NEET UG 2026: ನೀಟ್ ಯುಜಿ ಪರೀಕ್ಷೆಯ ಅಧಿಸೂಚನೆ ಪ್ರಕಟ: ನೋಂದಣಿ ಪ್ರಕ್ರಿಯೆ, ಅರ್ಜಿ ಸಲ್ಲಿಕೆ ಸಂಪೂರ್ಣ ವಿವರ
ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ NEET UG-2026ಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯೊಂದಿಗೆ ನೋಂದಣಿ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದ್ದು, ಅಭ್ಯರ್ಥಿಗಳು neet.nta.nic.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.
ನೀಟ್ ಯುಜಿ ಪರೀಕ್ಷೆಯು ಭಾರತದಲ್ಲಿ ಎಂಬಿಬಿಎಸ್, ಬಿಡಿಎಸ್, ಆಯುಷ್, ವೆಟರಿನರಿ ಹಾಗೂ ಇತರ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಇರುವ ಏಕೈಕ ರಾಷ್ಟ್ರೀಯ ಪರೀಕ್ಷೆ ಆಗಿದೆ. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.

ಅರ್ಜಿ ಸಲ್ಲಿಕೆಗೆ ಮಾರ್ಚ್ 8 ಕೊನೆಯ ದಿನವಾಗಿದ್ದು, ಅದೇ ದಿನ ರಾತ್ರಿ 9 ಗಂಟೆಯವರೆಗೆ ಅರ್ಜಿ ಭರ್ತಿ ಮಾಡಲು ಅವಕಾಶವಿದೆ. ಅರ್ಜಿ ಶುಲ್ಕ ಪಾವತಿ ಪ್ರಕ್ರಿಯೆಯನ್ನು ರಾತ್ರಿ 11:50ರವರೆಗೆ ಪೂರ್ಣಗೊಳಿಸಬಹುದು ಎಂದು ಎನ್‌ಟಿಎ ತಿಳಿಸಿದೆ. ಅರ್ಜಿ ಸಲ್ಲಿಕೆ ಮುಗಿದ ಬಳಿಕ, ಅಭ್ಯರ್ಥಿಗಳಿಗೆ ತಮ್ಮ ವಿವರಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಮಾರ್ಚ್ 10ರಿಂದ ಮಾರ್ಚ್ 12ರವರೆಗೆ ಅರ್ಜಿ ತಿದ್ದುಪಡಿ ಸೌಲಭ್ಯ ಲಭ್ಯವಿರುತ್ತದೆ. ಈ ಅವಧಿಯಲ್ಲಿ ಮಾತ್ರ ನಿರ್ದಿಷ್ಟ ಮಾಹಿತಿಗಳನ್ನು ತಿದ್ದುಪಡಿ ಮಾಡಲು ಅವಕಾಶ ನೀಡಲಾಗುತ್ತದೆ.
ಅರ್ಜಿ ಶುಲ್ಕ ವಿವರ
NEET UG 2026 ಪರೀಕ್ಷೆಗೆ ಅರ್ಜಿ ಶುಲ್ಕವನ್ನು ವರ್ಗವಾರು ನಿಗದಿಪಡಿಸಲಾಗಿದೆ. ಸಾಮಾನ್ಯ ವರ್ಗಕ್ಕೆ (General) ₹1700, ಒಬಿಸಿ ವರ್ಗಕ್ಕೆ ₹1600, ಎಸ್‌ಸಿ, ಎಸ್‌ಟಿ, ತೃತೀಯ ಲಿಂಗ ವರ್ಗಗಳಿಗೆ ₹1000 ಅರ್ಜಿ ಶುಲ್ಕವಿದೆ. ಭಾರತದ ಹೊರಗಿನ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಎಲ್ಲ ವರ್ಗಗಳಿಗೂ ₹9500 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ ಮಾತ್ರ ಪಾವತಿಸಬೇಕು.
ಪರೀಕ್ಷೆಯ ದಿನಾಂಕ ಮತ್ತು ಸಮಯ
NEET UG 2026 ಪರೀಕ್ಷೆಯನ್ನು ಮೇ 3, 2026 (ಭಾನುವಾರ) ನಡೆಸಲಾಗುತ್ತದೆ. ಪರೀಕ್ಷೆಯ ಅವಧಿ 3 ಗಂಟೆ (180 ನಿಮಿಷ) ಆಗಿದ್ದು, ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರದ ನಿಖರ ವಿವರಗಳನ್ನು ಒಳಗೊಂಡ ಪ್ರವೇಶ ಪತ್ರವನ್ನು ನಂತರ ಬಿಡುಗಡೆ ಮಾಡಲಾಗುತ್ತದೆ. ಪರೀಕ್ಷಾ ನಗರಗಳ ಮಾಹಿತಿ, ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ದಿನಾಂಕ, ಕೀ ಉತ್ತರಗಳು, ದಾಖಲಾದ ಪ್ರತಿಕ್ರಿಯೆಗಳು ಹಾಗೂ ಫಲಿತಾಂಶ ಪ್ರಕಟಣೆಯ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ nta.ac.in ಮತ್ತು neet.nta.nic.in ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದೆ.

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಇತರೆ ಯಾವುದೇ ವಿಧಾನಗಳನ್ನು ಎನ್‌ಟಿಎ ಸ್ವೀಕರಿಸುವುದಿಲ್ಲ. ಅರ್ಜಿ ಸಲ್ಲಿಸುವ ವೇಳೆ ಅಭ್ಯರ್ಥಿಗಳು ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ, ವಿಳಾಸ, ಸ್ಕ್ಯಾನ್ ಮಾಡಿದ ಸಹಿ ದಾಖಲೆಗಳನ್ನು ಅಪ್‌ಲೋಡ್ ಮಾಡುವುದು ಕಡ್ಡಾಯ. ಪ್ರತಿ ಅಭ್ಯರ್ಥಿ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬೇಕು. ಮಾಹಿತಿ ಬುಲೆಟಿನ್‌ನಲ್ಲಿರುವ ಎಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದಲ್ಲಿ ಅರ್ಜಿ ರದ್ದುಪಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ನೀಡುವ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ತಮ್ಮದೇ ಅಥವಾ ಪೋಷಕರದ್ದೇ ಆಗಿರಬೇಕು. ಏಕೆಂದರೆ ಎನ್‌ಟಿಎಯಿಂದ ಬರುವ ಎಲ್ಲ ಅಧಿಕೃತ ಮಾಹಿತಿಗಳು ಇದೇ ಮೂಲಕ ಕಳುಹಿಸಲಾಗುತ್ತದೆ. ಯಾವುದೇ ಮಾಹಿತಿ ಅಥವಾ ಸಹಾಯಕ್ಕಾಗಿ ಅಭ್ಯರ್ಥಿಗಳು ಇಮೇಲ್: [email protected] ಅಥವಾ ಫೋನ್: 011-40759000 / 011-69227700 ಮೂಲಕ ಸಂಪರ್ಕಿಸಬಹುದು. ಈ ಪರೀಕ್ಷೆ ಲಕ್ಷಾಂತರ ವೈದ್ಯಕೀಯ ಆಕಾಂಕ್ಷಿಗಳಿಗೆ ಮಹತ್ವದ ಹಂತವಾಗಿದ್ದು, ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಿ ಎಲ್ಲ ನಿಯಮಗಳನ್ನು ಪಾಲಿಸುವಂತೆ ಎನ್‌ಟಿಎ ಸೂಚಿಸಿದೆ.












Click it and Unblock the Notifications