ಕೇಂದ್ರ ಸಚಿವರ ಸರ್ಕಾರಿ ಬಂಗಲೆ ನವೀಕರಣಕ್ಕೆ ಬರೋಬ್ಬರಿ 92.35 ಕೋಟಿ ರೂ. ವೆಚ್ಚ, ಏನೆಲ್ಲ ಬದಲಾಗಿದೆ ?
ದೆಹಲಿಯಲ್ಲಿರುವ ಕೇಂದ್ರ ಸಚಿವರ ಮನೆಗಳ ನವೀಕರಣಕ್ಕೆ ಕೋಟ್ಯಾಂತರ ರೂಪಾಯಿ ಹಣ ವ್ಯಯಿಸಿರುವುದು ಇದೀಗ ಬಹಿರಂಗವಾಗಿದೆ. ಕೇಂದ್ರದಲ್ಲಿ ಅಧಿಕಾರ ದಲ್ಲಿರುವ ಎನ್ಡಿಎ ನೇತೃತ್ವದ ಸಚಿವರ ಸರ್ಕಾರಿ ಮನೆಗಳ ದುರಸ್ತಿ ಹಾಗೂ ನವೀಕರಣಕ್ಕಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಲಾಗಿದೆ. ದೆಹಲಿ ಲುಟಿಯನ್ಸ್ ಪ್ರದೇಶದಲ್ಲಿರುವ ಕೇಂದ್ರ ಸಚಿವರ ಸರ್ಕಾರಿ ಮನೆಗಳ ದುರಸ್ತಿ ಮತ್ತು ನವೀಕರಣಕ್ಕೆ 2025-26ರಲ್ಲಿ ಕೋಟಿ ಕೋಟಿ ಖರ್ಚಾಗಿರುವುದು ಇದೀಗ ಬಹಿರಂಗವಾಗಿದೆ.
ಸಚಿವರ ಸರ್ಕಾರಿ ಮನೆಗಳ ದುರಸ್ತಿಗೆ 2014 ಮತ್ತು 2015ರಲ್ಲಿ 27.47 ಕೋಟಿ ರೂಪಾಯಿ ಖರ್ಚಾಗಿತ್ತು. ಅಂದರೆ, ಕಳೆದ 11 ವರ್ಷಗಳಲ್ಲಿ ಈ ಖರ್ಚು ಮೂರು ಪಟ್ಟು ಹೆಚ್ಚಾಗಿದೆ ಎಂದು ಆರ್ಟಿಐ ಅರ್ಜಿಯಲ್ಲಿ ತಿಳಿದುಬಂದಿದೆ. ದೆಹಲಿಯ ಲುಟ್ಯೆನ್ಸ್ ಬಂಗಲೆ ವಲಯದಲ್ಲಿರುವ ಕೇಂದ್ರ ಸಚಿವರ ಅಧಿಕೃತ ನಿವಾಸಗಳ ನವೀಕರಣ, ಪೀಠೋಪಕರಣಗಳು ಮತ್ತು ದುರಸ್ತಿಗಾಗಿ ವಾರ್ಷಿಕ ಖರ್ಚು 2025-26ರಲ್ಲಿ ದಾಖಲೆಯ 92.35 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಈ ಮೊತ್ತವು 2014-15ರಲ್ಲಿ ಖರ್ಚು ಮಾಡಲಾಗಿದ್ದ 27.47 ಕೋಟಿ ರೂ.ಗಳಿಗಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ವಿಧಾನಸಭೆ ಚುನಾವಣೆ ನಡೆದಾಗ ಅಥವಾ ಮಂತ್ರಿಮಂಡಲ ಬದಲಾದಗೆಲ್ಲವೂ ಆಯಾ ಸಚಿವರ ಅವಶ್ಯಕತೆಗೆ ಅಥವಾ ವಾಸ್ತು ಪ್ರಕಾರ ಸಹ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳುವುದು ಇದೆ. ಈಚೆಗೆ ತಮಿಳುನಾಡಿನ ಮುಖ್ಯಮಂತ್ರಿ ಸರ್ಕಾರಿ ಬಂಗಲೆಯಲ್ಲೂ ಮಹತ್ವದ ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರ / ಕೇಂದ್ರ ಸಚಿವರ ಸರ್ಕಾರಿ ನಿವಾಸಗಳ ದುರಸ್ತಿಗೆ ಭಾರೀ ಮೊತ್ತ ವೆಚ್ಚ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
2014-15 ಮತ್ತು 2025-26ರ ನಡುವೆ ಕೇಂದ್ರ ಸಚಿವರ ಮನೆ ದುರಸ್ತಿ, ನವೀಕರಣ ಮತ್ತು ನಿರ್ವಹಣೆಯನ್ನು ನಿರ್ವಹಿಸುವ ಕೇಂದ್ರ ಲೋಕೋಪಯೋಗಿ ಇಲಾಖೆಯ ಮೂಲಕ ಸರ್ಕಾರ ಈ ಕೆಲಸಗಳಿಗೆ 547.68 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಇನ್ನು ಇಷ್ಟೊಂದು ವೆಚ್ಚವಾಗುತ್ತಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅದರ ಪ್ರಕಾರ, ಹಣದುಬ್ಬರ ಮತ್ತು ಮಧ್ಯ ದೆಹಲಿಯ ದೊಡ್ಡ ಪ್ರದೇಶಗಳಲ್ಲಿ ಇರುವ ಹಳೆಯ ಕಟ್ಟಡಗಳ ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ 2025-26ರಲ್ಲಿ ಈ ಖರ್ಚು 2014ರಿಂದಲೂ ಅತ್ಯಧಿಕವಾಗಿದೆ ಎಂದು ಹೇಳಲಾಗಿದೆ.
ಸರ್ಕಾರಿ ಬಂಗಾಲೆ / ಸರ್ಕಾರಿ ಕಟ್ಟಡಗಳಲ್ಲಿ ಗೆದ್ದಲು ಬಾಧೆ, ಹಳೆಯ ವಿದ್ಯುತ್ ವ್ಯವಸ್ಥೆಗಳಿರುವುದು ಮತ್ತು ಪ್ಲಂಬಿಂಗ್ ದೋಷಗಳಂತಹ ಸಮಸ್ಯೆಗಳು ಹೆಚ್ಚಾಗಿವೆ. ಆದರೆ, ಕೆಲವು ಬಂಗಲೆಗಳನ್ನು ನೆಲಸಮಗೊಳಿಸಲು ಅಥವಾ ಪುನರ್ನಿರ್ಮಿಸಲು ಈ ಹಿಂದೆ ಯೋಜನೆಗಳು ಇದ್ದವು, ಆದರೆ ಅಧಿಕೃತವಾಗಿ ಘೋಷಿಸಲಾಗಿಲ್ಲ. ಈ ಬಂಗಲೆಗಳು ಹೆಚ್ಚಾಗಿ 80-90-100 ವರ್ಷ ಹಳೆಯ ಬಂಗಲೆಗಳಾಗಿವೆ. ಕೆಲವು ಸಂಪೂರ್ಣ ಹಾಳಾಗದಿದ್ದರೂ ದುರಸ್ತಿ ಮಾಡುವ ಅವಶ್ಯಕತೆ ಇತ್ತು ಎಂದೂ ಹೇಳಲಾಗಿದೆ.
ಇನ್ನು ಇಲ್ಲಿನ ಬಂಗಲೆ ವಲಯವನ್ನು 1912ರಿಂದ 1930ರ ನಡುವೆ ನವದೆಹಲಿ ಬ್ರಿಟಿಷರ ಸಾಮ್ರಾಜ್ಯಶಾಹಿ ರಾಜಧಾನಿಯಾಗಿ ನಿರ್ಮಿಸುವ ಭಾಗವಾಗಿ ಅಭಿವೃದ್ಧಿಪಡಿಸಲಾಗಿತ್ತು. ಸ್ವಾತಂತ್ರ್ಯದ ನಂತರ ಈ ಬಂಗಲೆಗಳನ್ನು ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ವಸತಿಗಾಗಿ ಬಳಸಲಾಯಿತು. ಸಚಿವರ ಜೊತೆಗೆ ಸಂಸತ್ ಸದಸ್ಯರು, ಹಿರಿಯ ನ್ಯಾಯಮೂರ್ತಿಗಳು ಮತ್ತು ಉನ್ನತ ಹುದ್ದೆಯ ಸೇನಾ ಅಧಿಕಾರಿಗಳಿಗೂ ಇಲ್ಲಿ ಬಂಗಲೆಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಈ ಬಂಗಲೆಗಳು ಹೆಚ್ಚಿನ ಭಾರತೀಯ ನಗರಗಳಲ್ಲಿ ಸಿವಿಲ್ ಲೈನ್ಸ್ನಲ್ಲಿ ಬ್ರಿಟಿಷರು ತಮ್ಮ ಅಧಿಕಾರಿಗಳಿಗೆ ವಸತಿ ಕಲ್ಪಿಸಲು ನಿರ್ಮಿಸಿದ ನಿವಾಸಗಳಲ್ಲಿ ಕಂಡುಬರುವ ಮಾದರಿಯಲ್ಲಿವೆ. ಮುಖ್ಯ ಕಟ್ಟಡದ ಹೊರತಾಗಿ ಸಿಬ್ಬಂದಿಗೆ ಪೂರಕ ಕಟ್ಟಡಗಳನ್ನು ಹೊಂದಿರುವ ದೊಡ್ಡ ಕಾಂಪೌಂಡ್. ಪ್ರಸ್ತುತ ಕೃಷ್ಣ ಮೆನನ್ ಮಾರ್ಗದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ವಾಸಿಸುತ್ತಿರುವ ಬಂಗಲೆಯಲ್ಲಿ, ಹಳೆಯ ಸಂಸತ್ತಿನ ಕಟ್ಟಡ ಮತ್ತು ಉತ್ತರ ಮತ್ತು ದಕ್ಷಿಣ ಬ್ಲಾಕ್ಗಳ ವಾಸ್ತುಶಿಲ್ಪಿ ಹರ್ಬರ್ಟ್ ಬೇಕರ್ ಒಮ್ಮೆ ವಾಸಿಸುತ್ತಿದ್ದರು ಎಂದೂ ಹೇಳಲಾಗಿದೆ.
Nda - Bjp: ಕೋಟ್ಯಾಂತರ ರೂಪಾಯಿ ಹಣ ಖರ್ಚು
2014 ರಿಂದ 2019 ರವರೆಗೆ, ಮಂತ್ರಿಗಳ ಸರ್ಕಾರಿ ಮನೆ ದುರಸ್ತಿ ಮತ್ತು ಮೇಲ್ದರ್ಜೆಗೇರಿಸುವಿಕೆಗಾಗಿ ವರ್ಷಕ್ಕೆ ಸರಾಸರಿ 26.78 ಕೋಟಿ ರೂ. ಖರ್ಚು ಮಾಡಲಾಗಿದೆ. ನಂತರ 2019 ರಿಂದ 2024 ರವರೆಗೆ ಸರಾಸರಿ ವಾರ್ಷಿಕ ಖರ್ಚು ಸುಮಾರು 50 ಕೋಟಿ ರೂ.ಗೆ ಏರಿತು. 2024-25 ರಲ್ಲಿ 71.98 ಕೋಟಿ ರೂ. ಮತ್ತು 2025-26 ರಲ್ಲಿ 92.35 ಕೋಟಿ ರೂ. ಖರ್ಚು ಮಾಡಲಾಗಿದೆ.
2014-15ರಲ್ಲಿ 27.47 ಕೋಟಿ, 2015-16ರಲ್ಲಿ 29.57 ಕೋಟಿ, 2016-17ರಲ್ಲಿ 30.10 ಕೋಟಿ, 2017-18ರಲ್ಲಿ 23.34 ಕೋಟಿ, 2018-19ರಲ್ಲಿ 23.42 ಕೋಟಿ, 2019-20ರಲ್ಲಿ 26.37 ಕೋಟಿ, 2020-21ರಲ್ಲಿ 53.87 ಕೋಟಿ, 2021-22ರಲ್ಲಿ 40.84 ಕೋಟಿ, 2022-23ರಲ್ಲಿ 73.86 ಕೋಟಿ, 2023-24ರಲ್ಲಿ 54.52 ಕೋಟಿ, 2024-25ರಲ್ಲಿ 71.98 ಕೋಟಿ ಮತ್ತು 2025-26ರಲ್ಲಿ 92.35 ಕೋಟಿ ಆಗಿದೆ ಎಂದು ಹೇಳಲಾಗಿದೆ. ಸಚಿವರಲ್ಲದ ಲೋಕಸಭೆ ಮತ್ತು ರಾಜ್ಯಸಭೆ ಸಂಸದರ ನಿವಾಸಗಳ ವೆಚ್ಚ ಅಥವಾ ಕೇಂದ್ರ ಸಚಿವರು ಮತ್ತು ರಾಜ್ಯ ಸಚಿವರ ಕಚೇರಿಗಳ ವೆಚ್ಚದ ವಿವರವನ್ನು ಸಿಪಿಡಬ್ಲ್ಯೂಡಿ ಅಧಿಕಾರಿಗಳು ನೀಡಿಲ್ಲ.


Click it and Unblock the Notifications
