ನಾಗಾಲ್ಯಾಂಡ್ ಹತ್ಯಾಕಾಂಡ: ಸೇನಾ ಸಿಬ್ಬಂದಿ ವಿಚಾರಣೆಗೆ ತಡೆ ನೀಡಿದ ಸುಪ್ರೀಂಕೋರ್ಟ್
ನವದೆಹಲಿ, ಜುಲೈ 20: ನಾಗಾಲ್ಯಾಂಡ್‌ನ ಸೋಮ ಜಿಲ್ಲೆಯಲ್ಲಿ 2021ರ ಡಿಸೆಂಬರ್‌ನಲ್ಲಿ ನಡೆದ 14 ನಾಗರಿಕರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ 30 ಸೇನಾ ಸಿಬ್ಬಂದಿ ವಿರುದ್ಧ ರಾಜ್ಯ ಪೊಲೀಸರು ದಾಖಲಿಸಿದ್ದ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ.
ಘಟನೆಯ ಸಂದರ್ಭದಲ್ಲಿ ಯೋಧರೊಬ್ಬರು ಸಾವನ್ನಪ್ಪಿರುವ ಬಗ್ಗೆ ಇನ್ನೂ ತನಿಖೆ ನಡೆದಿಲ್ಲ ಎಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ತಿಳಿಸಿದೆ.
ಡಿಸೆಂಬರ್ 4ರಂದು ಉಗ್ರಗಾಮಿಗಳ ಸುಳಿವು ಆಧರಿಸಿ, ನಿರಾಯುಧ ನಾಗರಿಕರನ್ನು ಭಯೋತ್ಪಾದಕರು ಎಂದು ತಪ್ಪಾಗಿ ತಿಳಿದು ಸೇನೆಯ ದಂಗೆ ನಿಗ್ರಹ ಪಡೆ ಗುಂಡು ಹಾರಿಸಿತ್ತು. ಸೇನಾಪಡೆಗಳ ಗುಂಡಿಗೆ ಬಲಿಯಾದವರಲ್ಲಿ ಒಟಿಂಗ್ ಗ್ರಾಮದವರಾಗಿದ್ದು ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮುಗಿಸಿ ಪಿಕಪ್ ವಾಹನದಲ್ಲಿ ಮನೆಗೆ ಮರಳುತ್ತಿದ್ದರು. ಘಟನೆ ದೇಶದ ಗಮನ ಸೆಳೆದಿತ್ತು. ಸೇನೆಗೆ ನೀಡಿರುವ ವಿಶೇಷಾಧಿಕಾರವನ್ನು ತಕ್ಷಣವೇ ರದ್ದುಪಡಿಸಬೇಕೆಂಬ ಕೂಗು ಕೇಳಿಬಂದಿತ್ತು.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇನಾ ಯೋಧರ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲು ವಿಶೇಷ ತನಿಖಾ ತಂಡಕ್ಕೆ ಭಾರತೀಯ ಸೇನೆಯು ಅನುಮತಿಯನ್ನು ನೀಡಿದೆ ಎಂದು ಮೂಲಗಳು ಹೇಳಿದೆ. ನಾಗಾಲ್ಯಾಂಡ್ ಹತ್ಯಾಕಾಂಡಕ್ಕೆ ಸಂಬಂಧಿಸಿ ವಿಚಾರಣೆ ಮಾಡುತ್ತಿರುವ ವಿಶೇಷ ತನಿಖಾ ತಂಡವು ಅಧಿಕಾರಿಗಳು ಈ ಹಿಂದೆ ಸೇನಾ ಕಾರ್ಯಾಚರಣೆಯಲ್ಲಿ ಭಾಗಿಯಾದ ಯೋಧರ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು.
ನಾಗಾಲ್ಯಾಂಡ್ ವಿಶೇಷ ತನಿಖಾ ತಂಡ ಅಥವಾ ಎಸ್ಐಟಿ ಅಧಿಕಾರಿಗಳು 21 ಪ್ಯಾರಾ ಸ್ಪೆಷಲ್ ಫೋರ್ಸ್ ಯೋಧರ ಹೇಳಿಕೆಯನ್ನು ಸಂಗ್ರಹಿಸಿತ್ತು. ನಾಗಾಲ್ಯಾಂಡ್ ಸಶಸ್ತ್ರ ಪಡೆಗಳ (ವಿಶೇಷ) ಅಧಿಕಾರಗಳ ಕಾಯಿದೆ ಅಥವಾ ಕೇಂದ್ರದ ಅನುಮತಿಯಿಲ್ಲದೆ ಶೋಷಣೆಯಿಂದ ಭದ್ರತಾ ಪಡೆಗಳನ್ನು ರಕ್ಷಿಸುವ AFSPA ಅಡಿಯಲ್ಲಿ ರಾಜ್ಯ ಮಟ್ಟದ ತನಿಖಾ ತಂಡದಿಂದ ಹೇಗೆ ತನಿಖೆ ಮುಂದುವರಿಸಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ನಾಗಾಲ್ಯಾಂಡ್ ಎಸ್‌ಐಟಿ ತಂಡವನ್ನು ಎಂಟು ಸದಸ್ಯರಿಂದ 22 ಅಧಿಕಾರಿಗಳಿಗೆ ವಿಸ್ತರಿಸಲಾಗಿದೆ. ಆ ಮೂಲಕ ತನಿಖೆಗೆ ವೇಗ ನೀಡಲು ಸರ್ಕಾರ ಮುಂದಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದೊಡ್ಡ ತಂಡವು ಐದು ಭಾರತೀಯ ಪೊಲೀಸ್ ಸೇವಾ ಅಧಿಕಾರಿಗಳನ್ನು ಒಳಗೊಂಡಿದೆ.
ಈ ಎಸ್‌ಐಟಿಯನ್ನು ಏಳು ತಂಡಗಳಾಗಿ ವಿಂಗಡಿಸಲಾಗಿದೆ. ಸಂಸತ್ ಅಧಿವೇಶನದ ಉಭಯ ಸದನಗಳಲ್ಲಿ ನಾಗಾಲ್ಯಾಂಡ್‌ನ ನಾಗರಿಕರ ಹತ್ಯೆ ವಿಷಯ ಸದ್ದು-ಗದ್ದಲ ಸೃಷ್ಟಿಸಿತು. ನಂತರ ಲೋಕಸಭೆ ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದರು.
ಲೋಕಸಭೆಯಲ್ಲಿ, ಅಮಿತ್ ಶಾ ಹೇಳಿಕೆ ನೀಡಿದ ನಂತರ, ಕುಪಿತಗೊಂಡ ವಿರೋಧ ಪಕ್ಷದ ಸಂಸದರು ಗೃಹ ಸಚಿವರ ಭಾಷಣದ ಅಸಮರ್ಪಕ ಸ್ವರೂಪ ಖಂಡಿಸಿ ಪ್ರತಿಭಟನೆ ನಡೆಸಿದರು. ನಾಗಾಲ್ಯಾಂಡ್ ಹಿಂಸಾಚಾರದ ಬಗ್ಗೆ ಚರ್ಚೆ ಮತ್ತು ವಿವಾದಾತ್ಮಕ AFSPA ಅನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು.
ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ, ಅಥವಾ AFSPA, ಹಲವಾರು ದಶಕಗಳಿಂದ ನಾಗಾಲ್ಯಾಂಡ್ ಮತ್ತು ಈಶಾನ್ಯದ ಭಾಗಗಳಲ್ಲಿ ಜಾರಿಯಲ್ಲಿದೆ. ಈ ಕಾಯ್ದೆಗಳು ಜಾರಿಯಲ್ಲಿರುವ ಪ್ರದೇಶಗಳಲ್ಲಿ ಭದ್ರತಾ ಪಡೆ ಸಿಬ್ಬಂದಿಯು ಯಾವುದೇ ಸ್ಥಳದಲ್ಲಿ ಕಾರ್ಯಾಚರಣೆಗಳನ್ನು ನಡೆಸಬಹುದು ಹಾಗೂ ಪೂರ್ವ ವಾರಂಟ್‌ಗಳಿಲ್ಲದೆ ಬಂಧಿಸಬಹುದು.












Click it and Unblock the Notifications