Viral: ಮರುಭೂಮಿಯಲ್ಲೊಂದು ಲಿಲ್ಲಿ ಹೂವಿನ ಸಾಗರ : ಒಂದೇ ರಾತ್ರಿ ಅರಳಿ ನಿಂತವು 10 ಲಕ್ಷಕ್ಕೂ ಹೆಚ್ಚು ಪುಷ್ಪ
ಮರುಭೂಮಿ ಅಂದರೆ ಅದು ಬಂಜರು ಭೂಮಿ. ಅಲ್ಲಿ ಯಾವ ಸೌಂದರ್ಯವನ್ನು ಕಲ್ಪಿಸುವುದು ಕೂಡಾ ಸಾಧ್ಯವಾಗುವುದಿಲ್ಲ. ಎತ್ತ ನೋಡಿದರೂ ಕಣ್ಣಿಗೆ ಬೀಳುವುದು ಒಣಗಿ, ಬಿರುಕು ಬಿಟ್ಟಿರುವ ಜಾಗ. ಆದರೆ ಅಂತಹ ಮರು ಭೂಮಿಯಲ್ಲಿ ರಾಶಿ ರಾಶಿ ಹೂವುಗಳು ಅರಳಿ ನಿಂತಿವೆ ಎಂದಾದರೆ ಅದೊಂದು ಅದ್ಬುತ.
ಬಂಜರು ಭೂಮಿಯ ಅದ್ಭುತ
ಅಸಾಮಾನ್ಯ ನೈಸರ್ಗಿಕ ಅದ್ಭುತಗಳಿಗೆ ಹೆಸರಾಗಿರವ ಮರುಭೂಮಿ ನಮೀಬಿಯಾ. ಇದು ವಿಶಾಲವಾದ ಮರುಭೂಮಿ. ಈ ಮರುಭೂಮಿ ಅಸಾಮಾನ್ಯ ಘಟನೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಬಂಜರು ಭೂಮಿಯಲ್ಲಿ ಕೆಲವೊಮ್ಮೆ ಯಾರೂ ಕನಸಿನಲ್ಲಿಯೂ ಊಹಿಸಲು ಸಾಧ್ಯವಾಗದ ಅದ್ಭುತಗಳು ನಡೆದು ಹೋಗುತ್ತವೆ. ಈ ಬಾರಿಯೂ ಅಂತದ್ದೇ ಒಂದು ಅಸಾಮಾನ್ಯ ಘಟನೆಗೆ ಈ ಭೂಮಿ ಸಾಕ್ಷಿಯಾಗಿದೆ. ರಾತ್ರಿ ಬೆಳಗಾಗುವಷ್ಟರಲ್ಲಿ ಇಲ್ಲಿ ಲಕ್ಷಾಂತರ ಹೂವುಗಳು ಅರಳಿ ನಿಂತಿವೆ.

ಅರಳಿ ನಿಂತ ಲಿಲ್ಲಿ ಹೂವುಗಳು
ನಮೀಬಿಯಾದ ಸ್ಯಾಂಡ್‌ಹಾಫ್ ಜೇಡಿಮಣ್ಣಿನ ಮರುಭೂಮಿ ಪ್ರದೇಶದಲ್ಲಿ ಈ ಪವಾಡ ನಡೆದಿದೆ. ಇಲ್ಲಿನ 700 ಹೆಕ್ಟೇರ್ ಪ್ರದೇಶದಲ್ಲಿ ಲಕ್ಷ ಗಟ್ಟಲೆ ಬಿಳಿ ಮತ್ತು ಗುಲಾಬಿ ಬಣ್ಣದ ಸ್ಯಾಂಡ್‌ಹಾಫ್ ಲಿಲ್ಲಿ ಅರಳಿ ನಿಂತಿವೆ. ಒಂದು ಅಂದಾಜಿನ ಪ್ರಕಾರ ಈ ಪ್ರದೇಶದಲ್ಲಿ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಹೂವುಗಳು ಅರಳಿವೆ ಎನ್ನಲಾಗಿದೆ. ಈ ಹೂವುಗಳು ಒಮ್ಮೆ ಅರಳಿದರೆ ಒಂದು ವಾರದವರೆಗೆ ಕಂಪು ಸೂಸುತ್ತವೆ. ನಂತರ ಬಾಡಿ ಹೋಗುತ್ತವೆ.
ಪ್ರಕೃತಿಯ ಮ್ಯಾಜಿಕ್
ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು X ನಲ್ಲಿ ಈ ಅಪರೂಪದ ವಿದ್ಯಮಾನದ ಫೋಟೋವನ್ನು ಶೇರ್ ಮಾಡಿದ್ದಾರೆ. ನಮೀಬಿಯಾದ ಬಂಜರು ಭೂಮಿಯಲ್ಲಿ ರಾತ್ರೋರಾತ್ರಿ 1 ಮಿಲಿಯನ್ ಲಿಲ್ಲಿಗಳ ಸಮುದ್ರ ರೂಪುಗೊಂಡಿದೆ ಎಂದು ಹೇಳಿದ್ದಾರೆ. ಈ ಹೂವು ಕೇವಲ 5-8 ದಿನಗಳವರೆಗೆ ಕಂಪು ಸೂಸಿಕೊಂಡಿದ್ದು ನಂತರ ಮುದುಡಿಕೊಳ್ಳುತ್ತವೆ. ಪ್ರಕೃತಿಯೆನ್ನುವುದು ಒಂದು ಮ್ಯಾಜಿಕ್ ಎಂದು ಬರೆದಿದ್ದಾರೆ.
ಈ ಪವಾಡ ನಡೆದಿರುವುದು ನಮೀಬ್ ಮರುಭೂಮಿಯ ಅಂಚಿನಲ್ಲಿರುವ ಮಾಲ್ಟಾಹೋಹೆಯ ದಕ್ಷಿಣ ಪಟ್ಟಣದ ಉತ್ತರಕ್ಕೆ ಸುಮಾರು 40 ಕಿಲೋಮೀಟರ್ ದೂರದಲ್ಲಿ. 700 ಹೆಕ್ಟೇರ್ ವಿಸ್ತೀರ್ಣದ ಬೃಹತ್ ಜೇಡಿಮಣ್ಣಿನ ಮರುಭೂಮಿ ಇದು. ಸೂರ್ಯನ ಕಡು ಬಿಸಿಲಿಗೆ ಇಲ್ಲಿನ ನೆಲ ಬಿರುಕು ಬಿಟ್ಟಿರುತ್ತದೆ. ಇಲ್ಲಿ ನೀರಿನ ಮೂಲಗಳು ಕೂಡಾ ಇಲ್ಲದಿರುವ ಕಾರಣ ಗಿಡ, ಮರ ಬಳ್ಳಿ ಯಾವುದೂ ಕಾಣ ಸಿಗುವುದಿಲ್ಲ.ಇಲ್ಲಿನ ಬಿಸಿಲಿಗೆ ಗಿಡಗಳು ಒಣಗಿ ಹಲವಾರು ವರ್ಷಗಳ ಕಾಲ ಭೂಮಿಯೊಳಗೆ ಅವಿತಿರುತ್ತವೆ.
ಮರುಭೂಮಿಯಲ್ಲಿ ಹೂವಿನ ಸಾಗರ
ಈ ಪ್ರದೇಶದಲ್ಲಿ ಇತ್ತೀಚೆಗೆ ಬಿದ್ದ ಮಳೆಯ ಕಾರಣ ಈ ಪ್ರದೇಶದಲ್ಲಿ ನೀರು ನಿಂತಿದೆ. ಹಾಗಾಗಿ ಭೂಮಿಯ ಒಳಗೆ ಅವಿತಿದ್ದ ಲಿಲ್ಲಿಗಳು ಮೊಳಕೆಯೊಡೆದು ಸ್ಫೋಟಕ ವೇಗದಲ್ಲಿ ಬೆಳೆದಿದೆ. ಮರುಭೂಮಿಯಲ್ಲಿ ಒಮ್ಮೆಲೆ ಹತ್ತು ಲಕ್ಷಕ್ಕೂ ಹೆಚ್ಚು ಲಿಲ್ಲಿ ಹೂವುಗಳು ಅರಳಿ ನಿಂತಿವೆ. ಮಸುಕಾದ ಗುಲಾಬಿ ಮತ್ತು ಬಿಳಿ ದಳಗಳನ್ನು ಹೊಂದಿರುವ ಹೂವಿನ ಸಮುದ್ರವನ್ನೇ ಸೃಷ್ಟಿಸಿದೆ.
ಈ ಸಸ್ಯ ಸೌಂದರ್ಯ ಭೂಮಿಯ ಮೇಲಿನ ಅತ್ಯಂತ ಕಡಿಮೆ ಅವಧಿಯ ಅದ್ಭುತಗಳಲ್ಲಿ ಒಂದಾಗಿದೆ. ಇಲ್ಲಿ ಸೂರ್ಯನ ಬಿಸಿಲಿಗೆ ನೀರು ಬಹಳ ಬೇಗನೆ ಆವಿಯಾಗಿ ಹೋಗುತ್ತದೆ. ನೀರು ಬತ್ತುವುದರಿಂದ ಸೂಕ್ಷ್ಮವಾದ ಮೊಳಕೆಗಳು ಕೂಡಾ ಒಣಗುತ್ತವೆ. ಹಾಗಾಗಿ ಈ ಹೂವುಗಳ ಸೌಂದರ್ಯ ಕೇವಲ 5 ರಿಂದ 8 ದಿನಗಳವರೆಗೆ ಇರುತ್ತದೆ. ಹೂವುಗಳು ಒಣಗಿ ಇನ್ನೇನು ಭೂಮಿಯ ಮಡಿಲು ಸೇರಬೇಕು ಎನ್ನುವಷ್ಟರಲ್ಲಿ ಬಿಳಿ ಹೂವು ಗುಲಾಬಿ ಬಣ್ಣಕ್ಕೆ ತಿರುಗುತ್ತವೆ. ಮತ್ತೆ ಈ ಪುಷ್ಪ ಸೌಂದರ್ಯ ಕಣ್ಣಿಗೆ ಬೀಳಬೇಕು ಎಂದಾದರೆ ಇನ್ನಷ್ಟು ವರ್ಷಗಳವರೆಗೆ ಕಾಯಬೇಕಾಗುತ್ತದೆ.
In Namibia, a dry desert pan can transform overnight into a sea of over 1 million lilies. The bloom lasts just 5–8 days and then disappears, sometimes for years. Nature at its most magical. pic.twitter.com/1HGS9GkO8s
— Harsh Goenka (@hvgoenka) August 8, 2026


Click it and Unblock the Notifications
