24 ಗಂಟೆಯಲ್ಲಿ ಮೋದಿ ಪ್ರಧಾನಿ ಅಭ್ಯರ್ಥಿ ಘೋಷಣೆ
ನವದೆಹಲಿ, ಸೆಪ್ಟೆಂಬರ್ 12: ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲು ಕ್ಷಣಗಣನೆ ಆರಂಭವಾಗಿದ್ದು ಯಾವುದೇ ಕ್ಷಣ ಈ ಸಂಬಂಧ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಪ್ರಕಟಣೆ ನೀಡುವ ಸಾಧ್ಯತೆಯಿದೆ.
ತಾಜಾ ವರ್ತಮಾನದ ಪ್ರಕಾರ ಬಿಜೆಪಿಯಲ್ಲಿ ಮೇಲ್ನೋಟಕ್ಕೆ ಎಲ್ಲವೂ ತಿಳಿಯಾದಂತಾಗಿದ್ದು, ಇನ್ನು 24 ಗಂಟೆಗಳಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಮುಂಬರುವ ಲೋಕಸಭಾ ಚುನಾವಣೆಗಾಗಿ ಪಕ್ಷದ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಭೀಷ್ಮ ಪಿತಾಮಹ ಎಲ್ ಕೆ ಅಡ್ವಾಣಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಯಾರೂ ಮೋದಿ ಪ್ರಧಾನಿ ಅಭ್ಯರ್ಥಿಯಾಗುವುದರ ಬಗ್ಗೆ ಕೊಂಕು ತೆಗೆದಿಲ್ಲ. ಮೋದಿ ಇನ್ನೇನು ಕೆಲವೇ ಗಂಟೆಗಳಲ್ಲಿ ಪ್ರಧಾನಿ ಅಬ್ಯರ್ಥಿಯಾಗಿ ಹೊರಹೊಮ್ಮಲಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಘೋಷಿಸಿದ್ದಾರೆ.

ಯಾರೂ ಮೋದಿ ಬಗ್ಗೆ ಅನ್ಯಮನಸ್ಕರಾಗಿಲ್ಲ. ಅಥವಾ ಯಾರೂ ಪ್ರತಿಭಟನೆ/ ವಿರೋಧ ಸೂಚಿಸಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಹಿರಿಯ ನಾಯಕರ ಮಧ್ಯೆ ಇಂದು ಸಂಜೆಗೆ ಕೊನೆಯ ಸುತ್ತಿನ ಮಾತುಕತೆ ನಡೆಯಲಿದ್ದು, ನರೇಂದ್ರ ಮೋದಿ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಯಾವುದೇ ನಾಯಕರು ಅಥವಾ ಪಕ್ಷವು ಮೋದಿ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡುವುದರ ಬಗ್ಗೆ ಷರತ್ತುಗಳನ್ನು ಹಾಕಿಲ್ಲ. ೆಲ್ಲವೂ ಸುಗಮವಾಗಿ ನೆರವೇರಲಿದೆ ಎಂದು ರಾಜನಾಥ್ ಆಶಾಭಾವ ವ್ಯಕ್ತಪಡಿಸಿದ್ದಾರೆ.












Click it and Unblock the Notifications