ಚಾಯ್ ಚಾಯ್, ಗರಮಾ ಗರಂ 'ನಮೋ' ಚಾಯ್!
ಪಾಟ್ನಾ, ಅ.4 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಒಂದಾನೊಂದು ಕಾಲದಲ್ಲಿ ಚಹಾ ಮಾರುತ್ತಿದ್ದರು ಎನ್ನುವ ಅಂಶವನ್ನು ಚುನಾವಣಾ ಪ್ರಚಾರಕ್ಕೆ ಬಿಹಾರ ಬಿಜೆಪಿ ಬಳಸಿಕೊಂಡಿದೆ. ರಸ್ತೆ ಬದಿಯ ಹಲವು ಚಹಾ ಅಂಗಡಿಗಳಿಗೆ ನಮೋ ಟೀಸ್ಟಾಲ್ ಎಂದು ನಾಮಕರಣ ಮಾಡಲಾಗಿದೆ.
ಬಿಹಾರ ರಾಜ್ಯದ ಪಾಟ್ನಾದಲ್ಲಿ ರಸ್ತೆ ಬದಿಯಲ್ಲಿನ ಚಹಾ ಅಂಗಡಿಗಳಿಗೆ ನಮೋ ಟೀಸ್ಟಾಲ್ ಎಂದು ಹೆಸರಿಡಲಾಗಿದೆ. ಮೋದಿಯ ಬಡತನದ ಹಿನ್ನೆಲೆಯನ್ನು ನೆನಪಿಸುವ ಉದ್ದೇಶದಿಂದ ಈ ಅಭಿಯಾನ ಪ್ರಾರಂಭಿಸಲಾಗಿದೆ.

ನರೇಂದ್ರ ಮೋದಿ ಬಾಲ್ಯದಲ್ಲಿ ರೈಲುಗಳಲ್ಲಿ ಚಹಾ ಮಾರುತ್ತಿದ್ದರು ಎಂಬ ಅಂಶವೇ ಟೀಸ್ಟಾಲ್ ಮಾಲೀಕರಿಗೆ ಹೆಮ್ಮೆಯ ವಿಷಯವಾಗಿದೆ. ತಮ್ಮಂತೆ ಚಹಾ ಮಾರುತ್ತಿದ್ದ ಹುಡುಗ ಪ್ರಧಾನಮಂತ್ರಿ ಅಭ್ಯರ್ಥಿಯಾಗುವ ತನಕ ಬೆಳೆದಿರುವುದು ಟೀಸ್ಟಾಲ್ ಮಾಲೀಕರಿಗೆ ಹೆಮ್ಮೆ ತಂದಿದೆ.
ಟೀಸ್ಟಾಲ್ ಮಾಲೀಕರ ವಿನಂತಿಯ ಮೇರೆಗೆ ಬಿಜೆಪಿ ನಾಯಕರು ಸ್ಟಾಲ್‌ಗಳಿಗೆ ಭೇಟಿಯಿತ್ತು ಮೋದಿಯ ನವ ಭಾರತದ ಘೋಷಣೆಗಳಿರುವ ಪೋಸ್ಟರ್ ಗಳನ್ನು ಅಲ್ಲಿ ಅಂಟಿಸುತ್ತಿದ್ದಾರೆ. ಹಲವಾರು ಅಂಗಡಿಗಳ ಮಾಲೀಕರು ತಮ್ಮ ಟೀಸ್ಟಾಲ್ ಗಳ ಹೆಸರನ್ನು ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ.
ಅ.27ರಂದು ಬಿಹಾರದ ಹೂಂಕರ್ ನಲ್ಲಿ ನರೇಂದ್ರ ಮೋದಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಆ ವೇಳೆಗೆ ಕನಿಷ್ಠ 400 ಟೀ ಸ್ಟಾಲ್‌ಗಳಿಗೆ ನಮೋ ಟೀಸ್ಟಾಲ್ ಎಂದು ಹೆಸರಿಡುವುದು ಬಿಜೆಪಿಯ ಗುರಿಯಾಗಿದೆ.
ಸದ್ಯ ಪಾಟ್ನಾದಲ್ಲಿ ಹಲವಾರು ನಮೋ ಟೀಸ್ಟಾಲ್ ಗಳು ಸ್ಥಾಪನೆ ಆಗಿವೆ. ಇದುವರೆಗೂ ನಾವು ಈ ರೀತಿಯ 21 ಟೀ ಸ್ಟಾಲ್ ಗಳಿಗೆ ಭೇಟಿ ನೀಡಿದ್ದೇವೆ ಎಂದು ಬಿಜೆಪಿ ನಾಯಕ ನಿತಿನ್ ನವೀನ್ ಹೇಳಿದ್ದಾರೆ.
ಬಿಹಾರ ರಾಜ್ಯಕ್ಕೆ ನರೇಂದ್ರ ಮೋದಿ ವಿರೋಧಿಯಾಗಿರುವ ನಿತೀಶ್ ಕುಮಾರ್ ಮುಖ್ಯಮಂತ್ರಿ. ಆದ್ದರಿಂದ ಈ ವಿಶಿಷ್ಟ ಪ್ರಚಾರ ತಂತ್ರದ ಮೂಲಕ ರಾಜ್ಯದಲ್ಲಿ ಮೋದಿ ಕುರಿತು ಪ್ರಚಾರ ಮಾಡಲು ರಾಜ್ಯ ಬಿಜೆಪಿ ಘಟಕ ತೀರ್ಮಾನಿಸಿದೆ. (ಪಿಟಿಐ)












Click it and Unblock the Notifications