಧಿಕ ಶುಲ್ಕ ಸಂಗ್ರಹದ ನಿರೀಕ್ಷೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಅಳವಡಿಕೆಗೆ ಸಲಹೆಗಾರರ ನೇಮಿಸಿಕೊಂಡಿದೆ. ಹಾಲಿ ವ್ಯವಸ್ಥೆ ಜೊತೆಗೇ ಈ ವ್ಯವಸ್ಥೆಯನ್ನು ಪರಿಚಯಿಸುವ ಮೂಲಕ ಅತ್ಯಧಿಕ ಶುಲ್ಕ ಸಂಗ್ರಹದ ಗುರಿ ಹೊಂದಲಾಗಿದೆ.
ಮುಖ್ಯವಾಗಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯಿಂದ ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಆಗುತ್ತದೆ. ಅಲ್ಲದೇ ವಾಹನಗಳಿಗೆ ಹೆದ್ದಾರಿಗಳಲ್ಲಿ ಇಂತಿಷ್ಟು ನಿಖರವಾದ ದೂರಕ್ಕೆ ವಾಹನ ಚಾಲಕರಿಂದ ಶುಲ್ಕ ವಸೂಲಿ ಮಾಡಲು ಇದು ಸಹಾಯವಾಗುತ್ತದೆ ಎಂದು ಅವರು ವಿವರಿಸಿದರು.

GPS ವ್ಯವಸ್ಥೆಯ ಪ್ರಯೋಜನವೇನು?
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವು ಸರ್ಕಾರಿ ಸ್ವಾಮ್ಯದ ಟೋಲ್ ಗಳಿಂದ ಸದ್ಯದಲ್ಲಿ ವಾಷಿರ್ಕವಾಗಿ 40,000 ಕೋಟಿ ರೂ. ಸಂಗ್ರಹಿಸುತ್ತಿದೆ. ಈ ನೂತನ ತಂತ್ರಜ್ಞಾನ ಅಳವಡಿಸಿಕೊಂಡ ನಂತರದ 2-3 ವರ್ಷಗಳಲ್ಲಿ ಸುಮಾರು 1.40 ಲಕ್ಷ ಕೋಟಿ ರೂಪಾಯಿ ಟೋಲ್ ಶುಲ್ಕ ಸಂಗ್ರವಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ.
ಈ ಮೊದಲು ಹೆದ್ದಾರಿಗಳ ಟೋಲ್ ಪ್ಲಾಜಾದಲ್ಲಿ (2018-19ರಲ್ಲಿ) ಶುಲ್ಕ ಸಂಗ್ರಹಿಸಲು ವಾಹನಗಳು ಸುಮಾರು 8 ನಿಲ್ಲಬೇಕಿತ್ತು. ಬಳಿಕ ಫಾಸ್ಟ್ಯಾಗ್ ಪರಿಚಯಿಸಿದ ನಂತರ 2020ರಿಂದ 2022 ಅವಧಿಯಲ್ಲಿ ವಾಹನಗಿಂದ ಶುಲ್ಕ ಸಂಗ್ರವು ಕೇವಲ 47 ಸೆಕೆಂಡುಗಳಲ್ಲಿ ಪೂರ್ಣಗೊಳ್ಳುತ್ತಿತ್ತು.
ಹೆದ್ದಾರಿಗಳಲ್ಲಿ ವಾಹನ ದಟ್ಟಣೆಗೆ ಕಡಿವಾಣ
2021 ರಿಂದ ಟೋಲ್ ಶುಲ್ಕ ಕಟ್ಟಲು ಅರ್ಹವಾದ ಎಲ್ಲ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಿ ಸರ್ಕಾರ ಆದೇಶಿತ್ತು. ಅಲ್ಲದೇ ಫಾಸ್ಟ್ಯಾಗ್ ಇಲ್ಲದ ವಾಹನಗಳಿಗೆ ಟೋಲ್ ಶುಲ್ಕದ ದುಪ್ಪಟ್ಟು ದಂಡವನ್ನು ಪಾವತಿಸಲು ಸರ್ಕಾರ ಕ್ರಮ ಕೈಗೊಂಡಿತ್ತು. ಈ ವ್ಯವಸ್ಥೆಯಿಂದ ತಕ್ಕ ಮಟ್ಟಿಗೆ ಸುಧಾರಣ ಕಂಡು ಬಂದಿತಾದರೂ ಸಹ ಫಿಕ್ ಸಮಯದಲ್ಲಿ ಟೋಲ್ ಪ್ಲಾಜಾಗಳಲ್ಲಿ ಹೆಚ್ಚು ಹೆಚ್ಚು ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ಕಂಡ ಬರುತ್ತಿವೆ.
ಹೊಸ ವ್ಯವಸ್ಥೆಯಿಂದ ಟೋಲ್ ಸಂಗ್ರಹ ಹೇಗೆ?
ಆದ್ದರಿಂದ ಈ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಪರಿಚಿಸಲು ಮುಂದಾಗಿದೆ. ಈ ವ್ಯವಸ್ಥೆಯಲ್ಲಿ ಹೆದ್ದಾರಿಗಳಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳ ಮೂಲಕವೇ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ಎಎನ್‍ಪಿಆರ್) ವ್ಯವಸ್ಥೆ ಬಳಸಿ ಶುಲ್ಕ ಸಂಗ್ರಹಿಸುತ್ತದೆ. ಅಲ್ಲದೇ ವಾಹನವು ಎಷ್ಟು ದೂರು ಪ್ರಯಾಣಿಸಿದೆ ಎಂಬ ಆಧಾರದ ಟೋಲ್‌ಗಳಲ್ಲಿ ಹಣ ಕಡಿತಗೊಳ್ಳುವ ಜಿಪಿಎಸ್ ಆಧಾರಿತ ಹೊಸ ತಂತ್ರಜ್ಞಾನ ವ್ಯವಸ್ಥೆ ಇದಾಗಿದೆ ಎಂದು ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.
ಸದ್ಯ ಈ ಹೊಸ ತಂತ್ರಜ್ಞಾನ ಅಳವಡಿಕೆಯಿಂದ ಹಳೆಯ ಟೋಲ್ ಸಂಗ್ರಹ ವ್ಯವಸ್ಥೆಯಾದ ಫಾಸ್ಟ್ಯಾಗ್ ಇರಲಿದೆಯೋ ಇಲ್ಲವೋ ಎಂಬ ಮಾಹಿತಿ ಮುಂದಿನ ದಿನಗಳಲ್ಲಿ ತಿಳಿಯಲಿದೆ.












Click it and Unblock the Notifications